ನೋಯ್ಡಾ ಸೂಪರ್‌ಟೆಕ್ ಅವಳಿ ಕಟ್ಟಡ (Noida Supertech Twin Towers)ನೆಲಸಮಗೊಳಿಸುವ ಕಾರ್ಯಾಚರಣೆಗೆ ಎಲ್ಲವೂ ಸಜ್ಜಾಗಿದೆ. ಸುಮಾರು 100 ಮೀಟರ್ ಎತ್ತರದ ಕಟ್ಟಡಗಳನ್ನು ಇಂದು (ಭಾನುವಾರ) ಮಧ್ಯಾಹ್ನ 2:30 ಕ್ಕೆ ನೆಲಸಮ ಮಾಡಲಾಗುತ್ತದೆ. ಎರಡು ಟವರ್‌ಗಳಲ್ಲಿ 3,700 ಕೆಜಿ ಸ್ಫೋಟಕಗಳನ್ನು ಸಜ್ಜುಗೊಳಿಸಲಾಗಿದೆ. ಕಂಬಗಳಲ್ಲಿನ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಅಳವಡಿಸಲಾಗಿದೆ. 20,000 ಸರ್ಕ್ಯೂಟ್‌ಗಳನ್ನು ಹೊಂದಿಸಲಾಗಿದೆ. ಈ ಕಟ್ಟಡಗಳು ನೇರವಾಗಿ ಕುಸಿದು ಬೀಳಲಿವೆ. ಸಮೀಪದ ಸೊಸೈಟಿಗಳು, ಎಮರಾಲ್ಡ್ ಕೋರ್ಟ್ ಮತ್ತು ಸೆಕ್ಟರ್ 93A ನಲ್ಲಿನ ಪಕ್ಕದ ಎಟಿಎಸ್ ಗ್ರಾಮದ ಸುಮಾರು 5,000 ನಿವಾಸಿಗಳನ್ನು ಅವರ ಆವರಣದಿಂದ ಸ್ಥಳಾಂತರಿಸಲಾಗಿದೆ. 3,000 ವಾಹನಗಳು, ಬೆಕ್ಕುಗಳು ಮತ್ತು ನಾಯಿಗಳು ಸೇರಿದಂತೆ 150-200 ಸಾಕುಪ್ರಾಣಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಯೋಜನೆಯ ಇಂಜಿನಿಯರ್ ಪ್ರಕಾರ ಕಟ್ಟಡ ನೆಲಸಮವಾಗಲು 9 ಸೆಕೆಂಡ್ಸ್ ಸಾಕು. ಗಾಳಿಯ ವೇಗವನ್ನು ಅವಲಂಬಿಸಿ ಧೂಳು ಸ್ವಚ್ಛವಾಗಲು ಸುಮಾರು 12 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸುಮಾರು 55,000 ಟನ್‌ಗಳಷ್ಟು ಅವಶೇಷಗಳು ಉಂಟಾಗಲಿದ್ದು ಅದನ್ನು ತೆರವುಗೊಳಿಸಲು ಮೂರು ತಿಂಗಳು ಬೇಕಾಗುತ್ತದೆ.
— ANI (@ANI) August 28, 2022
ಸಮೀಪದ ಕಟ್ಟಡಗಳಲ್ಲಿ ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ 4 ಗಂಟೆಗೆ ಅವುಗಳನ್ನು ಪುನಃಸ್ಥಾಪಿಸಲಾಗುತ್ತದೆ. ಅಲ್ಲಿನ ನಿವಾಸಿಗಳಿಗೆ ಸಂಜೆ 5.30 ರೊಳಗೆ ಹಿಂತಿರುಗಲು ಅನುಮತಿಸಲಾಗುತ್ತದೆ. ಸ್ಫೋಟದಿಂದ ಉಂಟಾದ ಧೂಳಿನಿಂದಾಗಿ ಮನೆಗಳಿಗೆ ಮರಳುವಾಗ ನಿವಾಸಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪೊಲೀಸರು ನಿವಾಸಿಗಳನ್ನು ಕೇಳಿಕೊಂಡಿದ್ದಾರೆ. ಅಲ್ಲದೆ, ಪಕ್ಕದ ಕೆಲವು ಕಟ್ಟಡಗಳು ಅವಳಿ ಕಟ್ಟಡಗಳಿಗೆ 8 ಮೀಟರ್‌ಗಳಷ್ಟು ಹತ್ತಿರದಲ್ಲಿದೆ. ಇವುಗಳನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು, ಮಧ್ಯಾಹ್ನ 2.15 ರಿಂದ 2.45 ರವರೆಗೆ ಸ್ಫೋಟದ ಎರಡೂ ಬದಿಯಲ್ಲಿ 15 ನಿಮಿಷಗಳ ಕಾಲ ಅರ್ಧ ಘಂಟೆಯವರೆಗೆ ಸಂಚಾರವನ್ನು ನಿಲ್ಲಿಸಲಾಗುತ್ತದೆ. ಸೆಕ್ಟರ್ 93A ನಲ್ಲಿ ಅವಳಿ ಕಟ್ಟಡಗಳತ್ತ ಹೋಗುವ ರಸ್ತೆಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.
ಗಾಳಿಯ ದಿಕ್ಕಿನಲ್ಲಿ ಬದಲಾವಣೆ
ಗಾಳಿಯ ದಿಕ್ಕಿನಲ್ಲಿ ಹಠಾತ್ ಬದಲಾವಣೆಯಿಂದಾಗಿ ಹತ್ತಿರದ ಕಟ್ಟಡಗಳು ಧೂಳುಮಯ ಆಗಬಹುದು ಎಂದು ಉತ್ತರ ಪ್ರದೇಶದ ಅಧಿಕಾರಿ ಹೇಳುತಿದ್ದಾರೆ. ಕಳೆದ ಒಂದು ವಾರದಿಂದ ಗಾಳಿಯ ದಿಕ್ಕು ಪಶ್ಚಿಮದ ಕಡೆಗೆ ಇತ್ತು ಆದರೆ ದಿಢೀರ್ ಬದಲಾವಣೆಯಾಗಿದೆ ಎಂದು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. “ಇಂದು ಗಾಳಿಯ ದಿಕ್ಕು ಪೂರ್ವದ ಕಡೆಗೆ ಇದೆ. ಧ್ವಂಸದ ನಂತರದ ಧೂಳಿನ ಕಣಗಳು ಗ್ರೇಟರ್ ನೋಯ್ಡಾ ಮತ್ತು ಬುಲಂದ್‌ಶಹರ್ ಕಡೆಗೆ ಹೋಗುವ ಸಾಧ್ಯತೆ ಇದೆ ಎಂದಿದ್ದಾರೆ .
ಕಾರ್ಮಿಕರ ಸ್ಥಳಾಂತರ
ಕಾರ್ಮಿಕರನ್ನು ಕಟ್ಟಡದಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ. ಟವರ್ ಆವರಣದಲ್ಲಿ ಈಗ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಮಾತ್ರ ಇದ್ದಾರೆ. ಅವಳಿ ಕಟ್ಟಡದ ತೆರವು ಪ್ರಕ್ರಿಯೆ ಆರಂಭವಾಗಿದೆ. ಸ್ಫೋಟದ ಕೆಲವು ನಿಮಿಷಗಳ ಮೊದಲು, ಎನ್‌ಡಿಆರ್‌ಎಫ್ ಸಿಬ್ಬಂದಿ ಭಾನುವಾರ ಜೇಪೀ ಫ್ಲೈಓವರ್‌ನಲ್ಲಿ ರಕ್ಷಣಾ ಗೇರ್‌ಗಳನ್ನು ಧರಿಸಿ ತಪಾಸಣೆ ನಡೆಸುತ್ತಿರುವುದು ಕಂಡುಬಂದಿದೆ. ಇದಲ್ಲದೆ, ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನೋಯ್ಡಾ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ ಅವರು ಕಾರ್ಯಾಚರಣೆಯ ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿದ್ದಾರೆ. ಇದು ನಗರ ಪೊಲೀಸರು ನಡೆಸಿದ ಕೆಡವುವಿಕೆಯ ಸಿದ್ಧತೆಗಳನ್ನು ಒಳಗೊಂಡ ಮೊಬೈಲ್ ಘಟಕವಾಗಿದೆ.
Published On - 2:10 pm, Sun, 28 August 22