ಸದ್ಯ ವಿಶ್ವಕ್ಕೆ ಕೊರೊನಾದೊಂದಿಗೆ ಇನ್ನೊಂದು ತಲೆನೋವಾಗಿರುವುದು, ಅದರ ಹೊಸ ರೂಪಾಂತರಿ ಒಮಿಕ್ರಾನ್(Omicron Variant). ಕೊವಿಡ್ 19 ಸೋಂಕಿತ ತಳಿಗಳ ಪೈಕಿಯಲ್ಲೇ ಇದು ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಒಮಿಕ್ರಾನ್ ಮೊದಲು ಹುಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲಿ. ಇದೀಗ ಅದೇ ದೇಶದ ಸಂಶೋಧಕರು ಒಮಿಕ್ರಾನ್ ಬಗ್ಗೆ ಒಂದು ಹೊಸ ವಿಷಯವನ್ನು ಹೇಳಿದ್ದಾರೆ. ಕೊವಿಡ್ 19 ಹೊಸ ರೂಪಾಂತರ ಒಮಿಕ್ರಾನ್ನಲ್ಲಿರುವ ಸೋಂಕು, ಈ ರೂಪಾಂತರದ ವಿರುದ್ಧ ಅಗತ್ಯವಿರುವ ಪ್ರತಿರಕ್ಷಣಾ ಪ್ರತಿಕ್ರಿಯೆ ತೋರುತ್ತದೆ. ಅದಕ್ಕೂ ಮಿಗಿಲಾಗಿ ಮಾರಣಾಂತಿಕ ರೂಪಾಂತರ ಡೆಲ್ಟಾ ವಿರುದ್ಧ ಅತ್ಯಂತ ಹೆಚ್ಚಿನ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದ್ದಾರೆ. ಹಾಗಿದ್ದಾಗ್ಯೂ ಇದು ಸಂಪೂರ್ಣವಾಗಿ ತಜ್ಞರಿಂದ ಪರಿಶೀಲಿಸಲ್ಪಟ್ಟಿಲ್ಲ.ಈ ಅಧ್ಯಯನ ಲಸಿಕೆ ಹಾಕಿಸಿಕೊಂಡವರ ಮತ್ತು ಲಸಿಕೆ ಹಾಕಿಸಿಕೊಳ್ಳದೆ ಇರುವ ಒಟ್ಟು 33 ಮಂದಿಯನ್ನು ಒಳಗೊಂಡಿತ್ತು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಅಂದಹಾಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಅಧ್ಯಯನದಲ್ಲಿ, ಒಮಿಕ್ರಾನ್ ತುಂಬ ಸಕಾರಾತ್ಮಕ ಅಂಶವನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಇದು ಡೆಲ್ಟಾ ವಿರುದ್ಧ ರಕ್ಷಣೆ ಒದಗಿಸುತ್ತದೆ ಎಂಬುದು ಗೊತ್ತಾಗಿದ್ದು ಜಗತ್ತಿಗೆ ಅತ್ಯಂತ ಒಳ್ಳೆಯ ಸುದ್ದಿ ಎಂದು ವಿಶ್ಲೇಷಿಸಲಾಗಿದೆ. ಈ ಬಗ್ಗೆ ನ್ಯೂಸ್ 9 ಸವಿಸ್ತಾರವಾಗಿ ವರದಿ ಮಾಡಿದೆ. ಒಮಿಕ್ರಾನ್ ದಾಖಲಾದ 14 ದಿನಗಳಲ್ಲಿ, ತಟಸ್ಥೀಕರಣ ಪ್ರಮಾಣ 14 ಪಟ್ಟು ಹೆಚ್ಚಾಗಿದೆ. ಅದರಲ್ಲೂ ಡೆಲ್ಟಾ ವೈರಸ್ ತಟಸ್ಥೀಕರಣ ಪ್ರಮಾಣ 4.4ಪಟ್ಟು ಅಧಿಕವಾಗಿದೆ ಎಂದು ಆಫ್ರಿಕಾದಲ್ಲಿ ನಡೆದ ಅಧ್ಯಯನ ಫಲಿತಾಂಶ ಹೇಳಿದ್ದಾಗಿ ನ್ಯೂಸ್ 9 ತಿಳಿಸಿದೆ. ಒಮಿಕ್ರಾನ್ ಸೋಂಕಿಗೆ ಒಳಗಾದ ವ್ಯಕ್ತಿಗಳಲ್ಲಿ ಡೆಲ್ಟಾ ರೂಪಾಂತರ ಪ್ರಭಾವ ತಟಸ್ಥಗೊಳ್ಳುವುದರಿಂದ, ಅವರು ಮತ್ತೊಮ್ಮೆ ಡೆಲ್ಟಾ ಸೋಂಕಿಗೆ ಒಳಗಾಗಲಾರರು ಎಂದು ಅಧ್ಯಯನಕಾರರು ವಿಶ್ಲೇಷಿಸಿದ್ದಾರೆ. ಅಂದರೆ ಡೆಲ್ಟಾವನ್ನು ಉಂಟು ಮಾಡುವ ರೂಪಾಂತರಿ ವೈರಸ್ನ್ನು ಒಮಿಕ್ರಾನ್ ಕಿತ್ತೊಗೆಯುತ್ತದೆ ಎಂಬುದು ಇದರ ಸಾರಾಂಶವಾಗಿದೆ.
ಒಮಿಕ್ರಾನ್ ತಳಿ ಕೊವಿಡ್ 19ನ ಕೊನೇ ಆಟ !
ಹೀಗೊಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟವರು ಡಾ. ಅಮಿತವ್ ಬ್ಯಾನರ್ಜಿ. ಇವರು ಕ್ಲಿನಿಕಲ್ ಎಪಿಡೆಮಿಯಾಲಜಿಸ್ಟ್. ಪುಣೆಯ ಡಾ. ಡಿ ವೈ ಪಾಟೀಲ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರು. ಇವರು ನ್ಯೂಸ್ 9 ಜತೆ ಮಾತನಾಡಿ, ಒಮಿಕ್ರಾನ್ ಬಗ್ಗೆ ಜಗತ್ತು ಹೆದರುವ ಅಗತ್ಯವಿಲ್ಲ.ಇದು ಕೊವಿಡ್ 19 ಸೋಂಕಿನ ಅಂತಿಮ ಹಂತ ಎಂದು ಹೇಳಿದ್ದಾರೆ. ಒಮಿಕ್ರಾನ್ ಎಂಬುದು ಒಂದು ಪ್ರಾಕೃತಿಕ ಲಸಿಕೆ ಎಂದು ನಾನು ನಂಬುತ್ತೇನೆ. ಈ ಸೋಂಕು ತಗುಲಿದವರು ಗಂಭೀರ ಸ್ವರೂಪದ ಕಾಯಿಲೆಗೆ ಒಳಗಾಗುತ್ತಿಲ್ಲ. ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಇದೆ. ಹಾಗೇ, ಮರಣದ ಪ್ರಮಾಣವೂ ಕಡಿಮೆಯಿದೆ. ಹೀಗಿರುವಾಗ ಒಮಿಕ್ರಾನ್ ವಿರುದ್ಧ ಹೋರಾಟಕ್ಕೆ ನೀಡಲು ಲಸಿಕೆಯ ಮೌಲ್ಯಮಾಪನ ಮಾಡುವುದಾದರೂ ಹೇಗೆ? ಒಮಿಕ್ರಾನ್ ಗಂಭೀರ ಕಾಯಿಲೆ ಉಂಟು ಮಾಡುತ್ತಿಲ್ಲ ಎಂದಾದ ಮೇಲೆ ಬೂಸ್ಟರ್ ಡೋಸ್ ಕೊಡುವುದಾದರೂ ಯಾಕೆ? ಇದೀಗ ಕೊವಿಡ್ 19 ವಿರುದ್ಧ ತೆಗೆದುಕೊಳ್ಳುತ್ತಿರುವ ಲಸಿಕೆಗಳೂ ಕೂಡ, ಪ್ರಸರಣ ತಡೆಯುವ ಶಕ್ತಿ ಹೊಂದಿಲ್ಲ. ಅವು ರೋಗದ ಗಂಭೀರತೆ ಕಡಿಮೆ ಮಾಡಲು ತೆಗೆದುಕೊಳ್ಳುತ್ತಿರುವ ವ್ಯಾಕ್ಸಿನ್ಗಳು. ಹೀಗಾಗಿ ಒಮಿಕ್ರಾನ್ ಹರಡುತ್ತಿದೆಯೆಂದು ಲಸಿಕೆ ಕೊಡುವುದು ವ್ಯರ್ಥ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕಟ್ಟುನಿಟ್ಟಿನ ನಿರ್ಬಂಧ ಅಗತ್ಯವಿಲ್ಲ
ಒಮಿಕ್ರಾನ್ ಜಾಸ್ತಿ ಜನರಿಗೆ ಹರಡಬಹುದು. ಆದರೆ ಇದು ಉಂಟು ಮಾಡುತ್ತಿರುವ ಸೌಮ್ಯ ಲಕ್ಷಣಗಳನ್ನು ಗಮನಿಸಿದರೆ, ವ್ಯಾಪಾರ, ಉದ್ಯಮಕ್ಕೆ ತೊಡಕಾಗಲಾರದು ಎನ್ನಿಸುತ್ತದೆ. ನಾವೂ ಕೂಡ ದಕ್ಷಿಣ ಆಫ್ರಿಕಾದಂತೆ ನಮ್ಮ ವ್ಯವಹಾರ, ಉದ್ದಿಮೆಗಳನ್ನು ಮುಂದುವರಿಸಿ, ಜೀವನ ನಡೆಸುವುದು ಉತ್ತಮ ಎನ್ನಿಸುತ್ತದೆ. ಲಾಕ್ಡೌನ್, ಕ್ವಾರಂಟೈನ್, ಗಡಿಗಳನ್ನು ಮುಚ್ಚುವುದು ಸೇರಿ, ಇಂಥ ಕ್ರಮಗಳನ್ನು ಹೇರುವ ಮೂಲಕ ಜನರನ್ನು ಗಾಬರಿಗೊಳಿಸಬಾರದು ಎಂದು ಡಾ. ಅಮಿತಾವ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ಮುಂದುವರಿದ ಮಾತನಾಡಿದ ಅವರು, ಒಮಿಕ್ರಾನ್ ತಳಿ, ಕೊವಿಡ್ 19 ಸೋಂಕನ್ನು ಅಂತಿಮಗೊಳಿಸುತ್ತದೆ ಎಂಬುದು ನನ್ನ ನಂಬಿಕೆ. ಇದು ಪ್ರಕೃತಿಯ ಹೊಂದಾಣಿಕೆ ನಿಯಮ. ಯಾವುದು ಕೊಲ್ಲುತ್ತದೆಯೋ ಅದು ದೂರ ಹೋಗುವುದಿಲ್ಲ. ಯಾರದ್ದೇ ದೇಹಕ್ಕೆ ಸೋಂಕು ತಗುಲಿದರೂ ಒಂದೋ ಅದು ತಗುಲಿದವರು ಸಾಯುತ್ತಾರೆ ಅಥವಾ ವೈರಸ್ನ್ನು ನಿರ್ಮೂಲನ ಮಾಡಲಾಗುತ್ತದೆ. ಆದರೆ ಯಾವುದೇ ಸೌಮ್ಯ ಸ್ವಭಾವ ಇರುವ, ಸಾವನ್ನು ತರಬಲ್ಲದ ವೈರಸ್ಗಳು ಬಹುಬೇಗನೇ ಹರಡುತ್ತವೆ. ಆದರೆ ನಿಮ್ಮ ದೇಹವನ್ನು ಅವು ಗಟ್ಟಿ ಗೊಳಿಸುತ್ತವೆ ಎಂಬುದನ್ನು ಡಾರ್ವಿನ್ ನಿಯಮ ಹೇಳುತ್ತದೆ. ಅದನ್ನು ಒಮಿಕ್ರಾನ್ಗೆ ನಾವು ಅಳವಡಿಸಬಹುದು ಎಂದಿದ್ದಾರೆ. ಈ ಮೂಲಕ ಒಮಿಕ್ರಾನ್ ಬಗ್ಗೆ ಯಾರೂ ಹೆದರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Local Body Elections: ಎಡವಿದ ಬಿಜೆಪಿ, ಅರಳಿದ ಕಾಂಗ್ರೆಸ್, ಮುದುಡಿದ ಜೆಡಿಎಸ್: ಚುನಾವಣೆ ಫಲಿತಾಂಶ ವಿಶ್ಲೇಷಣೆ