ಐಶಾರಾಮಿ ಜೀವನಕ್ಕಾಗಿ ಉಂಡ ಮನೆಗೇ ಕನ್ನ: 25 ಲಕ್ಷ ಹಣ ಕದ್ದು ಜೈಲುಪಾಲಾದ ನೇಪಾಳಿ ದಂಪತಿ
ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ 25 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದ ನೇಪಾಳಿ ದಂಪತಿಯನ್ನು ಅಮೃತಹಳ್ಳಿ ಪೊಲೀಸರು ಕೇವಲ ಒಂದೇ ದಿನದಲ್ಲಿ ಬಂಧಿಸಿ, ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ. ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕಳ್ಳತನ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಂಡ ಮನೆಗೇ ಕನ್ನ ಹಾಕಿದವರೀಗ ಜೈಲು ಪಾಲಾಗಿದ್ದಾರೆ.

ಬೆಂಗಳೂರು, ಜೂನ್ 10: ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದ ಮನೆಗೇ ಕನ್ನ ಹಾಕಿದ್ದ ನೇಪಾಳಿ ದಂಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬಂಧಿತರನ್ನು ಭುವನ್ ಬಿಸ್ತಾ ಅಲಿಯಾಸ್ ಪವನ್ ಬಿಸ್ತಾ (35) ಹಾಗೂ ಅವರ ಪತ್ನಿ ಸೀತಾ ಬಿಸ್ತಾ (33) ಎಂದು ಗುರುತಿಸಲಾಗಿದೆ. ಗುತ್ತಿಗೆದಾರರೊಬ್ಬರ ಮನೆಯಲ್ಲಿ ಗೃಹ ಸಹಾಯಕರು ಹಾಗೂ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಈ ದಂಪತಿ 25 ಲಕ್ಷ ನಗದು ಕದ್ದು ಪರಾರಿಯಾಗಿದ್ದರು. ಪ್ರಕರಣದ ಬೆನ್ನುಬಿದ್ದ ಪೊಲೀಸರು ಕೇವಲ ಒಂದೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದು, ಕಳುವಾಗಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಹಣ ಕದ್ದು ಎಸ್ಕೇಪ್ ಆಗಿದ್ದ ಆರೋಪಿಗಳು
ಅರ್ಕಾವತಿ ಲೇಔಟ್ ನಿವಾಸಿ ಹಾಗೂ ಗುತ್ತಿಗೆದಾರ ಸಿ.ಎಚ್. ಸುಬ್ಬಾರೆಡ್ಡಿ ಅವರು ಕಾರ್ಮಿಕರಿಗೆ ವೇತನ ಪಾವತಿಸಲು ಇತ್ತೀಚೆಗೆ ಬ್ಯಾಂಕಿನಿಂದ ತಂದ 25 ಲಕ್ಷ ಹಣವನ್ನು ಮನೆಯ ಕಪಾಟಿನಲ್ಲಿ ಇಟ್ಟು ಬೀಗ ಹಾಕಿದ್ದರು. ಬಳಿಕ ಕಪಾಟಿನ ಕೀಲಿಯನ್ನು ಮತ್ತೊಂದು ಕಪಾಟಿನಲ್ಲಿದ್ದ ಬಟ್ಟೆಗಳ ಕೆಳಗೆ ಅಡಗಿಸಿಟ್ಟಿದ್ದರು. ಈ ನಡುವೆ ಮೇ 27ರಂದು ಸುಬ್ಬಾರೆಡ್ಡಿ ಅವರು ವೈಯಕ್ತಿಕ ಕೆಲಸಕ್ಕಾಗಿ ಹೊರಗೆ ಹೋಗಿದ್ದರೆ, ಅವರ ಪತ್ನಿ ಮನೆಯಲ್ಲಿದ್ದರು. ಸಂಜೆ ಮನೆಗೆ ಮರಳಿದಾಗ ಕೆಲಸಕ್ಕಿದ್ದ ದಂಪತಿ ಕಾಣೆಯಾಗಿದ್ದು, ಅವರಿಗೆ ನೀಡಲಾಗಿದ್ದ ಕೊಠಡಿ ತೆರೆದ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿತ್ತು. ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು. ಇದರಿಂದ ಅನುಮಾನಗೊಂಡ ಅವರು ಕಪಾಟು ಪರಿಶೀಲಿಸಿದಾಗ 25 ಲಕ್ಷ ನಗದು ಕಳುವಾಗಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ; ಬೆಂಗಳೂರು ಏರ್ಪೋರ್ಟ್ನಲ್ಲಿ 1.37 ಕೋಟಿ ಮೌಲ್ಯದ ಬಂಗಾರ ವಶಕ್ಕೆ
ಈ ಸಂಬಂಧ ಮೇ 28ರಂದು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಸಿ.ಎಚ್. ಸುಬ್ಬಾರೆಡ್ಡಿ ಅವರು, ಕಳೆದ ಒಂದು ತಿಂಗಳಿಂದ ನೇಪಾಳ ಮೂಲದ ದಂಪತಿ ತಮ್ಮ ಮನೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ್ದರು. ಕೂಡಲೇ ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇನ್ಸ್‌ಪೆಕ್ಟರ್ ಬಾಲಾಜಿ ವಿ ನೇತೃತ್ವದ ತಂಡಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮೇ 28ರಂದು ಕೆಂಗೇರಿ ಸ್ಯಾಟಲೈಟ್ ಟೌನ್‌ನ ಶಿರ್ಕೆ ಲೇಔಟ್‌ನಲ್ಲಿರುವ ಆರೋಪಿಗಳ ಸಂಬಂಧಿಕರ ಮನೆಯಲ್ಲಿ ದಾಳಿ ನಡೆಸಿ ದಂಪತಿಯನ್ನು ಬಂಧಿಸಲಾಗಿದೆ. ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕಳ್ಳತನ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:41 pm, Wed, 10 June 26




