Mann Ki Baat: ಸಮಗ್ರ, ಸಾಮೂಹಿಕ ಒಳಿತು ನಮ್ಮೆದುರು ಇದೆ: 92ನೇ ಮನ್ ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ 10 ಮುಖ್ಯಾಂಶಗಳಿವು
PM Narendra Modi: ಡಿಜಿಟಲ್ ಇಂಡಿಯಾ ಉಪಕ್ರಮ ಮತ್ತು ಕಿರುಧಾನ್ಯಗಳ ಉತ್ಪಾದನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಭಾಷಣದಲ್ಲಿ ಮಾತನಾಡಿದರು.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ ‘ಮನ್ ಕಿ ಬಾತ್’ (Mann Ki Baat) 92ನೇ ಆವೃತ್ತಿಯ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಭಾರತದ ಸಮಗ್ರ ಪ್ರಗತಿಗೆ ಮತ್ತು ಭಾರತೀಯರ ಒಗ್ಗಟ್ಟಿನ ಸ್ಪಂದನೆಗೆ ನಾವೆಲ್ಲರೂ ಸಾಕ್ಷಿಯಾಗಿದೆವು ಎಂದರು. ಡಿಜಿಟಲ್ ಇಂಡಿಯಾ ಉಪಕ್ರಮ ಮತ್ತು ಕಿರುಧಾನ್ಯಗಳ ಉತ್ಪಾದನೆ ಬಗ್ಗೆ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸಿದ ಮುಖ್ಯ ವಿಚಾರಗಳಿವು…
- ಇತ್ತೀಚೆಗಷ್ಟೇ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿತು. ಕರ್ನಾಟಕದ ಕೋಲಾರದಲ್ಲಿ ಬೃಹತ್ ತ್ರಿವರ್ಣ ಧ್ವಜ ಅನಾವರಣಗೊಳಿಸಿದ್ದೂ ಸೇರಿದಂತೆ ದೇಶಾದ್ಯಂತ ಹಲವು ರೀತಿಯಲ್ಲಿ ಸಂಭ್ರಮಾಚರಣೆ ನಡೆಯಿತು ಎಂದು ಮೋದಿ ನೆನಪಿಸಿಕೊಂಡರು.
- ಭಾರತದಲ್ಲಿ ಅಮೃತ ಸರೋವರ ನಿರ್ಮಾಣವು ಒಂದು ಸಾಮಾಜಿಕ ಚಳವಳಿಯಾಗಿ ನಡೆಯುತ್ತಿದೆ. ಮಳೆಗಾಲದಲ್ಲಿ ಬೇಕಾಬಿಟ್ಟಿಯಾಗಿ ಓಡುತ್ತಿದ್ದ ಮಳೆನೀರನ್ನು ಒಂದೆಡೆ ಸಂಗ್ರಹಿಸಿ, ಇಂಗಿಸುವ ಪ್ರಯತ್ನವನ್ನು ಈ ಸರೋವರಗಳು ಮಾಡುತ್ತವೆ ಎಂದರು.
- ವಿಶ್ವಸಂಸ್ಥೆಯು 2023ನೇ ಇಸವಿಯನ್ನು ‘ಕಿರುಧಾನ್ಯಗಳ ವರ್ಷ’ ಎಂದು ಘೋಷಿಸಿದೆ. ಭಾರತವು ಮುಂದಿಟ್ಟು ಈ ಪ್ರಸ್ತಾವಕ್ಕೆ ವಿಶ್ವದ ಇತರ 70 ದೇಶಗಳ ಬೆಂಬಲ ದೊರಕಿತು ಎಂಬುದು ಸಂತಸದ ವಿಚಾರ ಎಂದು ಮೋದಿ ಹೇಳಿದರು.
- ಕಿರುಧಾನ್ಯಗಳನ್ನು ಜಗತ್ತು ಇಂದು ಸೂಪರ್ಫುಡ್ ಎಂದು ಗುರುತಿಸಿದೆ. ಕಿರುಧಾನ್ಯಗಳಿಗೆ ಉತ್ತೇಜನ ನೀಡಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಆವಿಷ್ಕಾರದ ಪ್ರಯತ್ನಗಳೂ ಚುರುಕಾಗಿವೆ. ಆಹಾರ ಸಂಸ್ಕರಣೆ ಉದ್ಯಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಉತ್ಪಾದನೆಯೂ ಹೆಚ್ಚಾಗುತ್ತಿದೆ ಎಂದರು.
- ಭಾರತವು ಕಿರುಧಾನ್ಯ ಉತ್ಪಾದನೆಯಲ್ಲಿ ವಿಶ್ವದ ಅತಿದೊಡ್ಡ ಕಿರುಧಾನ್ಯ ಉತ್ಪಾದಕ ದೇಶವಾಗಿದೆ. ವಿಶ್ವಸಂಸ್ಥೆಯ ಘೋಷಣೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿಯೂ ಭಾರತದ ಮೇಲೆಯೇ ಇದೆ. ನಾವೆಲ್ಲರೂ ಸೇರಿ ಇದನ್ನು ಸಾಮೂಹಿಕ ಚಳವಳಿಯನ್ನಾಗಿ ರೂಪಿಸಬೇಕಿದೆ. ಜನರಲ್ಲಿ ಕಿರುಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಅವರು ಹೇಳಿದರು.
- ಭಾರತದಲ್ಲಿ ಈಗ ಡಿಜಿಟಲ್ ಉದ್ಯಮಿಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಆರಂಭಿಸಿದ ಡಿಜಿಟಲ್ ಇಂಡಿಯಾ ಉಪಕ್ರಮದಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ.
- ದೇಶದ ಅಪೌಷ್ಟಿಕತೆ ಸಮಸ್ಯೆ ನಿವಾರಿಸಲು ಜಲ್ಜೀವನ್ ಮಿಷನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅಪೌಷ್ಟಿಕತೆಯ ಶಾಪ ಪರಿಹರಿಸಲು ನೀವೆಲ್ಲರೂ ಕೈಜೋಡಿಸಬೇಕೆಂದು ಕರೆ ನೀಡುತ್ತೇನೆ.
- ಅಸ್ಸಾಂನ ಬೊಂಗಾಯಿ ಗ್ರಾಮದಲ್ಲಿ ಪ್ರಾಜೆಕ್ಟ್ ಸಂಪೂರ್ಣ ಹೆಸರಿನ ವಿಶಿಷ್ಟ ಯೋಜನೆಯೊಂದು ಅನುಷ್ಠಾನಗೊಳ್ಳುತ್ತಿದೆ. ಅಪೌಷ್ಟಿಕತೆಯ ಸವಾಲನ್ನು ಈ ಯೋಜನೆಯು ವಿಶಿಷ್ಟ ರೀತಿಯಲ್ಲಿ ಮುಖಾಮುಖಿಯಾಗುತ್ತದೆ.
- ದೂರದರ್ಶನದಲ್ಲಿ ‘ಸ್ವರಾಜ್’ ಹೆಸರಿನ ಧಾರಾವಾಹಿಯ 75 ಕಂತುಗಳು ಬಿತ್ತರಗೊಳ್ಳಲಿದೆ. ಪ್ರಸಿದ್ಧರಾದವರು, ಎಲೆಮರೆ ಕಾಯಾಗಿ ಉಳಿದವರು ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಲವು ನಾಯಕರನ್ನು ಈ ಧಾರಾವಾಹಿಯು ಪರಿಚಯಿಸಲಿದೆ. ನೀವೆಲ್ಲರೂ ಈ ಧಾರವಾಹಿ ನೋಡಿ, ನಿಮ್ಮ ಮಕ್ಕಳಿಗೂ ತೋರಿಸಿ.
- ಭಾರತದಲ್ಲಿ ಬಡವರಿಗೆ ಸಹಾಯ ಮಾಡುವಲ್ಲಿ ‘ಜನ್ ಧನ್’ ಯೋಜನೆಯ ಪಾತ್ರ ಮಹತ್ವದ್ದು. ಜನ್ ಧನ್ ಯೋಜನೆಯಡಿ ಕಳೆದ 8 ವರ್ಷಗಳಲ್ಲಿ 46.30 ಕೋಟಿ ಅಕೌಂಟ್ಗಳನ್ನು ತೆರೆಯಲಾಗಿದೆ.