ಬೆಂಬಲ ಬೇಕಿದ್ದರೆ ಈ ಷರತ್ತು ಒಪ್ಪಿಕೊಳ್ಳಬೇಕು: ಕಪಿಲ್ ಸಿಬಲ್ಗೆ ಟಿಎಂಸಿ ಬೆಂಬಲ ಸಿಗದಿರಲು ಮಮತಾ ವಿಧಿಸಿದ ಈ ಷರತ್ತು ಕಾರಣ
ಮಾತುಕತೆ ವೇಳೆ ಮಮತಾ ಬ್ಯಾನರ್ಜಿ ಮತ್ತು ಕಪಿಲ್ ಸಿಬಲ್ ಪರಸ್ಪರ ತಮ್ಮ ನಿಲುವುಗಳಿಗೆ ಬದ್ಧರಾಗಿದ್ದ ಕಾರಣ ಕಪಿಲ್ ಸಿಬಲ್ಗೆ ಟಿಎಂಸಿ ಬೆಂಬಲದ ಖಾತ್ರಿ ಸಿಗಲಿಲ್ಲ ಎಂದು ಮೂಲಗಳು ಹೇಳಿವೆ.
ದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಸುಪ್ರೀಂಕೋರ್ಟ್ನ ಹಿರಿಯ ವಕೀಲ ಕಪಿಲ್ ಸಿಬಲ್ (Kapill Sibal) ಈ ಬಾರಿ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸಮಾಜವಾದಿ ಪಕ್ಷದಿಂದ ಬೆಂಬಲ ಸಿಗುವ ಮೊದಲು ಕಪಿಲ್ ಸಿಬಲ್ ತೃಣಮೂಲ ಕಾಂಗ್ರೆಸ್ನ (Trinamool Congress – TMC) ಮಮತಾ ಬ್ಯಾನರ್ಜಿ (Mamata Banerjee) ಅವರ ಬೆಂಬಲ ಕೋರಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಮಾತುಕತೆ ವೇಳೆ ಮಮತಾ ಬ್ಯಾನರ್ಜಿ ಮತ್ತು ಕಪಿಲ್ ಸಿಬಲ್ ಪರಸ್ಪರ ತಮ್ಮ ನಿಲುವುಗಳಿಗೆ ಬದ್ಧರಾಗಿದ್ದ ಕಾರಣ ಕಪಿಲ್ ಸಿಬಲ್ಗೆ ಟಿಎಂಸಿ ಬೆಂಬಲದ ಖಾತ್ರಿ ಸಿಗಲಿಲ್ಲ ಎಂದು ಮೂಲಗಳು ಹೇಳಿವೆ.
ಮೇ 16ರಂದೇ ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದಾಗಿ ಕಪಿಲ್ ಸಿಬಲ್ ಹೇಳಿದ್ದರು. ಕಾಂಗ್ರೆಸ್ನಿಂದ ದೂರವಾದ ನಂತರ ಬೆಂಬಲ ಕೋರಿ ವಿವಿಧ ಪಕ್ಷಗಳ ಕದತಟ್ಟಿದ್ದ ಕಪಿಲ್ ಸಿಬಲ್ ಕೊನೆಗೆ ಸಮಾಜವಾದಿ ಪಕ್ಷದ ಬೆಂಬಲ ದಕ್ಕಿಸಿಕೊಂಡಿದ್ದರು. ಆದರೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಬೆಂಬಲ ಖಾತ್ರಿಯಾಗುವ ಮೊದಲು ಅವರು ಪಶ್ಚಿಮ ಬಂಗಾಳದ ಕಾಳಿಘಾಟ್ಗೆ ಭೇಟಿ ನೀಡಿ, ಮಮತಾ ಬ್ಯಾನರ್ಜಿ ಅವರ ಬೆಂಬಲ ಯಾಚಿಸಿದ್ದರು.
‘ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಸೇರಿದರೆ ಮಾತ್ರ ಬೆಂಬಲ ನೀಡುವುದಾಗಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದರಿಂದ ಅವರು ಇತರ ಸಾಧ್ಯತೆಗಳನ್ನು ಯೋಚಿಸಬೇಕಾಯಿತು. ಆದರೆ ಕಪಿಲ್ ಸಿಬಲ್ ಅವರಿಗೆ ಈ ಹಂತದಲ್ಲಿ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಲು ಇಷ್ಟವಿರಲಿಲ್ಲ. ಕಪಿಲ್ ಸಿಬಲ್ ಅವರು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿಯಾದರಾದರೂ ಮಾತುಕತೆ ಮುಂದೆ ಸಾಗಲಿಲ್ಲ. ಟಿಎಂಸಿ ಜೊತೆಗಿನ ಮಾತುಕತೆ ದಡಮುಟ್ಟದ ಕಾರಣ ಅಖಿಲೇಶ್ ಯಾದವ್ ಅವರನ್ನು ಸಂಪರ್ಕಿಸಲು ಕಪಿಲ್ ಸಿಬಲ್ ನಿರ್ಧರಿಸಿದರು. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಬೆಂಬಲ ಪಡೆದುಕೊಳ್ಳಲು ಸಮಾಜವಾದಿ ಪಕ್ಷ ಸೇರಬೇಕಿಲ್ಲ ಎಂದೂ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದರು. ಈ ಬೆಳವಣಿಗೆಗಳ ನಂತರ ಕಪಿಲ್ ಸಿಬಲ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದರು.
ಟಿಎಂಸಿ ಸೇರ್ಪಡೆ ಕುರಿತು ಕಪಿಲ್ ಸಿಬಲ್ ಮತ್ತು ಮಮತಾ ಬ್ಯಾನರ್ಜಿ ನಡುವೆ ಹಲವು ತಿಂಗಳುಗಳಿಂದ ಮಾತುಕತೆ ನಡೆಯುತ್ತಲೇ ಇದೆ. ಕಾಂಗ್ರೆಸ್ ಟಿಕೆಟ್ ಮೇಲೆ ರಾಜ್ಯಸಭೆಗೆ ಆಯ್ಕೆಯಾಗಲು ನನಗೆ ಇಷ್ಟವಿಲ್ಲ, ನನಗೆ ತೃಣಮೂಲ ಕಾಂಗ್ರೆಸ್ನ ಬೆಂಬಲ ಸಿಗಬಹುದೇ ಎಂದು ಟಿಎಂಸಿ ರಾಜ್ಯಸಭೆ ಸದಸ್ಯರೊಬ್ಬರನ್ನು ಕೇಳಿದ್ದರು. ‘ನಾನು ಟಿಎಂಸಿ ಸೇರುವುದಿಲ್ಲ, ಆದರೆ ನನಗೆ ಪಕ್ಷದ ಬೆಂಬಲ ಸಿಗಬೇಕು. ಇದು ಸಾಧ್ಯವೇ’ ಎಂದು ಅವರು ತಮ್ಮ ಪ್ರಶ್ನೆಯನ್ನು ಸ್ಪಷ್ಟಪಡಿಸಿದ್ದರು. ಆದರೆ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಬೇಕಾದ ಸಂದರ್ಭದಲ್ಲಿ ಮಮತಾ ಮತ್ತು ಅಭಿಷೇಕ್ ಬ್ಯಾನರ್ಜಿ, ‘ನೇರವಾಗಿ ಟಿಎಂಸಿಗೆ ಸೇರ್ಪಡೆಯಾಗದಿದ್ದರೆ ಪಕ್ಷದ ಬೆಂಬಲ ಸಿಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ‘ನಾನು ನೇರವಾಗಿ ಟಿಎಂಸಿಗೆ ಸೇರಲು ಆಗುವುದಿಲ್ಲ. ಆದರೆ ಸ್ವತಂತ್ರ ಧ್ವನಿಯಾಗಿ ಸಂಸತ್ತಿನಲ್ಲಿ ಅತಿ ಮುಖ್ಯ ವಿಚಾರವೊಂದನ್ನು ಮಾತನಾಡಬೇಕಿದೆ’ ಎಂದು ಸಿಬಲ್ ಹೇಳಿದ್ದರು.
ಸುಪ್ರೀಂಕೋರ್ಟ್ನ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರಿಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸೌಹಾರ್ದ ಸಂಬಂಧವಿದೆ. ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಅವರು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಿಎಂಸಿ ಪಕ್ಷದ ಪರವಾಗಿ ದ ಮಂಡಿಸಿದ್ದಾರೆ. ಕಪಿಲ್ ಸಿಬಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ಗೆ ಹಿನ್ನಡೆ ಉಂಟು ಮಾಡಬೇಕು ಎನ್ನುವುದು ಮಮತಾ ಬ್ಯಾನರ್ಜಿ ಅವರ ಉದ್ದೇಶವಾಗಿತ್ತು. ಆದರೆ ಇಬ್ಬರೂ ನಾಯಕರು ತಮ್ಮ ನಿಲುವುಗಳಿಗೆ ಅಂಟಿಕೊಂಡಿದ್ದರಿಂದ ಈ ಹಂತದಲ್ಲಿ ಕಪಿಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಾಧ್ಯವಾಗಲಿಲ್ಲ.
ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ
ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಬುಧವಾರ (ಮೇ 25) ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಕಪಿಲ್ ಸಿಬಲ್ ‘ನಾನು ಮೇ 16 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಂಸತ್ನಲ್ಲಿ ಸ್ವತಂತ್ರ ದನಿಯ ಅಗತ್ಯವಿದೆ. ಸ್ವತಂತ್ರವಾಗಿ ದನಿಯೆತ್ತಿದರೆ ಮಾತ್ರ ಇದು ರಾಜಕೀಯ ಪಕ್ಷದ್ದು ಅಲ್ಲ ಎಂದು ಜನರು ನಂಬುತ್ತಾರೆ ಎಂದು ಸುದ್ದಿಗಾರರರೊಂದಿಗೆ ಮಾತನಾಡಿದ ಸಿಬಲ್ ಹೇಳಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾದ ಸಿಬಲ್ ಕಾಂಗ್ರೆಸ್ ಪಕ್ಷದ ನಾಯಕತ್ವ ಮತ್ತು ಸಂಘಟನೆಯನ್ನು ಟೀಕಿಸಿದ್ದ ಬಂಡಾಯಗಾರರ ಗುಂಪಾದ ಜಿ-23ಯ ಸದಸ್ಯರಾಗಿದ್ದಾರೆ. ಇತ್ತೀಚಿನ ವಾರಗಳಲ್ಲಿ ಗಾಂಧಿ ನೇತೃತ್ವದ ಬಗ್ಗೆ ಕಪಿಲ್ ಟೀಕಿಸಿದ್ದರು. ಇತ್ತೀಚೆಗೆ ಅವರು ಲಖನೌದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಸುಪ್ರೀಂಕೋರ್ಟ್ ನಲ್ಲಿ ಸಮಾಜವಾದಿ ಪಕ್ಷದ ಆಜಂ ಖಾನ್ ಅವರ ಪ್ರಕರಣವನ್ನೂ ಇದೇ ಕಪಿಲ್ ಸಿಬಲ್ ವಾದಿಸಿದ್ದರು. 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಆಜಂ ಖಾನ್ ಗೆ ಕೆಲವು ದಿನಗಳ ಹಿಂದೆಯಷ್ಟೇ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಮುಂದಿನ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ 11 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಹಿರಿಯ ವಕೀಲರಾಗಿ ಸಿಬಲ್ ಅವರ ಯಾದವ್ ಕುಟುಂಬಕ್ಕೆ ತುಂಬಾ ಆಪ್ತರಾಗಿದ್ದಾರೆ. ಅಖಿಲೇಶ್ ಯಾದವ್ ಅವರಿಗೆ ಪಕ್ಷದ ಚಿಹ್ನೆಯಾಗಿ ಸೈಕಲ್ ಚಿಹ್ನೆ ಬೇಕು ಎಂದು 2017 ಜನವರಿಯಲ್ಲಿ ಸಿಬಲ್ ವಾದಿಸಿದ್ದರು. ಇದರ ಫಲವಾಗಿ ಚುನಾವಣಾ ಆಯೋಗ ಅಖಿಲೇಶ್ ಗೆ ಸೈಕಲ್ ಚಿಹ್ನೆ ನೀಡಿತ್ತು.
ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಕಪಿಲ್ ಸಿಬಲ್ ಈಗ ತಾನೇ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅವರು ಖ್ಯಾತ ವಕೀಲರು ಮತ್ತು ರಾಜಕೀಯ ಧುರೀಣ. ಅವರು ಪ್ರಧಾನ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಮುಂದಿಡುತ್ತಿದ್ದರು. ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವರು ಇದನ್ನೆಲ್ಲ ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ