ತವರು ಮನೆಗೆ ಹೋಗಬೇಡಾ ಎಂದಿದ್ದಕ್ಕೆ ಹೆಂಡತಿ ಆ ಘೋರ ಕೆಲಸ ಮಾಡಿಬಿಟ್ಟಳು!

|

Updated on: Feb 07, 2024 | 1:20 PM

ಅನುಮಾನಗೊಂಡ ಸಂಬಂಧಿಕರು ಹೆಂಡತಿಯನ್ನು ವಿಚಾರಿಸಿದಾಗ ಅಸಲಿ ವಿಷಯ ತಿಳಿಸಿದ್ದಾಳೆ. ತಾನು ಕೊಟ್ಟ ಚಹಾದಲ್ಲಿ ಇಲಿ ವಿಷವನ್ನು ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ತವರು ಮನೆಗೆ ಹೋಗಬೇಡ ಎಂದು ಗಂಡ ಹೇಳಿದ್ದಕ್ಕೆ ಕೋಪಗೊಂಡು ಎಲ್ಲರಿಗೂ ಇಲಿ ವಿಷ ಬೆರೆಸಿದ ಟೀ ಕೊಟ್ಟೆ ಎಂದಿದ್ದಾಳೆ.

ತವರು ಮನೆಗೆ ಹೋಗಬೇಡಾ ಎಂದಿದ್ದಕ್ಕೆ ಹೆಂಡತಿ ಆ ಘೋರ ಕೆಲಸ ಮಾಡಿಬಿಟ್ಟಳು!
ತವರು ಮನೆಗೆ ಹೋಗಬೇಡಾ ಎಂದಿದ್ದಕ್ಕೆ ಪತ್ನಿ ಆ ಘೋರ ಕೆಲಸ ಮಾಡಿಬಿಟ್ಟಳು!
Follow us on

ಪತಿ-ಪತ್ನಿಯರ ನಡುವಿನ ಜಗಳ ಕುಟುಂಬದ ಇತರೆ ಸದಸ್ಯರ ಜೀವವನ್ನೇ ಬಲಿ ತೆಗೆದುಕೊಂಡಿದೆ. ಚಿಕ್ಕ ವಿಷಯ ದೊಡ್ಡದಾಗಿ ಮನಸ್ತಾಪಕ್ಕೆ ಗುರಿಯಾಗಿ ನೊಂದ ಮಹಿಳೆ ಕುಟುಂಬದವರಿಗೆಲ್ಲ ಇಲಿ ಪಾಷಾಣ ಬೆರೆಸಿದ ಚಹಾವನ್ನು ನೀಡಿದ್ದಾಳೆ. ಆ ಚಹಾ ಸೇವಿಸಿದವರಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಪಲ್ನಾಡು ಜಿಲ್ಲೆಯ ಮಾಚರ್ಲ ಮಂಡಲದ ನಾರಾಯಣಪುರ ತಾಂಡಾದಲ್ಲಿ ಈ ಭಯಾನಕ, ಹೃದಯವಿದ್ರಾವಕ ಘಟನೆ ನಡೆದಿದೆ.

ವಿವರಕ್ಕೆ ಹೋದರೆ… ಪಲ್ನಾಡು ಜಿಲ್ಲೆಯ ಮಾಚರ್ಲ ಮಂಡಲದ ನಾರಾಯಣಪುರ ತಾಂಡಾ ನಿವಾಸಿ ರವಿ ನಾಯಕ್ ಹದಿನೈದು ವರ್ಷಗಳ ಹಿಂದೆ ವಸಂತ ಎಂಬುವವರನ್ನು ವಿವಾಹವಾಗಿದ್ದರು. ಅವರಿಗೆ ನಾಲ್ಕು ಗಂಡು ಮಕ್ಕಳಿದ್ದಾರೆ. ಕೊನೆಯ ಇಬ್ಬರು ಅವಳಿಜವಳಿ. ಇವರಲ್ಲಿ ಮೂವರು ಮಕ್ಕಳು ಅಪ್ಪ-ಅಮ್ಮ ಜೊತೆ ಬೆಳೆಯುತ್ತಿದ್ದರೆ, ಎರಡನೇ ಮಗ ಕಾರ್ತಿಕ್ ಪ್ರಕಾಶ್ ಅಮ್ಮಮ್ಮ ಮನೆಯಲ್ಲಿ ಬೆಳೆಯುತ್ತಿದ್ದಾನೆ. ಆದರೆ, ಸಂಸಾರ ದೊಡ್ಡದಿರುವುದರಿಂದ ರವಿನಾಯಕ್ ಹೈದರಾಬಾದ್ ನಲ್ಲಿ ನೆಲೆಸಿದ್ದು, ಆಟೋ ಓಡಿಸುತ್ತಿದ್ದಾರೆ. ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಹೀಗಿರುವಾಗ ಮೂರು ದಿನಗಳ ಹಿಂದೆ ರವಿನಾಯಕ್ ನಾರಾಯಣಪುರ ತಾಂಡಾಕ್ಕೆ ಬಂದಿದ್ದರು.

ಹೈದರಾಬಾದಿಗೆ ವಾಪಸಾಗುತ್ತಿದ್ದಾಗ ವಸಂತಾ ತನ್ನ ಹುಟ್ಟೂರು ನಲ್ಗೊಂಡ ಜಿಲ್ಲೆ ನರಸಾಪುರಕ್ಕೆ ಹೋಗುವುದಾಗಿ ರವಿನಾಯಕನಿಗೆ ಹೇಳಿದ್ದಾಳೆ. ಆದರೆ ರವಿನಾಯಕ್ ಅದಕ್ಕೆ ಬೇಸರಿಕೊಂಡು, ಒಪ್ಪಲಿಲ್ಲ. ಈಗ ಬೇಡಾ ಎಂದಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಬೆಳಗ್ಗೆ ನಿದ್ದೆಯಿಂದ ಎಲ್ಲರೂ ಎದ್ದಾಗ ಎಂದಿನಂತೆ ವಸಂತಾ ಸ್ಟ್ರಾಂಗ್ ಟೀ ಮಾಡಿಕೊಟ್ಟಿದ್ದಾಳೆ. ಮೂವರು ಮಕ್ಕಳೊಂದಿಗೆ ರವಿ ಮತ್ತು ವಸಂತಾ ಕೂಡ ಚಹಾ ಸೇವಿಸಿದ್ದಾರೆ.

ಇದನ್ನೂ ಓದಿ: ಮೂವರ ಮದುವೆಯಾಗಿದ್ದ ಈರಪ್ಪ ಸಾಕಷ್ಟು ಶ್ರೀಮಂತ, ಆತನನ್ನು ಯಾರೋ ಮೊನ್ನೆ ಹತ್ಯೆ ಮಾಡಿದ್ದಾರೆ -ಯಾರು ಯಾಕೆ?

ಆದರೆ ಸ್ವಲ್ಪ ಹೊತ್ತಿನಲ್ಲಿ ಮಕ್ಕಳೆಲ್ಲಾ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಇದರಿಂದಾಗಿ ಮಕ್ಕಳನ್ನು ಕೂಡಲೇ ಮಾಚರ್ಲ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಒಬ್ಬೊಬ್ಬರಾಗಿ ಮೂವರೂ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಮಧ್ಯೆ ರವಿ ನಾಯಕ್ ಸ್ಥಿತಿ ಚಿಂತಾಜನಕವಾಗಿದೆ. ರವಿ ನಾಯಕ್ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ವಸಂತ ಗುಂಟೂರು ಜಿಜಿಎಚ್‌ನಲ್ಲಿದ್ದಾರೆ.

ಇದರಿಂದ ಅನುಮಾನಗೊಂಡ ಸಂಬಂಧಿಕರು ಬಂದು ವಸಂತಳನ್ನು ವಿಚಾರಿಸಿಕೊಂಡಾಗ ಅಸಲಿ ವಿಷಯ ತಿಳಿಸಿದ್ದಾಳೆ. ತಾನು ಕೊಟ್ಟ ಚಹಾದಲ್ಲಿ ಇಲಿ ವಿಷವನ್ನು ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ತವರು ಮನೆಗೆ ಹೋಗಬೇಡ ಎಂದು ಗಂಡ ಹೇಳಿದ್ದಕ್ಕೆ ಕೋಪಗೊಂಡು ಎಲ್ಲರಿಗೂ ಇಲಿ ವಿಷ ಬೆರೆಸಿದ ಟೀ ಕೊಟ್ಟೆ ಎಂದು ಹೇಳಿದ್ದಾಳೆ. ಪತಿ-ಪತ್ನಿಯರ ನಡುವಿನ ಕ್ಷುಲ್ಲಕ ಜಗಳಕ್ಕೆ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು ಗ್ರಾಮದಲ್ಲಿ ದುರಂತದ ಛಾಯೆ ಆವರಿಸಿದೆ. ರವಿ ನಾಯಕ್, ವಸಂತ ದಂಪತಿಯ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ