ರಾಮಮಂದಿರ, ಹೊಸ ಸಂಸತ್ ಬಗ್ಗೆ ಮಕ್ಕಳಿಗೆ ತಿಳಿಸುವುದು ನಮ್ಮ ಕರ್ತವ್ಯ: ಎನ್ಸಿಇಆರ್ಟಿ ನಿರ್ದೇಶಕರು
NCERT director Dinesh Prasad Saklani: ಶಾಲಾ ಪಠ್ಯಪುಸ್ತಕದಲ್ಲಿ ರಾಮಮಂದಿರದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿರುವುದು, ರಥಯಾತ್ರ, ಕರಸೇವಕರು, ಹೊಸ ಸಂಸತ್ ಮೊದಲಾದ ವಿಚಾರಗಳನ್ನು ಸೇರಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಎನ್ಸಿಇಆರ್ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ, ಇದು ಕೇಸರೀಕರಣ ಅಲ್ಲ. ವಸ್ತು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನವದೆಹಲಿ, ಜೂನ್ 16: ಶಾಲಾ ಪಠ್ಯಪುಸ್ತಕಗಳಲ್ಲಿ ಗಲಭೆಗಳ (Riots) ಬಗ್ಗೆ ಪಾಠ ಮಾಡುವುದರಿಂದ ಹಿಂಸಾತ್ಮಕ ವ್ಯಕ್ತಿತ್ವಗಳ (violent) ನಿರ್ಮಾಣ ಆಗಬಹುದು ಎಂದು ಎನ್ಸಿಇಅರ್ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ (Dinesh Prasad Saklani) ಹೇಳಿದ್ದಾರೆ. ಗುಜರಾತ್ ಗಲಭೆ ಘಟನೆಗಳು ಮತ್ತು ಬಾಬರಿ ಮಸೀದಿ ಧ್ವಂಸ ಘಟನೆಯ ಪಠ್ಯದಲ್ಲಿ ಬದಲಾವಣೆ ಮಾಡಲಾಗಿರುವ ವಿಚಾರದ ಬಗ್ಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಶಿಕ್ಷಣದಲ್ಲಿ ಕೇಸರೀಕರಣ (Saffronization) ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಅವರು ಈ ಸಂದರ್ಭದಲ್ಲಿ ತಳ್ಳಿಹಾಕಿದ್ದಾರೆ.
ಹನ್ನೆರಡನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕದಲ್ಲಿ ಬಾಬ್ರಿ ಮಸೀದಿಯನ್ನು ಮೂರು ಗೋಪುರದ ಕಟ್ಟಡವೆಂದು ಬಣ್ಣಿಸಲಾಗಿದೆ. ಅಯೋಧ್ಯೆಯ ಪಾಠವನ್ನು ನಾಲ್ಕು ಪುಟಗಳಿಂದ ಎರಡು ಪುಟಕ್ಕೆ ಇಳಿಸಲಾಗಿದೆ. ಲಾಲಕೃಷ್ಣ ಆಡ್ವಾನಿ ನೇತೃತ್ವದಲ್ಲಿ ನಡೆದ ಬಿಜೆಪಿ ರಥಯಾತ್ರೆ ಘಟನೆಯನ್ನು ಉಲ್ಲೇಖಿಸಲಾಗಿದೆ. ಕರಸೇವಕರಿಂದ ಬಾಬ್ರಿ ಮಸೀದಿ ಕೆಡವಲಾಗಿದ್ದು ಆ ಸಂಬಂಧಿತ ಘಟನೆಗಳ ವಿವರ ಕೊಡಲಾಗಿದೆ. ವಿಪಕ್ಷಗಳ ನಾಯಕರು ಈ ಪಠ್ಯ ಪರಿಷ್ಕರಣೆಯನ್ನು ಕೇಸರೀಕರಣ ಎಂದು ಆರೋಪ ಮಾಡಿದ್ದಾರೆ.
ಬದಲಾವಣೆ ತಂದಿರುವುದರಲ್ಲಿ ಏನು ತಪ್ಪಿದೆ: ಎನ್ಸಿಇಆರ್ಟಿ ಮುಖ್ಯಸ್ಥ
ಯಾವುದಾದರೂ ಅಪ್ರಸ್ತುತ ವಿಷಯವಾಗಿದ್ದರೆ ಅದನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಬದಲಾವಣೆಯನ್ನೇ ಮಾಡಬಾರದು ಎಂದು ಹೇಳಲು ಆಗಲ್ಲ. ಈ ಪರಿಷ್ಕರಣೆಯನ್ನು ಕೇಸರೀಕರಣ ಎಂದು ಕರೆಯಲಾಗದು. ನಾವು ಮಕ್ಕಳಿಗೆ ಇತಿಹಾಸ ಹೇಳಿಕೊಡುವುದು ನೈಜ ಜ್ಞಾನವನ್ನು ತುಂಬಲೇ ಹೊರತು, ಘರ್ಷಣೆಗೆ ನೂಕುವುದಕ್ಕಲ್ಲ ಎಂದು ದಿನೇಶ್ ಪ್ರಸಾದ್ ಸಾಕ್ಲಾನಿ ಹೇಳಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷಾ ಅಕ್ರಮ ಎಸಗಿದವರನ್ನು ಸುಮ್ಮನೆ ಬಿಡೋದಿಲ್ಲ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ
‘ರಾಮ ಮಂದಿರದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಅದನ್ನು ನಮ್ಮ ಪಠ್ಯಪುಸ್ತಕದಲ್ಲಿ ಸೇರಿಸಿರುವುದು ಯಾಕೆ ತಪ್ಪಾಗುತ್ತದೆ? ಹೊಸ ಸಂಸತ್ ಅನ್ನು ಕಟ್ಟಿದ್ದಾರೆ. ಅದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬಾರದೇಕೆ? ಪ್ರಾಚೀನ ಘಟನೆಗಳ ಜೊತೆಗೆ ಇತ್ತೀಚಿನ ವಿದ್ಯಮಾನಗಳನ್ನೂ ಮಕ್ಕಳಿಗೆ ತಿಳಿಸುವುದು ನಮ್ಮ ಕರ್ತವ್ಯ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ