ಒಡಿಶಾದ ಪುರಿ(Puri)ಯಲ್ಲಿರುವ ಶ್ರೀ ಜಗನ್ನಾಥ ದೇವಾಲಯ(Jagannath Temple)ದ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ತೆರೆಯಲಾಗಿದೆ. ರಾಜ್ಯದಲ್ಲಿ ಹೊಸದಾಗಿ ಚುನಾಯಿತವಾಗಿರುವ ಬಿಜೆಪಿ ಸರ್ಕಾರವು ಪುರಿಯ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನು ಪುನಃ ತೆರೆಯುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಒಡಿಶಾದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಬಿಜೆಪಿಯ ಮೋಹನ್ ಚರಣ್ ಮಾಝಿ ಅವರು ತಮ್ಮ ಮೊದಲ ನಿರ್ಧಾರದಲ್ಲಿ ಪುರಿಯ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನು ಗುರುವಾರ ಬೆಳಗ್ಗೆಯಿಂದ ಪುನಃ ತೆರೆಯುವಂತೆ ಆದೇಶಿಸಿದ್ದಾರೆ.
ದೇವಸ್ಥಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕಾಳಜಿವಹಿಸಲು ಸರ್ಕಾರ 500 ಕೋಟಿ ರೂಪಾಯಿಗಳ ವಿಶೇಷ ನಿಧಿಯನ್ನು ಘೋಷಿಸಿದೆ. ಮಾಝಿ ಅವರು ತಮ್ಮ ಕ್ಯಾಬಿನೆಟ್ ಮಂತ್ರಿಗಳು ಹಾಗೂ ಪುರಿ ಸಂಸದ ಸಂಬಿತ್ ಪಾತ್ರ ಅವರೊಂದಿಗೆ ಮುಂಜಾನೆ ದೇವಸ್ಥಾನಕ್ಕೆ ಭೇಟಿ ನೀಡಿ ಬಾಗಿಲು ತೆರೆಯುವ ಪ್ರಕ್ರಿಯೆ ಮೇಲ್ವಿಚಾರಣೆ ಮಾಡಿದ್ದಾರೆ.
ಮತ್ತಷ್ಟು ಓದಿ: ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತರು ಇನ್ಮುಂದೆ ಹರಿದ ಜೀನ್ಸ್, ಸ್ಕರ್ಟ್ ತೊಟ್ಟು ಬರುವಂತಿಲ್ಲ
ಒಡಿಶಾ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯ ಭರವಸೆಗಳಲ್ಲಿ ದೇವಾಲಯದ ಬಾಗಿಲುಗಳನ್ನು ಮತ್ತೆ ತೆರೆಯುತ್ತೇವೆ ಎಂಬುದು ಕೂಡ ಒಂದು. ಇಲ್ಲಿವರೆಗೆ 12ನೇ ಶತಮಾನದ ದೇಗುಲದ ಒಂದು ದ್ವಾರದ ಮೂಲಕ ಮಾತ್ರ ಭಕ್ತರಿಗೆ ಪ್ರವೇಶಿಸಲು ಅವಕಾಶವಿತ್ತು. ಇದು ಸಮಸ್ಯೆಗಳು ಮತ್ತು ಜನಸಂದಣಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿತ್ತು.
ಹಿಂದಿನ ಬಿಜೆಡಿ ಸರ್ಕಾರವು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇವಾಲಯದ ನಾಲ್ಕು ದ್ವಾರಗಳನ್ನು ಮುಚ್ಚಿಸಿತ್ತು, ಭಕ್ತರು ಒಂದು ಗೇಟ್ ಮೂಲಕ ಮಾತ್ರ ಪ್ರವೇಶಿಸಬಹುದಿತ್ತು ಮತ್ತು ಎಲ್ಲಾ ದ್ವಾರಗಳನ್ನು ತೆರೆಯಬೇಕು ಎಂದು ಒತ್ತಾಯಿಸಲಾಗಿತ್ತು.
ಒಡಿಶಾದ ಕರಾವಳಿ ನಗರವಾದ ಪುರಿಯಲ್ಲಿರುವ ಈ ದೇವಾಲಯವು ಪೂಜ್ಯ ದೇವಾಲಯವಾಗಿದ್ದು, ಶ್ರೀಕೃಷ್ಣನನ್ನು ಭಗವಾನ್ ಜಗನ್ನಾಥ ಎಂದು ಪೂಜಿಸಲಾಗುತ್ತದೆ. ಬುಧವಾರ ನಾಲ್ಕು ಬಾರಿ ಶಾಸಕ ಮತ್ತು ಕಿಯೋಂಜಾರ್ ಬುಡಕಟ್ಟು ನಾಯಕ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:10 am, Thu, 13 June 24