
ಭುವನೇಶ್ವರ, ಜೂನ್ 11: ಒಡಿಶಾದ ಗಂಜಾಂ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಯುವತಿಯೊಬ್ಬಳು ತನ್ನನ್ನು ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಕಾರಣಕ್ಕಾಗಿ ಆಕೆಯ ಪ್ರಿಯಕರನೇ ಆಕೆಯನ್ನು ಕ್ರೂರವಾಗಿ ಕೊಂದಿದ್ದಾನೆ. ಮೃತರನ್ನು ಅಂಬಿಕಾ ಎಂದು ಗುರುತಿಸಲಾಗಿದೆ. ಆರೋಪಿಯು ಈ ಕೊಲೆಯನ್ನು ರಸ್ತೆ ಅಪಘಾತ (Accident) ಎಂದು ಬಿಂಬಿಸಲು ಸಕಲ ಪ್ರಯತ್ನ ನಡೆಸಿದ್ದರೂ, ಪೊಲೀಸರ ಚುರುಕಿನ ತನಿಖೆಯಿಂದಾಗಿ ಸತ್ಯ ಹೊರಬಂದಿದೆ. ದಿಗಪಹಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಿಮಖಂಡಿ ಪೆಂತ್ ನಿವಾಸಿ ರಾಕೇಶ್ ಆಚಾರ್ಯ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ರಾಕೇಶ್ ಮತ್ತು ಅಂಬಿಕಾ ಇಬ್ಬರೂ ದೀರ್ಘಕಾಲದಿಂದ ಪ್ರೀತಿಸುತ್ತಿದ್ದರು. ಅಂಬಿಕಾ ಪಿಯುಸಿ ಮುಗಿಸಿ, ಡಾಕ್ಟರ್ ಆಗಬೇಕೆಂಬ ದೊಡ್ಡ ಕನಸಿನೊಂದಿಗೆ ಬೆಹರಾಂಪುರದಲ್ಲಿ ಉಳಿದುಕೊಂಡು ನೀಟ್ (NEET) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಇತ್ತೀಚಿನ ದಿನಗಳಲ್ಲಿ ಅಂಬಿಕಾ ತಾವಿಬ್ಬರೂ ಮದುವೆಯಾಗೋಣ ಎಂದು ರಾಕೇಶ್‌ಗೆ ಒತ್ತಾಯ ಮಾಡಲಾರಂಭಿಸಿದ್ದಳು. ಆದರೆ ಮದುವೆಯ ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟವಿಲ್ಲದ ರಾಕೇಶ್, ಆಕೆಯನ್ನು ತನ್ನ ಹಾದಿಯಿಂದ ಶಾಶ್ವತವಾಗಿ ಮುಗಿಸಲು ಸಂಚು ರೂಪಿಸಿದ್ದ.
ಇದನ್ನೂ ಓದಿ: ಐಶಾರಾಮಿ ಜೀವನಕ್ಕಾಗಿ ಉಂಡ ಮನೆಗೇ ಕನ್ನ: 25 ಲಕ್ಷ ಹಣ ಕದ್ದು ಜೈಲುಪಾಲಾದ ನೇಪಾಳಿ ದಂಪತಿ
ಜೂನ್ 7ರಂದು ರಾಕೇಶ್ ಒಟ್ಟಿಗೆ ಸಮಯ ಕಳೆಯುವ ನೆಪದಲ್ಲಿ ಅಂಬಿಕಾಳನ್ನು ತನ್ನ ಬೈಕ್‌ನಲ್ಲಿ ಗೋಪಾಲಪುರಕ್ಕೆ ಕರೆದೊಯ್ದಿದ್ದ. ದಿನವಿಡೀ ಇಬ್ಬರೂ ಒಟ್ಟಿಗೆ ಕಳೆದಿದ್ದಾರೆ. ನಂತರ ಅಂದು ತಡರಾತ್ರಿ ಇಬ್ಬರೂ ಬೈಕ್‌ನಲ್ಲಿ ವಾಪಾಸ್ ಬರುತ್ತಿದ್ದಾಗ, ರಾಕೇಶ್ ಅಂಕುಲಿ ಮೇಲ್ಸೇತುವೆ ಬಳಿ ಬೈಕ್ ನಿಲ್ಲಿಸಿದ್ದಾನೆ. ಆಕೆ ಏನಾಯಿತೆಂದು ಯೋಚಿಸುವಷ್ಟರಲ್ಲೇ ಆಕೆಯನ್ನು ಮೇಲ್ಸೇತುವೆಯಿಂದ ಕೆಳಗೆ ತಳ್ಳಿದ್ದಾನೆ. ಆಕೆ ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕೊಲೆಯ ನಂತರ ಆರೋಪಿ ರಾಕೇಶ್ ಇದೊಂದು ಭೀಕರ ರಸ್ತೆ ಅಪಘಾತ ಎಂದು ಜಗತ್ತನ್ನು ನಂಬಿಸಲು ನಾಟಕವಾಡಿದ್ದಾನೆ. ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಆಕಸ್ಮಿಕ ಅಪಘಾತದಲ್ಲಿ ಅಂಬಿಕಾ ತೀರಿಕೊಂಡಿದ್ದಾಳೆ ಎಂದು ಆತನೇ ಸ್ವತಃ ಯುವತಿಯ ಕುಟುಂಬಸ್ಥರಿಗೆ ಫೋನ್ ಮಾಡಿ ತಿಳಿಸಿದ್ದಾನೆ. ಆದರೆ, ಘಟನೆಯ ಬಗ್ಗೆ ಆತ ನೀಡಿದ ಹೇಳಿಕೆಗಳಿಗೂ ಮತ್ತು ಪರಿಸ್ಥಿತಿಗೂ ಹೊಂದಾಣಿಕೆಯಾಗುತ್ತಿರಲಿಲ್ಲ. ರಾಕೇಶ್ ಮಾತಿನಲ್ಲಿದ್ದ ಗೊಂದಲಗಳನ್ನು ಗಮನಿಸಿದ ಅಂಬಿಕಾಳ ಸೋದರಮಾವ ಕನ್ಹೂ ಜೇನಾ ಅವರಿಗೆ ತೀವ್ರ ಅನುಮಾನ ಮೂಡಿ, ಬೈದ್ಯನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಒಂದೇ ಕುಟುಂಬದ ಮೂವರು ನಿಗೂಢ ಸಾವು: ಡೆತ್ ನೋಟ್ನಿಂದ ಸಾವಿನ ರಹಸ್ಯ ಬಯಲಿಗೆ
ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಕಲೆಹಾಕಿದ್ದರು. ತನಿಖೆ ಮುಂದುವರಿದಂತೆ ಇದು ಕೇವಲ ಸಾಮಾನ್ಯ ರಸ್ತೆ ಅಪಘಾತವಲ್ಲ, ಬದಲಿಗೆ ವ್ಯವಸ್ಥಿತವಾಗಿ ನಡೆದ ಕೊಲೆ ಎಂಬುದಕ್ಕೆ ಪೊಲೀಸರಿಗೆ ಗಟ್ಟಿಯಾದ ಸುಳಿವುಗಳು ಸಿಕ್ಕಿತ್ತು. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ರಾಕೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ