ಎಐಸಿಸಿಗೆ ಹೊಸ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಿಗದಿ: ಅಕ್ಟೋಬರ್ 17ಕ್ಕೆ ಚುನಾವಣೆ, 19ಕ್ಕೆ ಮತ ಎಣಿಕೆ
ನಾಮನಿರ್ದೇಶನಕ್ಕೆ ಕೊನೆಯ ದಿನ ಸೆಪ್ಟೆಂಬರ್ 30 ಆಗಿದ್ದುಅಕ್ಟೋಬರ್ 17ಕ್ಕೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 19ಕ್ಕೆ ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಹೊಸ ಅಧ್ಯಕ್ಷರ ಚುನಾವಣೆ (Congress party’s President Election)ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್ (Congress) ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ. ಸದ್ಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWS) ಸಭೆ ನಡೆಯುತ್ತಿದೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಭೆಗೆ ವರ್ಚುವಲ್ ಆಗಿ ಭಾಗವಹಿಸಿದ್ದಾರೆ. ಶುಕ್ರವಾರ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ದಿಢೀರ್ ರಾಜೀನಾಮೆ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರು ಬರೆದ ಪತ್ರದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. ಆಜಾದ್ ತಮ್ಮ ಪತ್ರದಲ್ಲಿ ರಾಹುಲ್ ಗಾಂಧಿ ಅವರು “ಪಕ್ಷದ ಸಂಪೂರ್ಣ ಸಮಾಲೋಚನಾ ಕಾರ್ಯವಿಧಾನವನ್ನು ಕೆಡವಿದ್ದಾರೆ ಎಂದು ಟೀಕಿಸಿದ್ದಾರೆ. ಚುನಾವಣಾ ವೇಳಾಪಟ್ಟಿಗೆ ಅನುಮೋದನೆ ನೀಡುವುದರ ಜೊತೆಗೆ, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸಿಡಬ್ಲ್ಯೂಸಿ ಸದಸ್ಯರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಬಹುದು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಚುನಾವಣೆಗೆ ಅಧಿಸೂಚನೆ ಸೆಪ್ಟೆಂಬರ್ 22, 2022 ರಂದು ಹೊರಡಿಸಲಿದ್ದು,ಸೆಪ್ಟೆಂಬರ್ 24ರಂದು ನಾಮ ನಿರ್ದೇಶನ ಪ್ರಾರಂಭವಾಗಲಿದೆ. ನಾಮನಿರ್ದೇಶನಕ್ಕೆ ಕೊನೆಯ ದಿನ ಸೆಪ್ಟೆಂಬರ್ 30 ಆಗಿದ್ದು ಅಕ್ಟೋಬರ್ 17ಕ್ಕೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 19ಕ್ಕೆ ಮತ ಎಣಿಕೆ ನಡೆಯಲಿದೆ.
ಈ ವರ್ಷ ಆಗಸ್ಟ್ 21 ರಿಂದ ಸೆಪ್ಟೆಂಬರ್ 20 ರ ನಡುವೆ ಹೊಸ ಪಕ್ಷದ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಘೋಷಿಸಿತ್ತು. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗುವುದಿಲ್ಲ ಎಂದು ತಮ್ಮ ನಿಲುವಿನಲ್ಲಿ ಪಟ್ಟು ಹಿಡಿದಿದ್ದಾರೆ ಎಂದು ಪಕ್ಷದ ಕೆಲವು ಮೂಲಗಳು ಹೇಳಿವೆ,
2019 ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಸತತ ಎರಡನೇ ಸೋಲು ಅನುಭವಿಸಿದ ನಂತರ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹಂಗಾಮಿ ಅಧ್ಯಕ್ಷರಾಗಿ ಮತ್ತೆ ಪಕ್ಷದ ಆಡಳಿತವನ್ನು ವಹಿಸಿಕೊಂಡ ಸೋನಿಯಾ ಗಾಂಧಿ ಅವರು ಜಿ -23 ಎಂದು ಉಲ್ಲೇಖಿಸಲಾದ ನಾಯಕರ ಒಂದು ವಿಭಾಗದ ಬಹಿರಂಗ ಬಂಡಾಯದ ನಂತರ ಆಗಸ್ಟ್ 2020 ರಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು, ಆದರೆ ಸಿಡಬ್ಲ್ಯೂಸಿ ಅವರು ಮುಂದುವರಿಯುವಂತೆ ಒತ್ತಾಯಿಸಿತ್ತು.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಯಾರು ಬೇಕಾದರೂ ನಾಮಪತ್ರ ಸಲ್ಲಿಸಬಹುದು. ಇಂತಹ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಚುನಾವಣೆ ನಡೆಸುವ ಪಕ್ಷ ನಮ್ಮದು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಸೆ.4 ರಂದು ದೆಹಲಿಯಲ್ಲಿ ‘ಮೆಹಂಗಾಯಿ ಪರ್ ಹಲ್ಲಾ ಬೋಲ್’ ರ್ಯಾಲಿ ಮಾಡಲು ಕಾಂಗ್ರೆಸ್ ಕಾರ್ಯಕಾರಿ ನಿರ್ಧರಿಸಿದೆ. ಸೆ.7 ರಂದು ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಲಿದ್ದು ಇದು ಅದ್ಭುತ ಯಶಸ್ಸು ಕಾಣಲಿದೆ ಎಂದು ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.
Published On - 4:38 pm, Sun, 28 August 22