ತಿರುವನಂತಪುರಂ: ಪಿಎಫ್ಐ (Popular Front of India) ಕಚೇರಿಗಳ ಮೇಲೆ ಎನ್ಐಎ (NIA) ದಾಳಿಯನ್ನು ಖಂಡಿಸಿ ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇಂದು ಕೇರಳದಲ್ಲಿ ಬಂದ್‌ಗೆ (Kerala Bandh) ಕೂಡ ಕರೆ ನೀಡಲಾಗಿದೆ. ಬಂದ್‌ಗೆ ಕರೆ ನೀಡಿರುವ ಪಿಎಫ್ಐ (PFI) ವರ್ತನೆಯ ಬಗ್ಗೆ ಕೇರಳ ಹೈಕೋರ್ಟ್ ಇಂದು (ಶುಕ್ರವಾರ) ಸುಯೊ ಮೋಟೋ ದಾಖಲಿಸಿಕೊಂಡಿದೆ. 12 ಗಂಟೆಗಳ ಪ್ರತಿಭಟನೆಯ ಮಧ್ಯೆ ಬಂದ್‌ಗೆ ಕರೆ ನೀಡಲಾಗಿದೆ. ಯಾರೂ ಅನುಮತಿಯಿಲ್ಲದೆ ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಪಿಎಫ್ಐ ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದೆ.
ಪಿಎಫ್ಐ ಕಚೇರಿ ಮೇಲೆ ಎನ್ಐಎ ದಾಳಿ ಖಂಡಿಸಿ ಪ್ರತಿಭಟನೆಯ ನೆಪದಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕೇರಳ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೆ, ಅಂಥವರ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಕೇರಳ ಬಂದ್‌ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಿಎಫ್ಐ ನಾಯಕರ ವಿರುದ್ಧ ಕ್ರಮಕ್ಕೆ ಕೋರ್ಟ್ ಸೂಚನೆ ನೀಡಿದೆ.
ಕೇರಳ ರಾಜ್ಯ ಪೊಲೀಸರು “ಸರ್ಕಾರ ಮತ್ತು ಮುಷ್ಕರಕ್ಕಾಗಿ ಕರೆಯನ್ನು ಬೆಂಬಲಿಸದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಯಾವುದೇ ಹಾನಿ ಅಥವಾ ವಿನಾಶವಾಗದಂತೆ ತಡೆಗಟ್ಟಲು ಕಠಿಣ ಕ್ರಮಗಳನ್ನು ಜಾರಿಗೆ ತರಬೇಕು” ಎಂದು ಹೈಕೋರ್ಟ್ ಹೇಳಿದೆ. ಇಂದು ಬಂದ್ ಪ್ರಾರಂಭವಾಗುತ್ತಿದ್ದಂತೆ ಕೇರಳ ರಾಜ್ಯ ನಡೆಸುವ ಬಸ್ಸುಗಳ ಮೇಲೆ ಕಲ್ಲು ತೂರಾಟ ಮತ್ತು ದಾಳಿಯ ಘಟನೆಗಳು ವರದಿಯಾಗಿವೆ. 15 ರಾಜ್ಯಗಳು ಮತ್ತು 102 ಸ್ಥಳಗಳಲ್ಲಿ ಗುರುವಾರ ದಾಳಿ ನಡೆಸಲಾಯಿತು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಎಸ್ಡಿಪಿಐ ಸಂಘಟನೆಗಳ ಪದಾಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಎನ್ಐಎ, ಜಾರಿ ನಿರ್ದೇಶನಾಲಯ ಮತ್ತು ಗುಪ್ತದಳದಿಂದ ಸಾಕಷ್ಟು ಮಾಹಿತಿ ಕಲೆಹಾಕಿದ ನಂತರವೇ ಪಿಎಫ್ಐ ಮೇಲೆ ಕೇಂದ್ರ ಸರ್ಕಾರದ ಏಜೆನ್ಸಿಗಳು ದಾಳಿ ನಡೆಸಿದ್ದವು. ವಿವಿಧ ರಾಜ್ಯಗಳ ಪೊಲೀಸರ ನೆರವನ್ನೂ ದಾಳಿಯ ವೇಳೆ ಪಡೆಯಲಾಯಿತು.
ಉದಯ್ಪುರ ಮತ್ತು ಅಮರಾವತಿ ನಗರಗಳಲ್ಲಿ ನಡೆದ ಶಿರಚ್ಛೇದ ಪ್ರಕರಣಗಳ ಅಪರಾಧಿಗಳಿಗೆ ಪಿಎಫ್ಐ ನಂಟು ಇರುವುದು ಬೆಳಕಿಗೆ ಬಂದ ನಂತರ ಕೇಂದ್ರ ಸರ್ಕಾರವು ಪಿಎಫ್ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ದೇಶಾದ್ಯಂತ ನಡೆದ ದಾಳಿಯಲ್ಲಿ ನೂರಾರು ಮಂದಿ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೇರಳ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಅಸ್ಸಾಂ, ದೆಹಲಿ, ಮಧ್ಯಪ್ರದೇಶ, ಪುದುಚೇರಿ, ತಮಿಳುನಾಡು, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: Kerala: ಎನ್ಐಎ ದಾಳಿ ಖಂಡಿಸಿ ಕೇರಳದಲ್ಲಿ ಪಿಎಫ್ಐ ಪ್ರತಿಭಟನೆ, ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಕಾರ್ಯಕರ್ತರು
ಭಯೋತ್ಪಾದಕ ಕೃತ್ಯಗಳಿಗೆ ಹಣ ಒದಗಿಸುವುದು, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಸೇರಿದಂತೆ ಹಲವು ಆರೋಪಗಳು ಪಿಎಫ್ಐ ವಿರುದ್ಧ ಕೇಳಿ ಬಂದಿವೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ 11 ರಾಜ್ಯಗಳಲ್ಲಿ ಪಿಎಫ್‌ಐನ 106 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಧಿಕಾರಿಗಳ ಪ್ರಕಾರ ಇದು ದೇಶದ ಅತಿ ದೊಡ್ಡ ದಾಳಿಯಾಗಿದೆ.
Published On - 11:37 am, Fri, 23 September 22