ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದ ಮಮತಾ ಬ್ಯಾನರ್ಜಿ ಆರೋಪ ಸರಿಯಲ್ಲ: ನಿರ್ಮಲಾ ಸೀತಾರಾಮನ್

|

Updated on: Jul 27, 2024 | 3:12 PM

ಸಭೆಯಲ್ಲಿ ಏನಾಯಿತು ಎಂದು ನೋಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. “ಈ ತಥಾಕಥಿತ INDI ಮೈತ್ರಿಯು ಮೈತ್ರಿಯೇ ಅಲ್ಲ ಎಂದು ನಾನು ಹೇಳಬಲ್ಲೆ. ಏಕೆಂದರೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನವನ್ನು ನೀಡಲಿಲ್ಲ. ಅವರಿಗೆ ಜನಾದೇಶವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಅವರು ಈ ರೀತಿ ತಗಾದೆ ಮಾಡುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದ ಮಮತಾ ಬ್ಯಾನರ್ಜಿ ಆರೋಪ ಸರಿಯಲ್ಲ: ನಿರ್ಮಲಾ ಸೀತಾರಾಮನ್
ಮಮತಾ ಬ್ಯಾನರ್ಜಿ
Follow us on

ದೆಹಲಿ ಜುಲೈ 27: ದೆಹಲಿಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗ (NITI Aayog) ಸಭೆಯಲ್ಲಿ ತನಗೆ ಮಾತನಾಡಲು ಬಿಡಲಿಲ್ಲ. ನಾನು ಮಾತನಾಡುತ್ತಿದ್ದಂತೆ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಸಭೆಯಿಂದ ಹೊರನಡೆದಿದ್ದಾರೆ. ಮಮತಾ ಬ್ಯಾನರ್ಜಿ ಅವರ ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮೈಕ್ ಸ್ವಿಚ್ ಆಫ್ ಆಗಿದೆ ಎಂದು ಹೇಳುವುದು ಸರಿಯಲ್ಲ. ಅವರು ಮಾತನಾಡುವ ಸಮಯ ಮುಗಿದಿದೆ ಎಂದು ಗಡಿಯಾರ ತೋರಿಸಿದೆ ಎಂದಿದ್ದಾರೆ.

ಅದೇ ವೇಳೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಫ್ಯಾಕ್ಟ್ ಚೆಕ್ (PIB ಫ್ಯಾಕ್ಟ್ ಚೆಕ್), ಮಮತಾ ಬ್ಯಾನರ್ಜಿಯವರ ಆರೋಪವು ಸರಿಯಲ್ಲ ಎಂದು ಹೇಳಿಕೊಂಡಿದೆ.


“ನೀತಿ ಆಯೋಗ್‌ನ 9 ನೇ ಆಡಳಿತ ಮಂಡಳಿ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮೈಕ್ರೊಫೋನ್ ಸ್ವಿಚ್ ಆಫ್ ಆಗಿದೆ ಎಂದು ಹೇಳಲಾಗುತ್ತಿದೆ. ಅವರ ಈ ಆರೋಪ ದಾರಿತಪ್ಪಿಸುವಂತಿದೆ. ಗಡಿಯಾರ ಅವರು ಮಾತನಾಡುವ ಸಮಯ ಮುಗಿಯಿತು ಎಂದು ತೋರಿಸಿತ್ತು. ಅದನ್ನು ಗುರುತಿಸಲು ಬೆಲ್ ಸಹ ಬಾರಿಸಲಾಗಿಲ್ಲ ”ಎಂದು ಪಿಐಬಿ ಫ್ಯಾಕ್ಟ್ ಚೆಕ್ ಅನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

“ಮುಖ್ಯಮಂತ್ರಿಗಳ ಹೆಸರಿನ ಮೊದಲ ಅಕ್ಷರದ ಪ್ರಕಾರದಲ್ಲಿ ಮಾತನಾಡಲು ಅವಕಾಶ ನೀಡಲಾಗಿದ್ದು ಪಶ್ಚಿಮ ಬಂಗಾಳದ ಸಿಎಂ ಸರದಿ ಊಟದ ನಂತರ ಬರುತ್ತಿತ್ತು. ಪಶ್ಚಿಮ ಬಂಗಾಳ ಸರ್ಕಾರದ ಅಧಿಕೃತ ಕೋರಿಕೆಯ ಮೇರೆಗೆ ಆಕೆಗೆ 7ನೇ ಸ್ಪೀಕರ್ ಆಗಿ ಅವಕಾಶ ನೀಡಲಾಯಿತು, ಏಕೆಂದರೆ ಅವರು ಬೇಗನೇ ವಾಪಸ್ ಹೋಗಬೇಕಿತ್ತು ಎಂದು ಪಿಐಬಿ ಹೇಳಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ

ಸಭೆಯಲ್ಲಿ ಏನಾಯಿತು ಎಂದು ನೋಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. “ಈ ತಥಾಕಥಿತ INDI ಮೈತ್ರಿಯು ಮೈತ್ರಿಯೇ ಅಲ್ಲ ಎಂದು ನಾನು ಹೇಳಬಲ್ಲೆ. ಏಕೆಂದರೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನವನ್ನು ನೀಡಲಿಲ್ಲ. ಅವರಿಗೆ ಜನಾದೇಶವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಅವರು ಈ ರೀತಿ ತಗಾದೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ಐದು ನಿಮಿಷಗಳ ನಂತರ ತಮ್ಮ ಮೈಕ್ ನಿಲ್ಲಿಸಲಾಯಿತು. ಆದರೆ ಎನ್‌ಡಿಎ ಆಡಳಿತದ ರಾಜ್ಯಗಳ ಇತರ ಮುಖ್ಯಮಂತ್ರಿಗಳಿಗೆ ಹೆಚ್ಚು ಅವಧಿಯವರೆಗೆ ಮಾತನಾಡಲು ಅವಕಾಶ ನೀಡಲಾಯಿತು. ಇದು ಅವಮಾನ. ನಾನು ಯಾವುದೇ ಸಭೆಗೆ ಹಾಜರಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

“ನಾನು ಸಭೆಯನ್ನು ಬಹಿಷ್ಕರಿಸಿ ಹೊರಬಂದಿದ್ದೇನೆ. (ಆಂಧ್ರಪ್ರದೇಶ ಮುಖ್ಯಮಂತ್ರಿ) ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷಗಳ ಕಾಲಾವಕಾಶ ನೀಡಲಾಯಿತು. ಅಸ್ಸಾಂ, ಗೋವಾ, ಛತ್ತೀಸ್‌ಗಢದ ಮುಖ್ಯಮಂತ್ರಿಗಳು 10-12 ನಿಮಿಷಗಳ ಕಾಲ ಮಾತನಾಡಿದರು. ಕೇವಲ ಐದು ನಿಮಿಷಗಳ ನಂತರ ನನ್ನನ್ನು ಮಾತನಾಡದಂತೆ ತಡೆಯಲಾಯಿತು. ಇದು ಅನ್ಯಾಯವಾಗಿದೆ. ವಿರೋಧ ಪಕ್ಷದಿಂದ ನಾನು ಮಾತ್ರ ಇಲ್ಲಿ ಪ್ರತಿನಿಧಿಸುತ್ತಿದ್ದೇನೆ. ಸಹಕಾರಿ ಫೆಡರಲಿಸಂ ಅನ್ನು ಬಲಪಡಿಸಬೇಕು ಎಂಬ ಹೆಚ್ಚಿನ ಆಸಕ್ತಿಯಿಂದ ನಾನು ಈ ಸಭೆಯಲ್ಲಿ ಭಾಗವಹಿಸಿದ್ದೇನೆ ಎಂದು ಸಭೆಯಿಂದ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಹೇಳಿದ್ದಾರೆ.

ಇದನ್ನೂ ಓದಿ:  NITI Aayog meet: ಮೋದಿ ನೇತೃತ್ವದಲ್ಲಿ ನೀತಿ ಆಯೋಗ ಸಭೆ; ಮಾತನಾಡಲು ಬಿಡಲಿಲ್ಲ ಎಂದು ಹೊರನಡೆದ ಮಮತಾ ಬ್ಯಾನರ್ಜಿ

ಸರ್ಕಾರವು ರಾಜಕೀಯವಾಗಿ ಪಕ್ಷಪಾತದ ಬಜೆಟ್ ಅನ್ನು ಮಂಡಿಸಿದೆ. ಕೇಂದ್ರವು ರಾಜ್ಯಗಳ ನಡುವೆ ಯಾಕೆ ತಾರತಮ್ಯ ಮಾಡುತ್ತಿದೆ ಎಂದು ತಾನು ಸಭೆಯಲ್ಲಿ ಕೇಳಿರುವುದಾಗಿ ಮಮತಾ ಹೇಳಿದ್ದಾರೆ.

“NITI ಆಯೋಗಕ್ಕೆ ಯಾವುದೇ ಹಣಕಾಸಿನ ಅಧಿಕಾರವಿಲ್ಲ. ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೆ ಹಣಕಾಸಿನ ಅಧಿಕಾರ ನೀಡಿ ಅಥವಾ ಯೋಜನಾ ಆಯೋಗವನ್ನು ಮರಳಿ ತನ್ನಿ”. ನೀವು ರಾಜಕೀಯ ಪಕ್ಷಪಾತಿ ಎಂದು ನಾನು ಹೇಳಿದೆ, ನೀವು ಬೇರೆ ಬೇರೆ ರಾಜ್ಯಗಳತ್ತ ಗಮನ ಹರಿಸುತ್ತಿಲ್ಲ. ಬಜೆಟ್ ಕೂಡ ರಾಜಕೀಯ, ಪಕ್ಷಪಾತದ ಬಜೆಟ್ ಆಗಿದೆ.ಇದನ್ನು ಪರಿಶೀಲಿಸಬೇಕು ಎಂದು ನಾನು ಅವರಿಗೆ ಹೇಳಿದೆ. ನಾನು ಎಲ್ಲಾ ರಾಜ್ಯಗಳ ಪರವಾಗಿ ಮಾತನಾಡಿದ್ದೇನೆ ಎಂದು ಮಮತಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ