
ಪುರಿ, ನವೆಂಬರ್ 10: ಒಡಿಶಾದ (Odisha) ಮಲ್ಕನ್‌ಗಿರಿ ಜಿಲ್ಲೆಯಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆ ನಡೆಯುತ್ತಿತ್ತು. ಇಲ್ಲಿಗೆ ಬಾಣಂತಿಯೊಬ್ಬರು ತಮ್ಮ ಪುಟ್ಟ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಒಳಗೆ ಆ ಮಹಿಳೆ ಪರೀಕ್ಷೆ ಬರೆಯುವಾಗ ಆ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು. ಇದರಿಂದ ಒಳಗಿದ್ದ ಅಮ್ಮನಿಗೆ ಸಂಕಟವಾಗಿ ಪರೀಕ್ಷೆಯತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಆ ತಾಯಿಗೆ ಸಹಾಯ ಮಾಡಲು ಮುಂದಾದ ಒಡಿಶಾ ಮಹಿಳಾ ಕಾನ್‌ಸ್ಟೆಬಲ್ ತಾನೇ ಆ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು, ಎದೆಹಾಲು (Breast Feeding) ಕುಡಿಸಿ, ನಿದ್ರೆ ಮಾಡಿಸುವ ಮೂಲಕ ತಾಯ್ತನ ಮತ್ತು ಮಾನವೀಯತೆ ಮೆರೆದಿದ್ದಾರೆ.
ಹಾಲು ಕುಡಿದ ಆ ಮಗು ಅಳುವುದು ನಿಲ್ಲಿಸಿ ಆ ಪೊಲೀಸ್ ಮಡಿಲಲ್ಲೇ ನಿದ್ರೆ ಮಾಡಿದೆ. ನೇಮಕಾತಿ ಪರೀಕ್ಷೆಯ ವೇಳೆ ಭದ್ರತೆಗೆ ಬಂದಿದ್ದ ಪೊಲೀಸ್ ಕಾನ್‌ಸ್ಟೆಬಲ್ ಆ ಮಗುವಿಗೆ ಹಾಲುಣಿಸಿ, ತಾಯ್ತನ ತೋರಿದ ಘಟನೆಯ ಬಗ್ಗೆ ಒಡಿಶಾ ಪೊಲೀಸ್ ಇಲಾಖೆ ಎಕ್ಸ್ನಲ್ಲಿ ಮಾಹಿತಿ ನೀಡಿದೆ. ಮಹಿಳಾ ಕಾನ್‌ಸ್ಟೆಬಲ್ ರಜನಿ ಮಾಝಿ ಗಂಟೆಗಟ್ಟಲೆ ಅಳುತ್ತಿದ್ದ ಮಗುವಿಗೆ ಹಾಲುಣಿಸಿ ಸಾಂತ್ವನ ಹೇಳಿದ್ದಾರೆ. ಇದರಿಂದ ತಾಯಿ ನೆಮ್ಮದಿಯಿಂದ ಪರೀಕ್ಷೆ ಬರೆದು ಹೊರಬಂದಿದ್ದಾರೆ.
👮♀️💞 ମାତୃତ୍ବର ନିଆରା ନିଦର୍ଶନ!
ମାଲକାନଗିରି ଜିଲ୍ଲାର ଏକ ପରୀକ୍ଷା କେନ୍ଦ୍ରରେ କାର୍ଯ୍ୟରତ ମହିଳା କନଷ୍ଟେବଳ ରଜନୀ ମାଝୀ ଦେଢ଼ ମାସର ଏକ ଶିଶୁକୁ କୋଳେଇ ନେଇ ଶିଶୁଟି ର ମା’କୁ ପରୀକ୍ଷା ଦେବାରେ ସହାୟତା କରିଥିଲେ। ଶିଶୁଟିର ମା’ ପରୀକ୍ଷା କେନ୍ଦ୍ରରୁ ବାହାରିବା ପର୍ଯ୍ୟନ୍ତ ସେ ସେବା ଯତ୍ନ କରିଥିଲେ। ମାତୃତ୍ବ ଓ କର୍ତ୍ତବ୍ୟର ଏକ… pic.twitter.com/gPcks5vmZ1
— Odisha Police (@odisha_police) November 9, 2025
ಈ ಘಟನೆ ಭಾನುವಾರ ಬಿಬಿಗುಡಾ ಪರೀಕ್ಷಾ ಕೇಂದ್ರದಲ್ಲಿ ಆರ್‌ಐ ಮತ್ತು ಅಮೀನ್ ನೇಮಕಾತಿ ಪರೀಕ್ಷೆಗಳ ಸಮಯದಲ್ಲಿ ನಡೆಯಿತು. ಈ ಪರೀಕ್ಷೆಗೆ ಹಾಜರಾಗುತ್ತಿದ್ದ ಭೈರವಿ ಮಂಡಲ್ ಎಂಬ ಮಹಿಳೆ ತನ್ನ ಒಂದೂವರೆ ತಿಂಗಳ ಮಗು ಪರೀಕ್ಷಾ ಕೇಂದ್ರದ ಹೊರಗೆ ತನ್ನ ಮಗು ಜೋರಾಗಿ ಅಳುತ್ತಿದ್ದುದರಿಂದ ಪರೀಕ್ಷೆ ಬರೆಯಲಾಗದೆ ಚಡಪಡಿಸುತ್ತಿದ್ದರು. ಆ ಶಿಶುವನ್ನು ಸಮಾಧಾನಪಡಿಸಲು ಆಕೆಯ ಪತಿ ಪ್ರಯತ್ನಿಸಿದರೂ ಅದು ಸುಮ್ಮನಾಗಲಿಲ್ಲ. ಇದರಿಂದ ಆಕೆ ಪರೀಕ್ಷೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೊರಗೆ ಬರಲು ಯೋಚಿಸಿದ್ದರು.
ಇದನ್ನೂ ಓದಿ: Video: ತಡರಾತ್ರಿ ಮನೆಗೆ ಬಂದ ಮಗನನ್ನು ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಂಡ ತಂದೆ
ಆ ಮಗು ಅಳುತ್ತಿರುವುದನ್ನು ನೋಡಲಾಗದೆ ಅಲ್ಲೇ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಮಗುವನ್ನು ಎತ್ತಿಕೊಂಡು, ಹಾಲುಣಿಸಿ ಸಮಾಧಾನ ಮಾಡಿದ್ದಾರೆ. 7 ವರ್ಷಗಳಿಂದ ಮಲ್ಕನ್‌ಗಿರಿ ಮೀಸಲು ಪೊಲೀಸರಲ್ಲಿ ಸೇವೆ ಸಲ್ಲಿಸಿರುವ ಕಾನ್‌ಸ್ಟೆಬಲ್ ಮಾಝಿ ಆ ಒಂದೂವರೆ ತಿಂಗಳ ಮಗುವಿನ ಹಸಿವು ನೀಗಿಸಿದ್ದಾರೆ. ಮಾಝಿ ಅವರಿಗೂ ಪುಟ್ಟ ಮಗುವಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಕಾನ್‌ಸ್ಟೆಬಲ್ ರಜನಿ ಮಾಝಿ, “ಆ ಮಹಿಳೆ ಪರೀಕ್ಷೆಗೆ ಹಾಜರಾಗಬೇಕೇ ಬೇಡವೇ ಎಂಬ ಸಂದಿಗ್ಧ ಸ್ಥಿತಿಯಲ್ಲಿದ್ದರು. ಏಕೆಂದರೆ, ಅವರ ಮಗು ಬಹಳ ಸಮಯದಿಂದ ಅಳುತ್ತಿತ್ತು. ಆದರೆ, ನಾನು ಅವರಿಗೆ ನಾನೇ ಮಗುವನ್ನು ನೋಡಿಕೊಳ್ಳುತ್ತೇನೆ, ನೀವು ಪರೀಕ್ಷೆ ಬರೆಯಿರಿ ಎಂದು ಭರವಸೆ ನೀಡಿದೆ” ಎಂದಿದ್ದಾರೆ.
ಇದನ್ನೂ ಓದಿ: ಮಗನಿಗೆ ಅದೃಷ್ಟ ತಂದ ತಾಯಿ ಜನ್ಮ ದಿನಾಂಕ: ಲಾಟರಿಯಲ್ಲಿ 240 ಕೋಟಿ ರೂ ಗೆದ್ದ ಯುವಕ
“ನನಗೂ 9 ತಿಂಗಳ ಮಗು ಇರುವುದರಿಂದ ಆ ತಾಯಿಯ ಸಂಕಟ, ನೋವು ನನಗೆ ಅರ್ಥವಾಗುತ್ತಿತ್ತು. ನಾನು ಅವರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡೆ. ಹೀಗಾಗಿ, ಆ ಮಗುವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದೆ. ಆಕೆ ಪರೀಕ್ಷೆ ಬರೆದುಬರುವವರೆಗೂ ಸುಮಾರು 2 ಗಂಟೆ ನಾನೇ ಆ ಮಗುವಿಗೆ ಹಾಲು ಕುಡಿಸಿ, ನೋಡಿಕೊಂಡೆ” ಎಂದು ಮಾಝಿ ಹೇಳಿದ್ದಾರೆ.
ସତରେ ମାତୃତ୍ୱ ଆଗରେ ସବୁ ଫିକା, ହୃଦସ୍ପର୍ଶୀ କାର୍ଯ୍ୟ, ପୋଲିସ ଆଉ ପବ୍ଲିକ ମଧ୍ୟରେ ଏ ସମ୍ବନ୍ଧ ନିହାତି ସ୍ୱାଗତ ଯୋଗ୍ୟ 🙏🙏🙏
— JITENDRA SINGH (@55JITENDRASING1) November 10, 2025
ತನ್ನ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಆ ಮಹಿಳೆ ಕಣ್ಣೀರು ಸುರಿಸುತ್ತಾ ಪೊಲೀಸ್ ಕಾನ್‌ಸ್ಟೆಬಲ್ ಅವರ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. “ನನ್ನ ಮಗು ಅಳುತ್ತಿದ್ದಾಗ ನಾನು ಪರೀಕ್ಷೆಗೆ ಹಾಜರಾಗಬಾರದೆಂದು ನಿರ್ಧರಿಸಿದೆ. ಆದರೆ ಕಾನ್‌ಸ್ಟೆಬಲ್ ಅಕ್ಕ ಮುಂದೆ ಬಂದು ಪರೀಕ್ಷಾ ಸಮಯದಲ್ಲಿ ಶಿಶುವಿನ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ನನಗೆ ಭರವಸೆ ನೀಡಿದರು. ಅವರು ನನ್ನ ಮಗುವನ್ನು ತಮ್ಮ ಮಡಿಲಲ್ಲಿಟ್ಟುಕೊಂಡು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು. ನನ್ನ ಮಗುವಿನ ಪರಿಸ್ಥಿತಿಯ ಬಗ್ಗೆ ನನಗೆ ಇನ್ನೂ ಚಿಂತೆಯಾಗಿತ್ತು. ಆದರೆ ಕಾನ್‌ಸ್ಟೆಬಲ್ ಅಕ್ಕ ಆ ಮಗುವನ್ನು ಚೆನ್ನಾಗಿ ನೋಡಿಕೊಂಡರು. ನಾನು ಅವರಿಗೆ ಮತ್ತು ಇತರ ಸಿಬ್ಬಂದಿಗೆ ಧನ್ಯವಾದ ಹೇಳಲೇಬೇಕು. ಅವರಿಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇನೆ” ಎಂದು ಮಂಡಲ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ