ದೆಹಲಿ: ಕೊರೊನಾ ವೈರಸ್ ಸೋಂಕಿನ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂಬ ಬಗ್ಗೆ ಯಾವುದೇ ಆಧಾರವಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆ (All India Institute of Medical Sciences – AIIMS) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿನ ಎರಡೂ ಅಲೆಗಳಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಹಳೆಯ ವೈರಾಣು ಇರಬಹುದು ಅಥವಾ ಹೊಸ ರೂಪಾಂತರವೇ ಇರಬಹುದು ಅದರಿಂದ ಮಕ್ಕಳಲ್ಲಿ ತೀವ್ರತರವಾದ ಅಪಾಯ ಇದೆ ಎನ್ನಲು ಆಗುವುದಿಲ್ಲ ಎಂದು ಅವರು ಹೇಳಿದರು. ‘ವಿಶ್ವದ ಅಥವಾ ಭಾರತದಲ್ಲಿ ಸಂಗ್ರಹಿಸಿದ ಯಾವುದೇ ದತ್ತಾಂಶವನ್ನು ಗಮನಿಸಿದರೂ ಮಕ್ಕಳಿಗೆ ಹೆಚ್ಚು ಆತಂಕವಿದೆ ಎಂದು ಅನ್ನಿಸುವುದಿಲ್ಲ. 2ನೇ ಅಲೆಯಲ್ಲಿಯೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಸೋಂಕಿನ ಲಕ್ಷಣಗಳು ಅಲ್ಪಪ್ರಮಾಣದಲ್ಲಿ (ಮೈಲ್ಡ್) ಕಾಣಿಸಿಕೊಂಡಿತ್ತು. ವಿಶ್ವದ ಇತರ ದೇಶಗಳಲ್ಲಿ ಸಂಗ್ರಹಿಸಿದ್ದ ದತ್ತಾಂಶ ವಿಶ್ಲೇಷಿಸಿದಾಗ ಮಕ್ಕಳಲ್ಲಿ ತೀವ್ರತರನಾದ ಸೋಂಕು ಕಾಣಿಸಿಕೊಳ್ಳುತ್ತದೆ ಎನ್ನಲು ಆಗುವುದಿಲ್ಲ’ ಎಂದು ಅವರು ತಿಳಿಸಿದರು.
ಕೊ-ಮಾರ್ಬಿಲಿಟಿ ಸಮಸ್ಯೆ ಇಲ್ಲದಿರುವ ಸಾಕಷ್ಟು ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವೇ ಇಲ್ಲದೆ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಶೇ 60-70 ಮಕ್ಕಳಿಗೆ ಕೊ-ಮಾರ್ಬಿಲಿಟಿ ಸಮಸ್ಯೆಯಿತ್ತು. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿತ್ತು ಅಥವಾ ಕಿಮೊಥೆರಪಿ ತೆಗೆದುಕೊಳ್ಳುತ್ತಿದ್ದರು. ಆರೋಗ್ಯವಂತ ಮಕ್ಕಳಲ್ಲಿ ಅಲ್ಪಪ್ರಮಾಣದ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರು ಆಸ್ಪತ್ರೆಗೆ ದಾಖಲಿಸುವ ಅಗತ್ಯವೇ ಇಲ್ಲದೆ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ದೇಶದಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗವನ್ನು ಬಲಪಡಿಸಲಾಗುತ್ತಿದೆ. ಆಂಧ್ರ ಪ್ರದೇಶದಲ್ಲಿ 5 ವರ್ಷಕ್ಕೂ ಚಿಕ್ಕಮಕ್ಕಳಿರುವ ತಾಯಂದಿರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲಾಗುತ್ತಿದೆ. ಉತ್ತರ ಪ್ರದೇಶದ ನೊಯಿಡಾದಲ್ಲಿಯೂ ಇಂಥದ್ದೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲಿ ಮತ್ತೊಂದು ಕೊವಿಡ್ ಅಲೆ ತಡೆಯಲು ನಾವೆಲ್ಲರೂ ಸೂಕ್ತ ಜೀವನಪದ್ಧತಿ ಅಳವಡಿಸಿಕೊಳ್ಳಬೇಕು. ತಪ್ಪು ಮಾಹಿತಿಗೆ ಸೊಪ್ಪು ಹಾಕಬೇಡಿ. ಜನಸಂದಣಿ ಇರುವ ಸ್ಥಳಗಳಿಂದ ದೂರವಿರಿ. ಸೋಂಕು ಸರಣಿಯನ್ನು ತುಂಡರಿಸಲು ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ಮಾಡಿದರು.
(No Data to Confirm we will have serious Covid infection in children in future says AIIMS director Dr Randeep Guleria)
ಇದನ್ನೂ ಓದಿ: 12 ರಾಜ್ಯಗಳ ಒತ್ತಾಯದಿಂದ ಹೊಸ ಲಸಿಕೆ ಖರೀದಿ ನೀತಿ ಜಾರಿ: ನೀತಿ ಆಯೋಗ ಸದಸ್ಯ ವಿ.ಕೆ.ಪೌಲ್
ಇದನ್ನೂ ಓದಿ: ಕೊರೊನಾ ಲಸಿಕೆ ಖರೀದಿ ನೀತಿಯಲ್ಲಿ ಬದಲಾವಣೆ: ಸರ್ಕಾರಕ್ಕೆಷ್ಟು ವೆಚ್ಚ? ಕಂಪನಿಗಳ ಆದಾಯ ಎಷ್ಟು ಖೋತಾ? ಇಲ್ಲಿದೆ ಲೆಕ್ಕಾಚಾರ
Published On - 7:53 pm, Tue, 8 June 21