
ಮಂಡಿ, ಜುಲೈ 7: ಹಿಮಾಚಲ ಪ್ರದೇಶದ (Himachal Pradesh Flood) ಮಂಡಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ನೀಡಿದ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಸಂಸದೆ ಕಂಗನಾ, ವಿಪತ್ತು ಪರಿಹಾರ ನೀಡಲು ತಮ್ಮ ಬಳಿ ಯಾವುದೇ ಸಂಪುಟ ಸ್ಥಾನವಿಲ್ಲ, ಹಣವೂ ಇಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಆಡಳಿತಾರೂಢ ಕಾಂಗ್ರೆಸ್‌ನಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಹಾಗೇ, ಮಂಡಿಯ ಜನರು ಕೂಡ ಕಂಗನಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಂಡಿಯಿಂದ ಸ್ಪರ್ಧಿಸಿ ಭಾರೀ ಬಹುಮತದಿಂದ ಜಯ ಗಳಿಸಿದ್ದ ಕಂಗನಾ ರಣಾವತ್ ಮತ್ತೊಮ್ಮೆ ವಿವಾದದಿಂದ ಸುದ್ದಿಯಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಅತ್ಯಂತ ಹಾನಿಯಾಗಿರುವ ಜಿಲ್ಲೆಗಳಲ್ಲಿ ಮಂಡಿ ಕೂಡ ಒಂದು. ಮಂಡಿ ಸಂಸದೆಯಾಗಿರುವ ಕಂಗನಾ ಪ್ರವಾಹಪೀಡಿತರಿಗೆ ಪರಿಹಾರ ಧನ ಬಿಡುಗಡೆ ಮಾಡಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ವಿಪತ್ತು ಪರಿಹಾರಕ್ಕೆ ನನ್ನ ಬಳಿ ಸಂಪುಟ ಸ್ಥಾನವಿಲ್ಲ. ನಾನು ಕೇವಲ ಸಂಸದೆಯಷ್ಟೇ. ನನ್ನ ಬಳಿ ಪರಿಹಾರ ನಿಧಿಯಿಲ್ಲ, ವಿಪತ್ತು ಪರಿಹಾರಕ್ಕೆ ಹಣವಿಲ್ಲ, ಯಾವುದೇ ಸಂಪುಟ ಹುದ್ದೆಯೂ ಇಲ್ಲ. ಸಂಸದರಿಗೆ ಸಂಸತ್ತಿಗೆ ಸೀಮಿತವಾದ ಕೆಲಸವಿದೆ” ಎಂದು ನಗುತ್ತಾ ವರದಿಗಾರರಿಗೆ ಹೇಳಿದ್ದಾರೆ.
हिमाचल प्रदेश के मंडी में बादल फटने से भारी तबाही हुई है. लोग परेशान हैं, उनका सब कुछ उजड़ गया है.
मंडी की सांसद कंगना कई दिन बाद वहां पहुंचीं और हंसते हुए कहा- ‘मैं क्या कर सकती हूं, मेरे पास कैबिनेट तो है नहीं’
कुछ तो संवेदना दिखाइए कंगना जी pic.twitter.com/btzPimukNa
— Congress (@INCIndia) July 6, 2025
“ನಾವು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಕೊಂಡಿಯಾಗಿದ್ದೇವೆ. ಕೇಂದ್ರದಿಂದ ರಾಜ್ಯಕ್ಕೆ ಯೋಜನೆಗಳನ್ನು ತಲುಪಿಸುವಲ್ಲಿ ಮತ್ತು ನಮ್ಮ ಕ್ಷೇತ್ರಗಳ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಕೇಂದ್ರದೊಂದಿಗೆ ಎತ್ತುವಲ್ಲಿ ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ನಮ್ಮ ಬಳಿ ಯಾವ ಪರಿಹಾರ ನಿಧಿಯೂ ಇಲ್ಲ” ಎಂದು ಅವರು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕಂಗನಾ ಹೇಳಿಕೆ ಟ್ರೋಲ್ ಕೂಡ ಆಗಿತ್ತು.
ಇದನ್ನೂ ಓದಿ: ‘ವಯಸ್ಸಾಗುವುದು ಕೂಡ ಒಂದು ಸಂತೋಷ’; ಕಂಗನಾಗೆ ಇಲ್ಲ ಬಿಳಿ ಕೂದಲ ಬಗ್ಗೆ ಚಿಂತೆ
ಇದಾದ ನಂತರ ತನ್ನ ಹೇಳಿಕೆಗೆ ಇಂದು ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಸಮರ್ಥನೆ ನೀಡಿದ್ದು, ನಾನೇನೂ ತಪ್ಪು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಗಳು ವಿವಾದಾತ್ಮಕವಲ್ಲ. ಅದು ನನ್ನ ಅಭಿವ್ಯಕ್ತಿಯ ಮಾರ್ಗವಾಗಿತ್ತು ಎಂದು ಅವರು ಹೇಳಿದ್ದಾರೆ. “ನನ್ನ ಕೈಯಲ್ಲಿ ಏನಿದೆ ಮತ್ತು ಏನಿಲ್ಲ ಎಂಬುದರ ಬಗ್ಗೆ ನಾನು ಜನರಿಗೆ ವಾಸ್ತವವನ್ನು ಹೇಳಿದ್ದೇನೆ. ಒಬ್ಬ ಸಂಸದೆಯಾಗಿ, ನಾವು ನಮ್ಮ ಕಳವಳಗಳನ್ನು ಎತ್ತಬೇಕು ಮತ್ತು ಹಣವನ್ನು ತರಬೇಕು. ನನಗೆ ಒಂದು ಮಹತ್ವವಿದೆ. ನಮ್ಮ ಪಕ್ಷವು ಜನರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ ಎಂದು ನಾನು ಜನರಿಗೆ ಹೇಳಿದ್ದೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಂಗನಾ ಮನೆಗೆ ಬಂತು 1 ಲಕ್ಷ ರೂಪಾಯಿ ಕರೆಂಟ್ ಬಿಲ್; ಶಾಕ್ ಆದ ನಟಿ
ಮಳೆ ಸಂಬಂಧಿತ ಘಟನೆಗಳಲ್ಲಿ ಇದುವರೆಗೆ 78 ಜನರು ಸಾವನ್ನಪ್ಪಿರುವ ಹಿಮಾಚಲ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವ ಬೇಡಿಕೆಯಿಟ್ಟು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವುದಾಗಿ ಕಂಗನಾ ರಣಾವತ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Mon, 7 July 25