‘ಕುಡ್ಲ ನಮ್ದು ಊರುʼ ಸಿನಿಮಾದಲ್ಲಿ ಕರಾವಳಿಯ ಪ್ರತಿಭೆಗಳ ಸಂಗಮ
‘ಕುಡ್ಲ ನಮ್ದು ಊರುʼ ಸಿನಿಮಾದ ಟ್ರೇಲರ್, ಆಡಿಯೋ ಬಿಡುಗಡೆ ಆಗಿದೆ. 2025ರ ಆರಂಭದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ವಿಶೇಷ ಏನೆಂದರೆ, ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಕರಾವಳಿ ಭಾಗದ ಪ್ರತಿಭೆಗಳೇ ಸೇರಿಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಹುತೇಕ ಶೂಟಿಂಗ್ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಪ್ರತಿಭೆಗಳೇ ಒಟ್ಟಾಗಿ ನಿರ್ಮಿಸಿದ ‘ಕುಡ್ಲ ನಮ್ದು ಊರುʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗ ಸಿನಿಮಾಗೆ ಕೊನೇ ಹಂತದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಈ ಹಂತದಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಟ್ರೇಲರ್ ಹಾಗೂ ಆಡಿಯೋ ರಿಲೀಸ್ ಮಾಡಲಾಗಿದೆ. ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾಮ ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ. ವಿಶ್ವನಾಥ್, ನಟ ಚೇತನ್ ರಾಜ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
‘ಕುಡ್ಲ ನಮ್ದು ಊರುʼ ಸಿನಿಮಾವನ್ನು ‘ಕೃತಾರ್ಥ ಪ್ರೊಡಕ್ಷನ್ಸ್ʼ ಬ್ಯಾನರ್ ಮೂಲಕ ದುರ್ಗಾಪ್ರಸಾದ್ (ಅಲೋಕ್) ಹಾಗೂ ಆರ್ಯ ಡಿ. ಕೆ ಅವರು ಒಟ್ಟಾಗಿ ನಿರ್ದೇಶನ ಮಾಡಿದ್ದಾರೆ. ಯುವ ನಟ ದುರ್ಗಾಪ್ರಸಾದ್ ಅವರು ‘ಕುಡ್ಲ ನಮ್ದು ಊರುʼ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ರಮೇಶ್, ಸ್ವರಾಜ್ ಶೆಟ್ಟಿ, ಶ್ರೇಯಾ ಶೆಟ್ಟಿ, ನಯನಾ ಸಾಲಿಯಾನ್, ಅನಿಕಾ ಶೆಟ್ಟಿ, ನಿರೀಕ್ಷಾ ಶೆಟ್ಟಿ, ಪ್ರಜ್ವಲ್, ದಿಲೀಪ್ ಕಾರ್ಕಳ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ನಾಯಕ ನಟ/ನಿರ್ದೇಶಕ ದುರ್ಗಾಪ್ರಸಾದ್ ಅವರು ‘ಕುಡ್ಲ ನಮ್ದು ಊರುʼ ಸಿನಿಮಾದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಬಳಿಕ ಮಾತನಾಡಿದರು. ‘ಇದೊಂದು ಅಪ್ಪಟ ದಕ್ಷಿಣ ಕನ್ನಡದ ಕರಾವಳಿ ಸೊಗಡಿನ ಸಿನಿಮಾ. ಇಡೀ ಚಿತ್ರವನ್ನು ಕರಾವಳಿ ಹಾಗೂ ಅಲ್ಲಿನ ಜನ-ಜೀವನವನ್ನು ಹಿನ್ನೆಲೆಯಾಗಿಟ್ಟುಕೊಂಡು ಮಾಡಲಾಗಿದೆ. ಕರಾವಳಿ ಭಾಗದ ಒಂದಷ್ಟು ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ರೂಪದಲ್ಲಿ ಹೇಳಲಾಗುತ್ತಿದೆ. ಇದು ಕರಾವಳಿಯ ಕಥೆಯಾಗಿದ್ದರೂ ಕರ್ನಾಟಕದ ಎಲ್ಲ ಭಾಗದ ಜನರಿಗೂ ತಲುಪುವಂತಿದೆ. ಆದ್ದರಿಂದ ಈ ಚಿತ್ರವನ್ನು ತುಳು ಭಾಷೆಯ ಬದಲಿಗೆ ಕನ್ನಡ ಭಾಷೆಯಲ್ಲೇ ನಿರ್ಮಿಸಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ: ಸಂಭಾವನೆಯಲ್ಲಿ ದಾಖಲೆ ಬರೆದ ಯಶ್, ಭಾರತದ ದುಬಾರಿ ವಿಲನ್
ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ ನಟಿ ಶ್ರೇಯಾ ಶೆಟ್ಟಿ ಮಾತನಾಡಿ, ‘ಈ ಚಿತ್ರದಲ್ಲಿ ನಾನು ನಾಯಕಿಯ ಸೋದರಿಯ ಪಾತ್ರ ಮಾಡಿದ್ದೇನೆ. ಈ ಚಿತ್ರದಿಂದ ಸಾಕಷ್ಟು ಕಲಿತಿದ್ದೇನೆ. ಸಾಕಷ್ಟು ನಿರೀಕ್ಷೆ ಇದೆʼ ಎಂದರು. ಈ ಚಿತ್ರದಲ್ಲಿ 3 ಹಾಡುಗಳಿದ್ದು, ನಿತಿನ್ ಶಿವರಾಮ್ ಅವರು ಸಂಗೀತ ನೀಡಿದ್ದಾರೆ. ಶ್ರೀಶಾಸ್ತ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಮಯೂರ್ ಆರ್. ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದಾರೆ. ನಿಶಿತ್ ಪೂಜಾರಿ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




