ಸುಪ್ರೀಂ ಕೋರ್ಟ್ ಬಗ್ಗೆ ಯಾವುದೇ ಭರವಸೆ ಉಳಿದಿಲ್ಲ; ಹಿರಿಯ ವಕೀಲ ಕಪಿಲ್ ಸಿಬಲ್ ಅಸಮಾಧಾನ
ಸುಪ್ರೀಂ ಕೋರ್ಟ್‌ನಿಂದ ನಿಮಗೆ ಪರಿಹಾರ ಸಿಗುತ್ತದೆ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ. ಸುಪ್ರೀಂ ಕೋರ್ಟ್‌ನಲ್ಲಿ 50 ವರ್ಷಗಳ ಪ್ರಾಕ್ಟಿಸ್ ಪೂರ್ಣಗೊಳಿಸಿದ ನಂತರ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ನವದೆಹಲಿ: ಸುಪ್ರೀಂ ಕೋರ್ಟ್ ಮೇಲೆ ಯಾವುದೇ ಭರವಸೆ ಉಳಿದಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ವಿರುದ್ಧ ಕಪಿಲ್ ಸಿಬಲ್ (Kapil Sibal) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲರಾಗಿರುವ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಬಗೆಗಿನ ಭರವಸೆ ಕಡಿಮೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ಕೆಲವು ತೀರ್ಪುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆಗೆ ವಕೀಲರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸುಪ್ರೀಂ ಕೋರ್ಟ್‌ನಿಂದ ನಿಮಗೆ ಪರಿಹಾರ ಸಿಗುತ್ತದೆ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ. ಸುಪ್ರೀಂ ಕೋರ್ಟ್‌ನಲ್ಲಿ 50 ವರ್ಷಗಳ ಪ್ರಾಕ್ಟಿಸ್ ಪೂರ್ಣಗೊಳಿಸಿದ ನಂತರ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಬಂದರೂ ಅದು ನೆಲದ ವಾಸ್ತವತೆಯನ್ನು ಬದಲಾಯಿಸುವುದಿಲ್ಲ. ಈ ವರ್ಷ ನಾನು ಸುಪ್ರೀಂ ಕೋರ್ಟ್‌ನಲ್ಲಿ 50 ವರ್ಷಗಳ ಅಭ್ಯಾಸವನ್ನು ಪೂರ್ಣಗೊಳಿಸುತ್ತಿದ್ದೇನೆ. ಈ 50 ವರ್ಷಗಳ ನಂತರವೂ ನನಗೆ ಸುಪ್ರೀಂ ಕೋರ್ಟ್ ಬಗ್ಗೆ ಯಾವುದೇ ಭರವಸೆ ಇಲ್ಲ ಎಂದೆನಿಸುತ್ತಿದೆ ಎಂದಿದ್ದಾರೆ.
ನೀವು ಸುಪ್ರೀಂ ಕೋರ್ಟ್ ನೀಡಿದ ಪ್ರಗತಿಪರ ತೀರ್ಪುಗಳ ಬಗ್ಗೆ ಮಾತನಾಡುತ್ತೀರಿ. ಆದರೆ ನೆಲದ ಮಟ್ಟದಲ್ಲಿ ಏನಾಗುತ್ತದೆ ಎಂಬುದರಲ್ಲಿ ಭಾರೀ ವ್ಯತ್ಯಾಸವಿದೆ. ಸುಪ್ರೀಂ ಕೋರ್ಟ್ ಗೌಪ್ಯತೆಯ ಬಗ್ಗೆ ತೀರ್ಪು ನೀಡಿತು. ಆದರೆ, ಇಡಿ ಅಧಿಕಾರಿಗಳು ನಿಮ್ಮ ಮನೆಗೆ ಬರುತ್ತಾರೆ. ಅಲ್ಲಿಗೆ ನಿಮ್ಮ ಗೌಪ್ಯತೆ ಏನಾಯಿತು? ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಬಲ ಬೇಕಿದ್ದರೆ ಈ ಷರತ್ತು ಒಪ್ಪಿಕೊಳ್ಳಬೇಕು: ಕಪಿಲ್ ಸಿಬಲ್ಗೆ ಟಿಎಂಸಿ ಬೆಂಬಲ ಸಿಗದಿರಲು ಮಮತಾ ವಿಧಿಸಿದ ಈ ಷರತ್ತು ಕಾರಣ
ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಧರ್ಮ ಸಂಸದ್ ವಿಷಯವನ್ನು ಪ್ರಸ್ತಾಪಿಸಿದ ಅವರು ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಆಲಿಸಿದೆ, ಸರ್ಕಾರಗಳಿಂದ ಈ ಕುರಿತು ಪ್ರತಿಕ್ರಿಯೆಯನ್ನು ಕೇಳಿದೆ ಎಂದು ಹೇಳಿದ್ದಾರೆ. ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಬಂಧಿಸಿದರೂ 1-2 ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಎರಡು ವಾರಗಳ ಅಂತರದ ನಂತರ ಮತ್ತೆ ಧರ್ಮ ಸಂಸದ್ ಸಭೆಗಳನ್ನು ಮುಂದುವರಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ವಿಶೇಷ ತನಿಖಾ ತಂಡ (SIT) ನೀಡಿದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಹೆಂಡತಿ ಜಾಕಿಯಾ ಜಫ್ರಿ ಅವರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ್ದಕ್ಕಾಗಿ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಅನ್ನು ಟೀಕಿಸಿದ್ದಾರೆ.