ಕಾಂಗ್ರೆಸ್ 90, ಬಿಜೆಪಿ 0: ರಾಜ್ಯ ಸರ್ಕಾರಗಳ ವಜಾ ಯಾರ ಅವಧಿಯಲ್ಲಿ ಹೆಚ್ಚು, ಮಾಹಿತಿ ಬಿಚ್ಚಿಟ್ಟ ಕೆ ಸುಬ್ರಮಣಿಯನ್

|

Updated on: Apr 30, 2024 | 2:58 PM

K Subramanian vs Raghuram Rajan: ನರೇಂದ್ರ ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವದ ಎಲ್ಲಾ ಸೂಚಕಗಳು ಕೃಶಗೊಂಡಿವೆ ಎಂದು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಮಾಡಿರುವ ಆರೋಪವನ್ನು ಕೆ ಸುಬ್ರಮಣಿಯನ್ ತಳ್ಳಿಹಾಕಿದ್ದಾರೆ. ಮೋದಿ ಸರ್ಕಾರ ಟೀಕೆಗಳನ್ನು ಸಹಿಸುವುದಿಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸುಬ್ರಮಣಿಯನ್, ತಾನು ಮೋದಿ ಜೊತೆ ಕೆಲಸ ಮಾಡಿದ ಅವಧಿಯಲ್ಲಿ ಒಮ್ಮೆಯೂ ಅವರು ಸರ್ಕಾರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಬಲವಂತಪಡಿಸಲಿಲ್ಲ ಎಂದಿದ್ದಾರೆ.

ಕಾಂಗ್ರೆಸ್ 90, ಬಿಜೆಪಿ 0: ರಾಜ್ಯ ಸರ್ಕಾರಗಳ ವಜಾ ಯಾರ ಅವಧಿಯಲ್ಲಿ ಹೆಚ್ಚು, ಮಾಹಿತಿ ಬಿಚ್ಚಿಟ್ಟ ಕೆ ಸುಬ್ರಮಣಿಯನ್
ಕೆ ಸುಬ್ರಮಣಿಯನ್
Follow us on

ನವದೆಹಲಿ, ಏಪ್ರಿಲ್ 30: ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಪ್ರಜಾತಂತ್ರದ ಕೊಲೆ ಆಗುತ್ತಿದೆ, ಸ್ವಾತಂತ್ರ್ಯ ಹರಣ ಆಗುತ್ತಿದೆ ಎನ್ನುವ ಆರೋಪಗಳಿಗೆ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೆ ಸುಬ್ರಮಣಿಯನ್ (K Subramanian) ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ. ಅಮೆರಿಕದ ಇಲಿನಾಯ್ಸ್​ನ ವೆಸ್ಟರ್ನ್ ಯೂನಿವರ್ಸಿಟಿಯ ಕೆಲ್ಲಾಗ್ಸ್ ಬಿಸಿನೆಸ್ ಸ್ಕೂಲ್​ನಲ್ಲಿ ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ (Raghuram Rajan) ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್, ಕಾಂಗ್ರೆಸ್ ಮತ್ತು ಎನ್​ಡಿಎ ಸರ್ಕಾರದ ಅವಧಿಯಲ್ಲಿ ಆದ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳ ದತ್ತಾಂಶಗಳನ್ನು ಪ್ರಸ್ತುತಪಡಿಸಿದರು. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಎಷ್ಟು ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಮಾಡಲಾಗಿತ್ತು ಎಂಬ ವಾಸ್ತವ ಸಂಗತಿಯನ್ನು ಸುಬ್ರಮಣಿಯನ್ ತೆರೆದಿಟ್ಟರು.

ರಘುರಾಮ್ ರಾಜನ್ ಮತ್ತು ಕೆ ಸುಬ್ರಮಣಿಯನ್ ಮಧ್ಯೆ ಕುತೂಹಲ ಎನಿಸುವ ವಿವಿಧ ವಿಚಾರಗಳ ಬಗ್ಗೆ ಚರ್ಚೆಗಳಾದವು, ವಿಚಾರ ವಿನಿಮಯ ಆಯಿತು. ಇನ್ನೋವೇಶನ್ ಅಥವಾ ನಾವೀನ್ಯತೆಯಲ್ಲಿ ಭಾರತದ ಜಾಗತಿಕ ಶ್ರೇಯಾಂಕ ಹೇಗೆ 40ನೇ ಸ್ಥಾನಕ್ಕೆ ಏರಿತು ಎಂಬ ವಿಚಾರವನ್ನು ಕೆ ಸುಬ್ರಮಣಿಯನ್ ಉಲ್ಲೇಖಿಸುತ್ತಾ ಮುಕ್ತ ಚಿಂತನೆ ಬಗ್ಗೆ ಮಾತನಾಡಿದರು.

ಇದನ್ನೂ ಓದಿ: ಜಿಡಿಪಿ ದರಕ್ಕೆ ತಕ್ಕಂತೆ ಬೆಲೆ ಏರಿಕೆ ಇಲ್ಲವಲ್ಲ; ಭಾರತದ ಆರ್ಥಿಕ ವೃದ್ಧಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಘುರಾಮ್ ರಾಜನ್

‘ನಾವೀನ್ಯತೆಗೆ ಮುಕ್ತ ಆಲೋಚನೆ ಬಹಳ ಮುಖ್ಯ. ಇದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಕಂಪನಿ ಮಂಡಳಿಗೆ ಸರಿಯಾಗಿ ಸಂಭಾವನೆ ನೀಡದೇ ಇರುವುದು, ಸಂಶೋಧಕರು ನ್ಯೂಯಾರ್ಕ್​ನ ಯಾವುದೋ ಮೂಲೆಯಲ್ಲಿ ಉಳಿದಿರುವುದು ಇದು ಪ್ರಜಾತಂತ್ರದ ಸ್ಥಿತಿಯನ್ನು ತೋರಿಸುತ್ತದೆ…’ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರಘುರಾಮ್ ರಾಜನ್, ಭಾರತದಲ್ಲಿ ಪ್ರಜಾತಂತ್ರದ ಪ್ರತಿಯೊಂದು ಸೂಚಕವೂ ಇಳಿಮುಖವಾಗಿದೆ. ಈಗಿನ ಸರ್ಕಾರ ಟೀಕೆಯನ್ನು, ವಿಮರ್ಶೆಯನ್ನು ಸಹಿಸುವುದಿಲ್ಲ ಎಂದು ಆರೋಪಿಸಿದರು.

ನರೇಂದ್ರ ಮೋದಿ ಸರ್ಕಾರದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದ ಅನುಭವ ಇರುವ ಕೃಷ್ಣಮೂರ್ತಿ ಸುಬ್ರಮಣಿಯನ್ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಒಮ್ಮೆಯೂ ಕೂಡ ಸರ್ಕಾರದ ಬಗ್ಗೆ ಸಕಾರಾತ್ಮಕ ಮಾತುಗಳನ್ನು ಹೇಳಬೇಕೆಂದು ಪ್ರಧಾನಿಗಳು ಒತ್ತಡ ಹಾಕಿದ್ದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ನರೇಂದ್ರ ಮೋದಿ ನಿಜವಾದ ಪ್ರಜಾಪ್ರಭುತ್ವವಾದಿ: ಅರ್ಜುನ್ ಮೊಧ್ವಾಡಿಯಾ

ಬಿಜೆಪಿ ಸರ್ಕಾರದಲ್ಲಿ ರಾಜ್ಯ ಸರ್ಕಾರಗಳನ್ನು ಬೀಳಿಸಿದ್ದಿಲ್ಲ…

ಕೇಂದ್ರ ಸರ್ಕಾರ ಸಂವಿಧಾನದ ಆರ್ಟಿಕಲ್ 356 ಅನ್ನು ಬಳಸಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬಹುದು. ಈ ಕಾಯ್ದೆ ಮೂಲಕ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರಗಳು 90 ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದಿದೆ. ಆದರೆ, ವಾಜಪೇಯಿ ಸರ್ಕಾರವಾಗಲೀ, ನರೇಂದ್ರ ಮೋದಿ ಸರ್ಕಾರವಾಗಲೀ ಒಂದೂ ಸರ್ಕಾರವನ್ನು ಈ ರೀತಿ ವಜಾಗೊಳಿಸಿಲ್ಲ ಎಂಬ ಮಾಹಿತಿಯನ್ನು ಕೆ ಸುಬ್ರಮಣಿಯನ್ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ