ಮಗುವನ್ನು ಕಸದ ಬುಟ್ಟಿಗೆ ಹಾಕಿ, ನಾನು ಹಾಲು ಕುಡಿಸೋದಿಲ್ಲ; ಒಂದೇಸಮನೆ ಹಠ ಹಿಡಿದ ಬಾಣಂತಿ
ಉತ್ತರ ಪ್ರದೇಶದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ತಾಯಿಯೊಬ್ಬಳು ತಾನು ಹೆತ್ತ ಮಗುವಿಗೆ ಎದೆಹಾಲು ಕುಡಿಸುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. "ಅದನ್ನು ಕಸದ ಬುಟ್ಟಿಗೆ ಎಸೆಯಿರಿ, ನಾನು ಅದಕ್ಕೆ ಹಾಲು ಕೊಡುವುದಿಲ್ಲ" ಎಂದು ಗೋರಖ್‌ಪುರದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ ಹಠ ಮಾಡುವ ಮೂಲಕ ವೈದ್ಯರನ್ನು ಅಚ್ಚರಿಗೊಳಿಸಿದ್ದಾಳೆ.

ಗೋರಖ್ಪುರ, ಡಿಸೆಂಬರ್ 18: ‘ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು’ ಎಂಬ ಗಾದೆ ಮಾತೊಂದಿದೆ. ತಾಯಿ ಎಂಥದ್ದೇ ಪರಿಸ್ಥಿತಿ ಬಂದರೂ ತಾನು ಹೆತ್ತ ಮಗುವನ್ನು ಬಿಟ್ಟುಕೊಡುವುದಿಲ್ಲ, ಅದಕ್ಕೆ ತೊಂದರೆಯಾದರೆ ಸಹಿಸುವುದೂ ಇಲ್ಲ. ಆದರೆ, ಗೋರಖ್‌ಪುರದ (Gorakhpur) ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಕೆ ಹೆರಿಗೆಯ ನಂತರ ಮಗುವಿಗೆ ಹಾಲುಣಿಸಲು ನಿರಾಕರಿಸಿದಳು. ಇದು ವೈದ್ಯರಿಗೆ ಆಘಾತ ಉಂಟುಮಾಡಿದೆ. ಆಕೆಯ ಮನೆಯವರು, ವೈದ್ಯರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಅದಕ್ಕೆ ಒಪ್ಪಲಿಲ್ಲ.
“ಈ ಮಗು ವಿಶ್ವಾಸದ್ರೋಹಿಯಾದ ನನ್ನ ಗಂಡನ ಮಗು. ಆ ಮಗುವನ್ನು ಬೇಕಿದ್ದರೆ ಕಸದ ಬುಟ್ಟಿಗೆ ಎಸೆಯಿರಿ, ಆದರೆ ನಾನು ಅವನಿಗೆ ಹಾಲುಣಿಸುವುದಿಲ್ಲ ಅಥವಾ ಬೆಳೆಸುವುದೂ ಇಲ್ಲ” ಎಂದು ಆಕೆ ಹೇಳಿದ್ದಾಳೆ.
“ಮಗುವನ್ನು ನೋಡಿಕೊಳ್ಳಬೇಕಾದ ನನ್ನ ಪತಿ ಬೇರೆ ಮಹಿಳೆಯೊಂದಿಗೆ ಓಡಿಹೋದ. ಹಾಗಾದರೆ ನಾನೊಬ್ಬಳೇ ಏಕೆ ಈ ಮಗುವನ್ನು ಬೆಳೆಸಬೇಕು?” ಎಂದು ಆಕೆ ಹತಾಶಳಾಗಿ ಪ್ರಶ್ನಿಸಿದ್ದಾಳೆ. ತನ್ನ ಪತಿ ತನ್ನ ಜೀವನವನ್ನು ಹಾಳು ಮಾಡಿದ್ದರಿಂದ ಆ ಮಗುವನ್ನು ಇಟ್ಟುಕೊಳ್ಳುವುದಿಲ್ಲ ಎಂದು ಆ ಮಹಿಳೆ ಹೇಳಿದ್ದಾಳೆ. “ಆ ಮಗುವನ್ನು ನೀವು ಎಲ್ಲಿ ಬೇಕಾದರೂ ಬಿಡಿ ಅಥವಾ ಕಸಕ್ಕೆ ಬೇಕಾದರೂ ಎಸೆಯಿರಿ” ಎಂದು ಆಕೆ ಹಠ ಹಿಡಿದಿದ್ದಾಳೆ.
ಇದನ್ನೂ ಓದಿ: ಬುರ್ಖಾ ಧರಿಸದೆ ಹೊರಹೋಗಿದ್ದಕ್ಕೆ ಹೆಂಡತಿ, ಮಕ್ಕಳನ್ನು ಕೊಂದೆ; ಶಾಕಿಂಗ್ ವಿಷಯ ಬಿಚ್ಚಿಟ್ಟ ಪಾಪಿ
ಈ ಸುದ್ದಿ ಕೇಳಿದ ಕೂಡಲೇ ಜನರು ಆ ಮಗುವನ್ನು ದತ್ತು ಪಡೆಯಲು ಆಸ್ಪತ್ರೆಗೆ ಬರಲು ಪ್ರಾರಂಭಿಸಿದರು. ಕೊನೆಗೆ ಈ ವಿಷಯ ಎಸ್‌ಐಸಿ ಜೈ ಕುಮಾರ್‌ಗೆ ತಲುಪಿ, ಅವರು ತಕ್ಷಣವೇ ಮಕ್ಕಳ ಸಹಾಯವಾಣಿಗೆ ಇಡೀ ವಿಷಯದ ಬಗ್ಗೆ ಮಾಹಿತಿ ನೀಡಿದರು. ಕೊನೆಗೆ ಆಸ್ಪತ್ರೆಯ ಆಡಳಿತ ಮಂಡಳಿಯೂ ಮಹಿಳೆಯನ್ನು ಮನವೊಲಿಸಲು ಪ್ರಯತ್ನಿಸಿತು. ಸುಮಾರು 48 ಗಂಟೆಗಳ ಪ್ರಯತ್ನದ ನಂತರ ಆ ಮಗುವನ್ನು ತನ್ನ ಜೊತೆ ಇಟ್ಟುಕೊಂಡು, ಬೆಳೆಸಲು ಆಕೆ ಒಪ್ಪಿಕೊಂಡಳು.
ಆ ಮಹಿಳೆಯ ಪತಿ ಚಾಲಕರಾಗಿದ್ದರು. ಅವರು ತಮ್ಮ ಕುಟುಂಬದ ಒಪ್ಪಿಗೆಯೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಅವರ ಕುಟುಂಬವು ಸಂತೋಷದಿಂದಲೇ ಬದುಕುತ್ತಿತ್ತು. ಅವರು ತಮ್ಮ ಕುಟುಂಬದೊಂದಿಗೆ ಬಿಹಾರದ ದರ್ಭಾಂಗದಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಕೆಲವು ತಿಂಗಳ ನಂತರ, ಆಕೆಯ ಪತಿ ಆಕೆಯನ್ನು ದೆಹಲಿಗೆ ಕರೆದೊಯ್ದರು. ಸುಮಾರು 5 ತಿಂಗಳ ಹಿಂದೆ ಆತ ಬೇರೆ ಮಹಿಳೆಯ ಜೊತೆ ಸಂಬಂಧ ಹೊಂದಿ ಈ ಮಹಿಳೆಯನ್ನು ಬಿಟ್ಟು ಹೋದರು.
ಇದನ್ನೂ ಓದಿ: ಇವ್ನೆಂಥಾ ಮಗ, ಹೆತ್ತ ತಂದೆ ತಾಯಿಯನ್ನು ಹೊಡೆದು ಕೊಂದು, ದೇಹಗಳನ್ನು ಕತ್ತರಿಸಿ ನದಿಗೆಸೆದ ಮಗ
ಅಷ್ಟರಲ್ಲಾಗಲೇ ಗರ್ಭಿಣಿಯಾಗಿದ್ದ ಆಕೆ ಮಗುವನ್ನು ತೆಗೆಸಲೂ ಆಗದೆ ಗಂಡ ವಾಪಾಸ್ ಬರುತ್ತಾನೆಂದು ಕಾಯುತ್ತಲೇ ಇದ್ದಳು. ಮಗು ಹುಟ್ಟಿದ ವಿಷಯ ತಿಳಿದರೂ ಆತ ಬಾರದೆ ಇದ್ದುದರಿಂದ ಆಕೆ ತಾಳ್ಮೆಗೆಟ್ಟು ಮಗುವೇ ಬೇಡವೆಂದು ಹಠ ಹಿಡಿದಿದ್ದಳು. ತಾನೊಬ್ಬಳೇ ಆ ಮಗುವನ್ನು ಹೇಗೆ ಬೆಳೆಸುವುದು ಎಂಬ ಚಿಂತೆ ಆಕೆಯನ್ನು ಕಾಡಿತ್ತು. ಗಂಡ ಬಿಟ್ಟುಹೋದ ನಂತರ ಗೊತ್ತಿಲ್ಲದ ಊರಾದ ದೆಹಲಿಯಲ್ಲಿ ಬೇರೆಯವರ ಮನೆ ಅಡುಗೆ ಮಾಡಿ ಆಕೆ ಮನೆಯ ಬಾಡಿಗೆ ಕಟ್ಟಿ, ಜೀವನ ನಡೆಸುತ್ತಿದ್ದಳು. ಇನ್ನು ಮುಂದೆ ಪುಟ್ಟ ಮಗುವನ್ನು ಬಿಟ್ಟುಕೊಂಡು ಕೆಲಸ ಮಾಡಿ ದುಡಿಯಲೂ ಸಾಧ್ಯವಾಗದ ಕಾರಣದಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 pm, Thu, 18 December 25




