ದೆಹಲಿ: ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ನ್ಯಾಯಾಲಯ ವಕೀಲೆ- ಕಾರ್ಯಕರ್ತೆ ನಿಖಿತಾ ಜಾಕೋಬ್ಗೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದ್ದಾರೆ. ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಪ್ರಕರಣ ಬೆಳಕಿಗೆ ಬಂದ ನಂತರ ನಿಖಿತಾ ಜಾಕೋಬ್ ಕಣ್ಮರೆಯಾಗಿದ್ದಾರೆ ಎಂದು ವಾದಿಸಿರುವ ದೆಹಲಿ ಪೊಲೀಸರ ಮನವಿ ಮೇರೆಗೆ ಈ ವಾರಂಟ್ ಜಾರಿಗೊಳಿಸಲಾಗಿದೆ.
ಈಗಾಗಲೇ ಫೆಬ್ರವರಿ 11ರಂದು ದೆಹಲಿ ಪೊಲೀಸರ ತಂಡ ನಿಖಿತಾ ಜಾಕೋಬ್ ಮನೆಗೆ ತೆರಳಿ ಪರಿಶೀಲಿಸಿತ್ತು. ಅಂದು ತನಿಖೆಗೆ ಸಹಕರಿಸುವುದಾಗಿ ಹೇಳಿದ್ದ ವಕೀಲೆಯೂ ಆಗಿರುವ ನಿಖಿತಾ ಜಾಕೋಬ್ ನಂತರ ಭೂಗತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೂಲ್ಕಿಟ್ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು ದೇಶದ್ರೋಹಿ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಂಡ ಆರೋಪದ ಮೇಲೆ ಬೆಂಗಳೂರು ಮೂಲದ 21 ವರ್ಷದ ದಿಶಾ ರವಿಯನ್ನು ಬಂಧಿಸಿದ್ದರು.
ಜಾಗತಿಕವಾಗಿ ದೆಹಲಿ ಚಲೋ ಚಳುವಳಿಯನ್ನು ಆಯೋಜಿಸಲು ಯೋಜನೆ ರೂಪಿಸಿ, ದೇಶದಲ್ಲಿ ಸರ್ಕಾರಿ ವಿರೋಧಿ ಅಲೆ ಮೂಡಿಸುವ ಟೂಲ್ಕಿಟ್ ಅರ್ಥಾತ್ ಫೈಲ್ ಒಂದನ್ನು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಹಂಚಿಕೊಂಡಿದ್ದರು. ಈ ಟೂಲ್ಕಿಟ್ನ್ನು ಬೆಂಗಳೂರು ಮೂಲದ ದಿಶಾ ರವಿ ತಯಾರಿಸಿದ್ದಾರೆ ಎಂದು ಆರೋಪಿಸಿರುವ ದೆಹಲಿ ಪೊಲೀಸರು ಈಗಾಗಲೇ ದಿಶಾ ರವಿಯನ್ನು ಬಂಧಿಸಿ, 5 ದಿನಗಳ ತನಿಖೆ ನಡೆಸುತ್ತಿದ್ದಾರೆ. ಟೂಲ್ಕಿಟ್ ಮೂಲಕ ದೇಶದಲ್ಲಿ ಅಶಾಂತಿ, ಗಲಭೆ ಸೃಷ್ಟಿಸುವ ಉದ್ದೇಶದೊಂದಿಗೆ ಖಲಿಸ್ತಾನ ಪರ ಒಲವು ಮೂಡಿಸುವ ಉದ್ದೇಶ ಹೊಂದಿದ್ದರು ಎಂಬುದು ದೆಹಲಿ ಪೊಲೀಸರ ವಾದವಾಗಿದೆ.
ಏನಿದು ಟೂಲ್ ಕಿಟ್ ಪ್ರಕರಣ?
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಟೂಲ್ಕಿಟ್ ಒಂದನ್ನು ಗ್ರೇಟಾ ಟ್ವಿಟ್ರ್ನಲ್ಲಿ ಹಂಚಿಕೊಂಡಿದ್ದರು. ಟೂಲ್ಕಿಟ್ ಎಂದರೆ, ಒಂದು ಪ್ರತಿಭಟನೆ ಅಥವಾ ಒಂದು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ ಹೇಗೆ ನಡೆಯಬೇಕು ಎನ್ನುವ ಮಾಹಿತಿ ಇದರಲ್ಲಿ ಇರುತ್ತದೆ. ಗ್ರೇಟಾ ಹಂಚಿಕೊಂಡಿದ್ದ ಟೂಲ್ಕಿಟ್ನಲ್ಲಿ , ಪ್ರತಿಭಟನೆಯಲ್ಲಿ ರೈತರು ಭಾಗವಹಿಸಬೇಕು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಸ್ಥಳೀಯ ಸರ್ಕಾರಿ ಕಚೇರಿ ಅಥವಾ ಅದಾನಿ-ಅಂಬಾನಿಯಂಥ ದೊಡ್ಡ ದೊಡ್ಡ ಉದ್ಯಮಿಗಳ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ಜಾಥಾದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎನ್ನುವುದಕ್ಕೆ ಸ್ಫೂರ್ತಿದಾಯಕವಾಗಿತ್ತು ಈ ಟೂಲ್ಕಿಟ್. ಆದರೆ, ಈ ಪ್ರತಿಭಟನೆ ಹಿಂಸಾಚಾರದೊಂದಿಗೆ ಅಂತ್ಯವಾಗಿತ್ತು. ಗ್ರೇಟಾ ಹಂಚಿಕೊಂಡ ಟೂಲ್ಕಿಟ್ ಅನ್ನು ದಿಶಾ ಪ್ರಸಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ದೆಹಲಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಕುರಿತು 2018ರಲ್ಲಿ ದೊಡ್ಡ ಹೋರಾಟವನ್ನು ಹುಟ್ಟು ಹಾಕಿತ್ತು ಫ್ರೈಡೇ ಫಾರ್ ಫ್ಯೂಚರ್ ಸಂಸ್ಥೆ. ದಿಶಾ ಈ ಸಂಸ್ಥೆಯ ಸಹ ಸಂಸ್ಥಾಪಕಿ. ಹವಾಮಾನ ವೈಪರಿತ್ಯದ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಅಂದು ಬೆಂಗಳೂರಲ್ಲಿ ಚಾಲನೆ ನೀಡಿದ್ದು ಇದೇ ಗ್ರೇಟಾ ಥನ್ಬರ್ಗ್. ಹೀಗಾಗಿ, ಇಬ್ಬರ ನಡುವೆ ನಿಕಟ ಸಂಪರ್ಕವಿದೆ. ಹೀಗಾಗಿ, ಗ್ರೇಟಾ ಹಂಚಿಕೊಂಡಿದ್ದ ಟೂಲ್ ಕಿಟ್ ಅನ್ನು ದಿಶಾ ಎಲ್ಲರಿಗೂ ಪ್ರಸಾರ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Greta Thunberg Toolkit Case | ಬೆಂಗಳೂರಿನ ಯುವ ಹವಾಮಾನ ಹೋರಾಟಗಾರ್ತಿ ಬಂಧನ