ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೇನೂ ನಷ್ಟವಿಲ್ಲ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಲೇವಡಿ

ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಿರುವುದು ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. 'ಅಣ್ಣಾಮಲೈ ಮಕ್ಕಳ್ ಇಯಕ್ಕಂ' ಎಂಬ ರಾಜಕೀಯ ಚಳುವಳಿ ಆರಂಭಿಸುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಈ ನಡುವೆ, ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಣ್ಣಾಮಲೈ ಅವರ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದಿದ್ದಾರೆ.

ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೇನೂ ನಷ್ಟವಿಲ್ಲ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಲೇವಡಿ
Annamalai With Pm Modi
Image Credit source: PTI

Updated on: Jun 06, 2026 | 8:12 PM

ಚೆನ್ನೈ, ಜೂನ್ 5: ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (Annamalai) ಅವರು ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ ಬೆನ್ನಲ್ಲೇ, ರಾಜ್ಯ ಬಿಜೆಪಿ ನಾಯಕತ್ವದಿಂದ ಅಚ್ಚರಿಯ ಮತ್ತು ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. ಅಣ್ಣಾಮಲೈ ಅವರ ರಾಜೀನಾಮೆಯಿಂದ ತಮಿಳುನಾಡಿನಲ್ಲಿ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಪಕ್ಷವು ಎಂದಿನಂತೆ ಸದೃಢವಾಗಿ ಮುನ್ನಡೆಯಲಿದೆ ಎಂದು ತಮಿಳುನಾಡು ಬಿಜೆಪಿಯ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಹೇಳಿಕೆ ನೀಡಿದ್ದಾರೆ.

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ತೊರೆದು ಹೊಸ ಚಳವಳಿ ಶುರು ಮಾಡಿದ ಅಣ್ಣಾಮಲೈ
  • ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದ ಬಿಜೆಪಿ
  • ತಮಿಳುನಾಡಿನ ಬಿಜೆಪಿ ನಾಯಕರ ಭಿನ್ನಾಭಿಪ್ರಾಯ ಸ್ಫೋಟ

ಅಣ್ಣಾಮಲೈ ಅವರ ರಾಜೀನಾಮೆ ವದಂತಿಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿಯ ಮುಖ್ಯಸ್ಥ ನೈನಾರ್ ನಾಗೇಂದ್ರನ್, “ಬಿಜೆಪಿ ಎಂಬುದು ಕೇವಲ ಒಬ್ಬ ವ್ಯಕ್ತಿಯ ಸುತ್ತ ನಿರ್ಮಾಣವಾಗಿರುವ ಪಕ್ಷವಲ್ಲ. ಇದು ಸಿದ್ದಾಂತ ಮತ್ತು ಲಕ್ಷಾಂತರ ಕಾರ್ಯಕರ್ತರ ಬಲದ ಮೇಲೆ ನಿಂತಿರುವ ರಾಷ್ಟ್ರೀಯ ಪಕ್ಷ. ಯಾರೋ ಒಬ್ಬರು ಹೋದ ತಕ್ಷಣ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.


ರಾಜಕೀಯದಲ್ಲಿ ನಾಯಕರು ಬರುವುದು ಮತ್ತು ಹೋಗುವುದು ಸಹಜ ಪ್ರಕ್ರಿಯೆ. ಅಣ್ಣಾಮಲೈ ಅವರ ನಿರ್ಧಾರ ಅವರ ವೈಯಕ್ತಿಕ ಆಯ್ಕೆಯಾಗಿದೆ. ಪಕ್ಷವು ತಮಿಳುನಾಡಿನಲ್ಲಿ ಈಗಾಗಲೇ ಪ್ರಬಲ ತಳಹದಿಯನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಮತ್ತೊಬ್ಬ ಸಮರ್ಥ ನಾಯಕನ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೆ ಅಣ್ಣಾಮಲೈ ಹುಟ್ಟುಹಬ್ಬ: ಕರ್ನಾಟಕದಲ್ಲಿ ವೃತ್ತಿಜೀವನ, ರಾಜೀನಾಮೆ ಮತ್ತು ಬಿಜೆಪಿ ಪಯಣದ ಸಮಗ್ರ ನೋಟ

ಅಣ್ಣಾಮಲೈ ಅವರ ನಿರ್ಗಮನವನ್ನು ತಮಿಳುನಾಡು ಬಿಜೆಪಿಯ ಒಂದು ವರ್ಗದ ನಾಯಕರು ಅತ್ಯಂತ ಹಗುರವಾಗಿ ಪರಿಗಣಿಸಿರುವುದು ಪಕ್ಷದೊಳಗಿದ್ದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತದೆ. ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿ ಮತ್ತು ಏಕಪಕ್ಷೀಯ ನಿರ್ಧಾರಗಳ ಬಗ್ಗೆ ರಾಜ್ಯದ ಹಿರಿಯ ನಾಯಕರಲ್ಲಿ ಮೊದಲಿನಿಂದಲೂ ಅಸಮಾಧಾನವಿತ್ತು ಎನ್ನಲಾಗಿದ್ದು, ಅದು ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿತ್ತು.


ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ ‘ಅಣ್ಣಾಮಲೈ ಮಕ್ಕಳ್ ಇಯಕ್ಕಂ’ (AMI) ಎಂಬ ಹೊಸ ರಾಜಕೀಯ ಚಳುವಳಿಯನ್ನು ಆರಂಭಿಸಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 3,000ಕ್ಕೂ ಹೆಚ್ಚು ಜನರು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, “ಜನರ ಬೆಂಬಲವು ನನ್ನ ನಿರೀಕ್ಷೆಯನ್ನು ಮೀರಿದ್ದು, ಈ ಉಪಕ್ರಮದ ಮೇಲಿರುವ ಸಾರ್ವಜನಿಕ ಹಿತಾಸಕ್ತಿಯನ್ನು ಇದು ಪ್ರತಿಬಿಂಬಿಸುತ್ತದೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಹೊಸ ಪಕ್ಷವು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: K Annamalai: ಹೊಸ ರಾಜಕೀಯ ಆಂದೋಲನ ಆರಂಭಿಸುವುದಾಗಿ ಘೋಷಿಸಿದ ಕೆ ಅಣ್ಣಾಮಲೈ, ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ

ತಮ್ಮ ಸಾಮಾಜಿಕ ಮಾಧ್ಯಮದ ಭಾಷಣದಲ್ಲಿ ಅಣ್ಣಾಮಲೈ ಅವರು, “ನಾನು ಪಕ್ಷದಿಂದ ದೂರ ಸರಿಯುವ ನಿರ್ಧಾರವನ್ನು ಮೊದಲ ಬಾರಿಗೆ 2025ರ ಡಿಸೆಂಬರ್ 4ರಂದೇ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದೆ. ಆದರೆ, ಚುನಾವಣೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಪೂರ್ಣಗೊಳಿಸುವಂತೆ ಪಕ್ಷವು ಕೇಳಿಕೊಂಡಿದ್ದರಿಂದ ನಾನು ಅಲ್ಲಿಯವರೆಗೆ ಮುಂದುವರಿದಿದ್ದೆ. ಆ ಎಲ್ಲಾ ಕರ್ತವ್ಯಗಳನ್ನು ಮುಗಿಸಿದ ನಂತರವೇ ಈಗ ಅಧಿಕೃತವಾಗಿ ಹೊರಬಂದಿದ್ದೇನೆ” ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿಯ ಭವಿಷ್ಯದ ದಿಕ್ಕು ಮತ್ತು ರಾಜಕೀಯ ಕಾರ್ಯತಂತ್ರದ ಕುರಿತು ಉಂಟಾದ ಭಿನ್ನಾಭಿಪ್ರಾಯಗಳ ನಡುವೆ ಪಕ್ಷಕ್ಕೆ ಯಾವುದೇ ತೊಂದರೆ ಅಥವಾ ಹೊರೆಯಾಗಬಾರದು ಎಂಬ ಕಾರಣಕ್ಕೆ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅಣ್ಣಾಮಲೈ ವಿವರಿಸಿದ್ದಾರೆ. “ನಾನು ಪಕ್ಷದಿಂದ ಹೊರಬಂದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಅತ್ಯುನ್ನತ ಗೌರವವಿದೆ. ನನ್ನ ರಾಜಕೀಯ ಪಯಣದಲ್ಲಿ ಪಕ್ಷದ ನಾಯಕತ್ವ ನನ್ನ ಮೇಲಿಟ್ಟ ನಂಬಿಕೆ ಮತ್ತು ನೀಡಿದ ಅವಕಾಶಗಳಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸೇರಿದ್ದಕ್ಕೆ ಕಾರಣ:

ತಾವು ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯ ಬಗ್ಗೆ ಇದ್ದ ವದಂತಿಗಳಿಗೆ ತೆರೆ ಎಳೆದಿರುವ ಅಣ್ಣಾಮಲೈ, “ಬಿಜೆಪಿಯ ಹಿರಿಯ ನಾಯಕ ಬಿ.ಎಲ್. ಸಂತೋಷ್ ಅವರು ನೀಡಿದ ಭರವಸೆ ಮತ್ತು ಬದ್ಧತೆಯ ಆಧಾರದ ಮೇಲೆಯೇ ನಾನು ಬಿಜೆಪಿಗೆ ಸೇರಿದ್ದೆ. ನನ್ನ ಪಕ್ಷದ ಸೇರ್ಪಡೆ ಕುರಿತಾದ ಎಲ್ಲಾ ಊಹಾಪೋಹಗಳಿಗೆ ಮುಕ್ತಾಯ ಹಾಡಲು ನಾನು ಈಗ ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:55 pm, Fri, 5 June 26

Follow Us