
ಬೆರ್ಹಾಂಪುರ್ , ಅಕ್ಟೋಬರ್ 19: ಎರಡು ಪ್ರತ್ಯೇಕ ತಲೆಗಳು ಹಾಗೂ ಒಂದೇ ದೇಹದೊಂದಿಗೆ ಜನಿಸಿ ವೈದ್ಯಕೀಯ ಲೋಕದಲ್ಲಿ ತೀವ್ರ ಅಚ್ಚರಿ ಮೂಡಿಸಿದ್ದ ಅಪರೂಪದ ಸಯಾಮಿ ಅವಳಿ ಗಂಡು ಶಿಶುಗಳು, ಜನಿಸಿದ ಕೇವಲ ಒಂದು ವಾರದಲ್ಲಿ ಕೊನೆಯುಸಿರೆಳೆದಿವೆ. ಸರ್ಕಾರಿ ಸ್ವಾಮ್ಯದ ಎಂಕೆಸಿಜಿ (MKCG) ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಜ್ಞ ತಂಡ ಎಷ್ಟೇ ಪ್ರಯತ್ನಿಸಿದರೂ ಕಂದಮ್ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕಂಧಮಾಲ್ ಜಿಲ್ಲೆಯ ತುಮುಡಿಬಂಧ ವ್ಯಾಪ್ತಿಯ ದಿನಗೂಲಿ ಕಾರ್ಮಿಕ ದಂಪತಿಗೆ ಅಕ್ಟೋಬರ್ 11 ರಂದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಈ ಅಪರೂಪದ ಶಿಶು ಜನಿಸಿತ್ತು. ಇದು ಆ ತಾಯಿಯ ಮೊದಲ ಗರ್ಭಧಾರಣೆಯಾಗಿತ್ತು. ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು ‘ಡೈಸೆಫಾಲಿಕ್ ಪ್ಯಾರಾಪೇಗಸ್’ ಎಂದು ಕರೆಯಲಾಗುತ್ತದೆ. ಜನನದ ವೇಳೆ ಶಿಶು 2.25 ಕೆಜಿ ತೂಕವಿತ್ತು. ಮಗುವಿಗೆ ಪ್ರತ್ಯೇಕ ಎರಡು ತಲೆ, ಎರಡು ಕುತ್ತಿಗೆ ಮತ್ತು ಬೆನ್ನುಹುರಿಗಳಿದ್ದವು. ಆದರೆ ಮುಂಡ ಒಂದೇ ಆಗಿತ್ತು.
ಅಂಗಾಂಗ ಹಂಚಿಕೆ: ಆಶ್ಚರ್ಯಕರವೆಂದರೆ, ಶಿಶುವಿಗೆ ಒಂದೇ ಹೃದಯ ಮತ್ತು ಒಂದೇ ಯಕೃತ್ತು (ಲಿವರ್) ಇತ್ತು. ಜೊತೆಗೆ ಒಂದು ಜೋಡಿ ಕೈ ಮತ್ತು ಕಾಲುಗಳಿದ್ದವು. ಗಂಡು ಬಾಹ್ಯ ಜನನಾಂಗಗಳಿದ್ದರೂ ಮೂತ್ರನಾಳ ಒಂದೇ ಇತ್ತು ಹಾಗೂ ಗುದದ್ವಾರವೂ ಇರಲಿಲ್ಲ.
ಮತ್ತಷ್ಟು ಓದಿ: 2 ತಲೆ, 2 ಬೆನ್ನುಹುರಿ, ಒಂದೇ ಹೃದಯ: ಒಡಿಶಾದಲ್ಲಿ ಅಪರೂಪದ ಸಯಾಮಿ ಅವಳಿಗಳ ಜನನ, ವೈದ್ಯಕೀಯ ಲೋಕ ದಿಗ್ಭ್ರಮೆ
ಶಸ್ತ್ರಚಿಕಿತ್ಸೆಗೆ ಅಡ್ಡಿ: ಅಂಗಾಗಗಳನ್ನು ಬೇರ್ಪಡಿಸುವ ಅಥವಾ ಜೀವ ಉಳಿಸುವ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಯೋಚಿಸಿದ್ದರಾದರೂ, ಜನಿಸಿದ ಮರುದಿನವೇ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆ ಅಸಾಧ್ಯವಾಗಿತ್ತು. ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ (SNCU) ಲೈಫ್ ಸಪೋರ್ಟ್‌ನಲ್ಲಿದ್ದ ಶಿಶು ಶನಿವಾರ ಸಾವನ್ನಪ್ಪಿದೆ.
ಅಸಾಮಾನ್ಯ ರೂಪದೊಂದಿಗೆ ಜನಿಸಿದ ಮಗುವನ್ನು ಕಂಡು ಬಡ ಪೋಷಕರು ಆರಂಭದಲ್ಲಿ ತೀವ್ರ ಆಘಾತಕ್ಕೊಳಗಾಗಿದ್ದರು. ಮಗು ಸಾವನ್ನಪ್ಪಿದ ಬಳಿಕ ಮೃತದೇಹವನ್ನು ತಮ್ಮೂರಿಗೆ ಕೊಂಡೊಯ್ಯಲು ನಿರಾಕರಿಸಿದ್ದರು. ನಂತರ ಗಂಜಾಂ ಜಿಲ್ಲಾಡಳಿತ ಮತ್ತು ಆಸ್ಪತ್ರೆಯ ಅಧಿಕಾರಿಗಳು ದಂಪತಿಗೆ ಕೌನ್ಸೆಲಿಂಗ್ ನಡೆಸಿ ಮನವೊಲಿಸಿ, ಸರ್ಕಾರಿ ಶವವಾಹನದ ಮೂಲಕ ಮೃತದೇಹವನ್ನು ಅವರ ಹುಟ್ಟೂರಿಗೆ ಕಳುಹಿಸಿಕೊಟ್ಟರು. ವೈದ್ಯಕೀಯ ಅಂಕಿಅಂಶಗಳ ಪ್ರಕಾರ, ಇಂತಹ ಸಮ್ಮಿಶ್ರ ಅವಳಿಗಳ ಜನನವು ಪ್ರತಿ 2 ರಿಂದ 3 ಲಕ್ಷ ಹೆರಿಗೆಗಳಲ್ಲಿ ಒಂದರಲ್ಲಿ ಮಾತ್ರ ಕಂಡುಬರುತ್ತದೆ.
ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ: ಗರ್ಭಾವಸ್ಥೆಯಲ್ಲಿ ಭ್ರೂಣವು ಸಂಪೂರ್ಣವಾಗಿ ಎರಡು ಭಾಗಗಳಾಗಿ ವಿಭಜನೆಯಾಗಲು ವಿಫಲವಾದಾಗ ಈ ಸ್ಥಿತಿ ಉಂಟಾಗುತ್ತದೆ. ಪ್ರಮುಖ ಅಂಗಗಳಾದ ಹೃದಯ, ಶ್ವಾಸಕೋಶ ಮತ್ತು ಯಕೃತ್ತು ಒಂದೇ ಆಗಿರುವುದರಿಂದ ಶಸ್ತ್ರಚಿಕಿತ್ಸೆಯ ಮೂಲಕ ಇಬ್ಬರನ್ನೂ ಬೇರ್ಪಡಿಸುವುದು ವೈದ್ಯಕೀಯವಾಗಿ ಬಹುತೇಕ ಅಸಾಧ್ಯ. ಇಂತಹ ಶಿಶುಗಳು ಜನಿಸಿದ ಕೆಲವೇ ಗಂಟೆಗಳು ಅಥವಾ ದಿನಗಳಲ್ಲಿ ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪುವ ಸಂಭವವೇ ಹೆಚ್ಚು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ