ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ತಪಾಸಣೆ ಮಾಡುವ ಅಗತ್ಯವಿಲ್ಲ; ಹೊಸ ಮಾರ್ಗಸೂಚಿ ಪ್ರಕಟಿಸಿದ ಐಸಿಎಂಆರ್​

ಆಸ್ಪತ್ರೆಗಳಲ್ಲಿ ಕೊರೊನಾ ಟೆಸ್ಟ್​ ಕಾರಣಕ್ಕೆ ಉಳಿದ ತುರ್ತು ಸೇವೆಗಳು (ಸರ್ಜರಿ, ಕೂಡಲೇ ನೀಡಬೇಕಾದ ಚಿಕಿತ್ಸೆಗಳು) ವಿಳಂಬವಾಗುವಂತೆ ಇಲ್ಲ. ಅಂದರೆ ಸರ್ಜರಿ ಇನ್ನಿತರ ಕಾರಣಗಳಿಗೆ ಆಸ್ಪತ್ರೆಗೆ ಬರುವವರು ಕೊರೊನಾ ಟೆಸ್ಟ್ ಮಾಡಿಸಿಲ್ಲ ಎಂದ ಮಾತ್ರಕ್ಕೆ ಅವರಿಗೆ ಚಿಕಿತ್ಸೆಯಲ್ಲಿ ತಡ ಮಾಡುವಂತಿಲ್ಲ.

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ತಪಾಸಣೆ ಮಾಡುವ ಅಗತ್ಯವಿಲ್ಲ; ಹೊಸ ಮಾರ್ಗಸೂಚಿ ಪ್ರಕಟಿಸಿದ ಐಸಿಎಂಆರ್​
ಪ್ರಾತಿನಿಧಿಕ ಚಿತ್ರ

ಇಷ್ಟು ದಿನ ಕೊರೊನಾ ಹತ್ತಿಕ್ಕಲು ಟೆಸ್ಟ್​-ಟ್ರ್ಯಾಕ್​-ಟ್ರೀಟ್​ ಎಂಬ ಒಂದು ಕಾರ್ಯ ಸೂತ್ರ ಇತ್ತು. ಅದರ ಪ್ರಕಾರ ಮೊದಲು ಟೆಸ್ಟ್​ ಮಾಡುವುದು, ಆ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟರೆ ಆತನ/ಆಕೆಯ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಟ್ರ್ಯಾಕ್​ ಮಾಡಿ ಮತ್ತೆ ತಪಾಸಣೆ ಮಾಡಲಾಗುತ್ತಿತ್ತು. ನಂತರ ಯಾರಿಗೆಲ್ಲ ಸೋಂಕು ತಗುಲಿದೆಯೋ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸೋಮವಾರ ಕೊವಿಡ್​ 19 ತಪಾಸಣೆ ಸಂಬಂಧ ಹೊಸ ನಿಯಮ ಪ್ರಕಟಿಸಿದೆ. ಅದರ ಅನ್ವಯ ಈ ಟ್ರ್ಯಾಕ್​ ಎಂಬುದು ಅಗತ್ಯವಿಲ್ಲ ಎಂದು ಹೇಳಿದೆ. ಕೊರೊನಾದ ಸೌಮ್ಯ ಲಕ್ಷಣಗಳು, ಲಕ್ಷಣ ಇಲ್ಲದೆ ಇರುವವರ ಸಂಪರ್ಕಕ್ಕೆ ಬಂದವರನ್ನೆಲ್ಲ ಕೊವಿಡ್ 19 ತಪಾಸಣೆಗೆ ಒಳಪಡಿಸುವ ಅಗತ್ಯವಿಲ್ಲ. ಹಾಗಿದ್ದಾಗ್ಯೂ ಕೂಡ ಕೊವಿಡ್ 19 ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರು ವಯಸ್ಸಾಗಿದ್ದವರು ಮತ್ತು ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರಾದರೆ ಅಥವಾ ಕೊರೊನಾದ ಗಂಭೀರ ಸ್ವರೂಪದ ಲಕ್ಷಣಗಳು ಇರುವವರ ಸಂಪರ್ಕದಲ್ಲಿದ್ದವರು ಕೊರೊನಾ ಟೆಸ್ಟ್​ಗೆ ಒಳಗಾಗಬೇಕು ಎಂದು ಐಸಿಎಂಆರ್​ ಸ್ಪಷ್ಟಪಡಿಸಿದೆ.  

ಐಸಿಎಂಆರ್​ ಸೋಮವಾರ ಈ ಸಲಹೆ ನೀಡಿದ್ದು, ಕೊರೊನಾದ ಗಂಭೀರ ಲಕ್ಷಣಗಳು ಇರುವವರ ಸಂಪರ್ಕಕ್ಕೆ ಬಂದವರು, ಅದರಲ್ಲೂ 60ವರ್ಷ ಮೇಲ್ಪಟ್ಟವರು, ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಶ್ವಾಸಕೋಶ, ಮೂತ್ರಪಿಂಡ ಕಾಯಿಲೆ ಸೇರಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರು ಕೊವಿಡ್​ 19 ಟೆಸ್ಟ್​ ಮಾಡಿಸಿಕೊಳ್ಳಬೇಕು ಎಂದು ಐಸಿಎಂಆರ್​ ತನ್ನ ಹೊಸ ಮಾರ್ಗಸೂಚಿಯಲ್ಲಿ ಪ್ರಕಟಿಸಿದೆ.

ಉಳಿದಂತೆ ಈ ಹಿಂದಿನ ನಿರ್ದೇಶನಗಳಂತೆ ಆಸ್ಪತ್ರೆಗಳಲ್ಲಿ ಕೊರೊನಾ ಟೆಸ್ಟ್​ ನಡೆಯಬೇಕು. ಆದರೆ ಆಸ್ಪತ್ರೆಗಳಲ್ಲಿ ಕೊರೊನಾ ಟೆಸ್ಟ್​ ಕಾರಣಕ್ಕೆ ಉಳಿದ ತುರ್ತು ಸೇವೆಗಳು (ಸರ್ಜರಿ, ಕೂಡಲೇ ನೀಡಬೇಕಾದ ಚಿಕಿತ್ಸೆಗಳು) ವಿಳಂಬವಾಗುವಂತೆ ಇಲ್ಲ. ಅಂದರೆ ಸರ್ಜರಿ ಇನ್ನಿತರ ಕಾರಣಗಳಿಗೆ ಆಸ್ಪತ್ರೆಗೆ ಬರುವವರು ಕೊರೊನಾ ಟೆಸ್ಟ್ ಮಾಡಿಸಿಲ್ಲ ಎಂದ ಮಾತ್ರಕ್ಕೆ ಅವರಿಗೆ ಚಿಕಿತ್ಸೆಯಲ್ಲಿ ತಡ ಮಾಡುವಂತಿಲ್ಲ. ಹಾಗೇ, ಆಸ್ಪತ್ರೆಗಳಲ್ಲಿ ಇತರ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳಿಗೆ ಮೊದಲು ಕೊರೊನಾ ಟೆಸ್ಟ್​ ಮಾಡಲು ಸಂಬಂಧಪಟ್ಟ ಎಲ್ಲ ವ್ಯವಸ್ಥೆ ಇಟ್ಟುಕೊಳ್ಳಬೇಕು. ಅಲ್ಲಿ ವ್ಯವಸ್ಥೆಯಿಲ್ಲ ಎಂಬ ಕಾರಣಕ್ಕೆ ಕೊವಿಡ್​ ಟೆಸ್ಟ್​ಗೆ ಬಂದವರನ್ನು ಇನ್ನೊಂದು ಆಸ್ಪತ್ರೆಗೆ ಕಳಿಸುವಂತಿಲ್ಲ.  ಇನ್ನು ಆಸ್ಪತ್ರೆಗಳಿಗೆ ಶಸ್ತ್ರಚಿಕಿತ್ಸೆ ಅಥವಾ ಇನ್ನಿತರ ಯಾವುದೇ ಕಾರಣಕ್ಕೆ ಅಡ್ಮಿಟ್ ಆಗುವ ರೋಗಿಗಳಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡರೆ ಮಾತ್ರ ತಪಾಸಣೆ ಮಾಡಿಸಿದರೆ ಸಾಕು, ಅದರ ಹೊರತು ಟೆಸ್ಟ್ ಅಗತ್ಯವಿಲ್ಲ ಎಂದೂ ಐಸಿಎಂಆರ್​ ಸ್ಪಷ್ಟಪಡಿಸಿದೆ. ಐಸಿಎಂಆರ್​ನ ಈ ನಿಯಮಗಳು ಸರಿಯಾಗಿವೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Shocking News: ಕಾಳಿ ದೇವಿ ವಿಗ್ರಹದ ಪಾದದ ಮೇಲೆ ಕತ್ತರಿಸಿದ ತಲೆ ಪತ್ತೆ; ಉಳಿದ ದೇಹಕ್ಕಾಗಿ ಪೊಲೀಸರಿಂದ ಹುಡುಕಾಟ

Published On - 2:14 pm, Tue, 11 January 22

Click on your DTH Provider to Add TV9 Kannada