Local Body Elections: ಎಡವಿದ ಬಿಜೆಪಿ, ಅರಳಿದ ಕಾಂಗ್ರೆಸ್​, ಮುದುಡಿದ ಜೆಡಿಎಸ್​: ಚುನಾವಣೆ ಫಲಿತಾಂಶ ವಿಶ್ಲೇಷಣೆ

Political Analysis: ಕಳೆದ ಚುನಾವಣೆಗಿಂತ ಹೆಚ್ಚು ಸೀಟು ಗೆದ್ದಿದ್ದೇವೆ ಎಂದು ಹೇಳಿಕೊಳ್ಳುವ ಆಡಳಿತಾರೂಢ ಬಿಜೆಪಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ನೀಡುತ್ತಿರುವ ಎಚ್ಚರಿಕೆ ಏನು? ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಈ ಫಲಿತಾಂಶದಲ್ಲಿ ಏನೆಲ್ಲಾ ಪಾಠಗಳಿವೆ?

Local Body Elections: ಎಡವಿದ ಬಿಜೆಪಿ, ಅರಳಿದ ಕಾಂಗ್ರೆಸ್​, ಮುದುಡಿದ ಜೆಡಿಎಸ್​: ಚುನಾವಣೆ ಫಲಿತಾಂಶ ವಿಶ್ಲೇಷಣೆ
ಸಾಂದರ್ಭಿಕ ಚಿತ್ರ
Follow us
ಡಾ. ಭಾಸ್ಕರ ಹೆಗಡೆ
|

Updated on:Dec 30, 2021 | 6:21 PM

ಕರ್ನಾಟಕದ 58 ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆ ಹಾಗೂ 59 ಗ್ರಾಮ ಪಂಚಾಯತಿಗಳ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಬಂದಿದೆ. ಆಡಳಿತಾರೂಢ ಬಿಜೆಪಿಗೆ ಈ ಫಲಿತಾಂಶ ಹಿನ್ನಡೆ ಆಗಿದ್ದು ನಿಜ. ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಚಿಹ್ನೆ ಆಧರಿಸಿ ಚುನಾವಣೆ ನಡೆಯದೇ ಇರುವುದರಿಂದ ಅಲ್ಲಿನ ಫಲಿತಾಂಶದ ಬಗ್ಗೆ ಜನ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ವಿಧಾನ ಪರಿಷತ್ತು ಚುನಾವಣೆ ಮತ್ತು ಅದರ ಬೆನ್ನಲ್ಲೇ ನಡೆದ ಆಯ್ದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಕುತೂಹಲ ಕೆರಳಿಸಿದೆ. ರಾಜ್ಯ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಸ್ಥಳೀಯ ಮಾಹಿತಿ ಆಧರಿಸಿ ಬಂದ ಸುದ್ದಿ ನೋಡೋಣ.

ಪಟ್ಟಣ ಪಂಚಾಯತಿ: ಒಟ್ಟು ಸ್ಥಾನಗಳು- 577; ಬಿಜೆಪಿ 194, ಕಾಂಗ್ರೆಸ್ 236, ಜೆಡಿಎಸ್​ 12, ಸ್ವತಂತ್ರ 135. ಪುರಸಭೆ: ಒಟ್ಟು ಸ್ಥಾನಗಳು- 441; ಬಿಜೆಪಿ 176, ಕಾಂಗ್ರೆಸ್​ 201, ಜೆಡಿಎಸ್​ 21, ಸ್ವತಂತ್ರ 43. ನಗರಸಭೆ: ಒಟ್ಟು ಸ್ಥಾನಗಳು- 166: ಬಿಜೆಪಿ-67: ಕಾಂಗ್ರೆಸ್​-61; ಜೆಡಿಎಸ್​-12; ಸ್ವತಂತ್ರ-26

ಎಲ್ಲ ಸ್ಥಾನಗಳನ್ನು ಒಗ್ಗೂಡಿಸಿ, ಪ್ರತಿಯೊಂದು ಪಕ್ಷವೂ ಪಡೆದ ಸ್ಥಾನಗಳನ್ನು ವಿಶ್ಲೇಷಿಸಿದರೆ ಈ ಚುನಾವಣೆ ಸಹ ಈ ಹಿಂದಿನ ವಿಧಾನ ಪರಿಷತ್ತು ಚುನಾವಣೆಯ ಫಲಿತಾಂಶದಂತೆ ಆಡಳಿತಾರೂಢ ಬಿಜೆಪಿಗೆ ಹಿನ್ನಡೆ ಆಗಿದೆ ಎನ್ನುವುದನ್ನೇ ಸೂಚಿಸುತ್ತಿದೆ. ಹಾಗೆಂದು ನಿರ್ಣಯ ಮಾಡಿದರೆ ಅದು ತಪ್ಪಾಗಬಹುದು. ಈ ಮೇಲಿನ ಸಂಖ್ಯೆ ಮತ್ತು ಅವುಗಳ ಸಂಕಲನ ರಾಜಕೀಯ ಅಂಕ ಗಣಿತಕ್ಕೆ ಮೀರಿದ್ದು. ಇಲ್ಲಿ arithmetic depends on political chemistry. ಹಾಗಾದರೆ ಈ ಚುನಾವಣೆಯು ಬಿಜೆಪಿಗೆ ಸಿಹಿ ಸುದ್ದಿ ನೀಡುತ್ತಿದೆಯೇ? ಖಂಡಿತ ಇಲ್ಲ. ಹಾಗೆಂದು ವಿರೋಧ ಪಕ್ಷ ಕಾಂಗ್ರೆಸ್​ ಪರವಾಗಿ ಗಾಳಿ ಬೀಸುತ್ತಿದೆಯೇ? ಹಾಗೆ ಹೇಳಲಾಗದಿದ್ದರೂ, ಜನಕ್ಕೆ ಬಿಜೆಪಿ ಸರಕಾರದ ಬಗ್ಗೆ ಸ್ವಲ್ಪ ಪ್ರಶ್ನಾರ್ಥಕ ಚಿಹ್ನೆ ಮೂಡಿರುವ ಭಾವನೆಯನ್ನು ಈ ಫಲಿತಾಂಶ ವ್ಯಕ್ತಪಡಿಸುತ್ತಿದೆ.

ಬೆಂಗಳೂರಿನಂತಹ ಮೆಟ್ರೋಪಾಲಿಟನ್​ ನಗರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಧ್ಯಮ ಮತ್ತು ಮೇಲ್ವರ್ಗದ ಜನ ಮತಗಟ್ಟೆಗೆ ಬಂದು ಮತದಾನ ಮಾಡುವುದಿಲ್ಲ. ಈ ಚುನಾವಣೆಯಲ್ಲಿ ಎಷ್ಟು ಪ್ರತಿಶತ ಮತದಾನ ಆಗಿದೆ ಮತ್ತು ಯಾವ ವರ್ಗದ ಜನ ಹೊರಗೆ ಬಂದು ಮತದಾನ ಮಾಡಿದ್ದಾರೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ಮಾಹಿತಿ ಇದ್ದರೆ ಈ ಫಲಿತಾಂಶದ ವಿಶ್ಲೇಷಣೆಯನ್ನು ವೈಜ್ಞಾನಿಕವಾಗಿ ಮಾಡಬಹುದು.

ಸ್ವತಂತ್ರ ಅಭ್ಯರ್ಥಿಗಳು ಗಮನಾರ್ಹ ಪ್ರಮಾಣದಲ್ಲಿ ಗೆಲುವು ದಾಖಲಿಸಿರುವದನ್ನು ಗಮನಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಸಾಮಾನ್ಯ. ಆದರೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಈ ರೀತಿ ಆಗುವುದಿಲ್ಲ. ಈ ಚುನಾವಣೆಯಲ್ಲಿ ಮತದಾರರು ಸ್ವತಂತ್ರ ಅಭ್ಯರ್ಥಿಗೆ ನೀಡಿದ ಮತ ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎಲ್ಲಿಗೆ ಹೋಗುತ್ತದೆ? ಇದೇ ಮತದಾರರು ಆಗ ಈ ಪ್ರಮಾಣದಲ್ಲಿ ಸ್ವತಂತ್ರ ಅಭ್ಯರ್ಥಿಗೆ ಮತ ನೀಡುವುದಿಲ್ಲ. ಆಗ, ಯಾವ ರಾಜಕೀಯ ಪಕ್ಷ ಈ ಮತಗಳನ್ನು ಪಡೆಯುತ್ತದೆ ಎನ್ನುವುದು ಬಹಳ ಮುಖ್ಯವಾಗುತ್ತದೆ.

ಈ ಚುನಾವಣೆ ನಡೆದಿದ್ದು ಬೇರೆ ಬೇರೆ ಸ್ಥಳೀಯ ವಿಚಾರಗಳ ಮೇಲೆ. ಸ್ಥಳೀಯ ಅಭ್ಯರ್ಥಿ ಮತ್ತು ಅಭ್ಯರ್ಥಿಯ ಮತದಾರನ ಸಂಬಂಧ ಬಹಳ ಮುಖ್ಯವೆನ್ನಿಸುತ್ತದೆ. ಈ ಹಿನ್ನೆಲೆಯಲ್ಲಿ ಇದು 2023 ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಅಂತ ಹೇಳುವುದಕ್ಕೆ ಆಗಲ್ಲ. ಜೆಡಿಎಸ್​ ನಾಯಕರು ಏನೇ ಹೇಳಬಹುದು—ಮಿಶನ್​ 123 ಏನೇ ಹೇಳಲಿ, ಆ ಪಕ್ಷ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ. ಮುಂದಿನ ಚುನಾವಣೆ ಹೊತ್ತಿಗೆ ಆ ಪಕ್ಷದ ಮುಂದೆ ಅಸ್ತಿತ್ವದ ಸವಾಲು ಬಂದು ನಿಲ್ಲಬಹುದು.

ಕಾಂಗ್ರೆಸ್​ ಬಲಿಷ್ಠ ಆಗುತ್ತಿದೆ. ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಕೆಪಿಸಿಸಿ ಅಧ್ಯಕ್ಷ, ಡಿ.ಕೆ. ಶಿವಕುಮಾರ್​ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಎಣ್ಣೆ-ಸೀಗೆಕಾಯಿ ಸಂಬಂಧದ ಬಗ್ಗೆ ಹೇಳಬೇಕಾಗಿಲ್ಲ. ಹಾಗಿದ್ದರೂ ಕಾಂಗ್ರೆಸ್​ ಚಿಗುರುತ್ತಿರುವುದು ಕುತೂಹಲಕಾರಿ ಅಂಶ. ಪದೇ ಪದೇ ಬಿಜೆಪಿ ನಾಯಕರು ಹೇಳುತ್ತಿರುವುದು ಏನು? ಡಿಕೆಶಿ-ಸಿದ್ದು ಹೊಡೆದಾಟದಿಂದ ನಮಗೆ ಲಾಭ. ಆ ಮೂಲಕ ನಾವು ವಾಪಸ್​ ಬರುತ್ತೇವೆ ಎಂದುಕೊಳ್ಳುವ ಬಿಜೆಪಿ ನಾಯಕರಿಗೆ ಇಂದಿನ ಫಲಿತಾಂಶ ಮುಖಭಂಗ ಮಾಡಿದೆ. ಮುಂದೊಂದು ದಿನ ಬಿಜೆಪಿ ಮೇಲೆ ಮತದಾರ ಅತಿಯಾಗಿ ಬೇಸರಗೊಂಡರೆ, ಡಿಕೆಶಿ-ಸಿದ್ಧು ಜಗಳ ಇದ್ದರೂ ಕಾಂಗ್ರೆಸ್​ಗೆ ಮತ ಹಾಕಬಹುದು ಎಂಬುದಕ್ಕೆ ಇಂದಿನ ಚುನಾವಣಾ ಫಲಿತಾಂಶ ಸಾಕ್ಷಿ.

ಆಡಳಿತ ಪಕ್ಷ ಬಿಜೆಪಿ ಕೈ ಚೆಲ್ಲಿದಂತೆ ಕಾಣುತ್ತಿದೆ. ಪರಿಷತ್ತಿನ ಚುನಾವಣೆ ಇರಬಹುದು ಅಥವಾ ಇಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರಬಹುದು. ಬಿಜೆಪಿ ಬಳಿ ತಂತ್ರ ಇಲ್ಲ ಎನ್ನುವುದು ಸ್ಪಷ್ಟ. ಬುಧವಾರ ಹುಬ್ಬಳ್ಳಿಯಲ್ಲಿ ನಡೆದು ರಾಜ್ಯ ಕಾರ್ಯಕಾರಿಣಿಯ ಸಭೆಯ ನಂತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್​ ಸಿಂಗ್​ ಮಾತನಾಡಿ ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಹಾಗೆ ಹೇಳಲು ದುಡ್ಡು ಕೊಡಬೇಕಾಗಿಲ್ಲವಲ್ಲ.

ಈ ಕೆಳಗಿನ ನಾಲ್ಕು ಅತ್ಯಂತ ಪ್ರಮುಖ ಅಂಶಗಳು ಬಿಜೆಪಿ ಎಡವಿದ್ದು ಎಲ್ಲಿ ಎನ್ನುವುದನ್ನು ತೋರಿಸುತ್ತವೆ.

1) ಬಿಜೆಪಿ ನಾಯಕರು 150 ಸೀಟುಗಳ ಕನಸು ಕಾಣುತ್ತಿದ್ದರೆ. ಆದರೆ ಅದನ್ನು ನನಸು ಮಾಡಲು ಏನು ಮಾಡಬೇಕೋ ಅದನ್ನು ಮಾಡುತ್ತಿಲ್ಲ. ಮೊದಲು ಮುಖ್ಯಮಂತ್ರಿ ಬದಲಾವಣೆಯ ಹುಯಿಲೆಬ್ಬಿಸುವ ಬಿಜೆಪಿ ಪಕ್ಕದ ಮಹಾರಾಷ್ಟ್ರದ ಮಹಾ ವಿಕಾಸ್​ ಅಗಡಿ ಪ್ರಯೋಗದಿಂದ ಕಲಿಯಬೇಕು. ಕಳೆದ 10 ದಿನದಿಂದ ಆಸ್ಪತ್ರೆಯಲ್ಲಿ ಉದ್ಧವ ಠಾಕ್ರೆ ಇದ್ದರೂ, ಅಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬರುತ್ತಿಲ್ಲ. ಕರ್ನಾಟಕದಲ್ಲಿ ಮಾತ್ರ ಆ ಚರ್ಚೆ ಯಾಕೆ? ಈ ರೀತಿ ವಿಚಾರಧಾರೆಯಿಂದ ಕರ್ನಾಟಕದ ಅಭಿವೃದ್ಧಿಗೆ ಹೊಡೆತ ಬೀಳುವುದು ಗ್ಯಾರೆಂಟಿ. ಅದನ್ನು ಬಿಜೆಪಿ ಕಲಿಯದೇ ಇರುವುದು ವಿಪರ್ಯಾಸ.

2) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲಸ ಮಾಡುವವರನ್ನು ಮಂತ್ರಿಮಂಡಳದಲ್ಲಿ ಇಟ್ಟುಕೊಳ್ಳಬೇಕೇ ವಿನಃ ತಮ್ಮ ತಮ್ಮ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡಿಸಿಕೊಳ್ಳುವ ಮಂತ್ರಿಗಳು ಮತ್ತು ಶಾಸಕರಿಂದ ರಾಜ್ಯದ ಜನರಲ್ಲಿ ಬಿಜೆಪಿ ಸರಕಾರದ ಬಗ್ಗೆ ಖಂಡಿತ ಒಳ್ಳೇ ಹೆಸರು ಬರುತ್ತದೆ ಎನ್ನುವುದಕ್ಕೆ ಯಾವುದೇ ನಿದರ್ಶನ ಇಲ್ಲ. ಈ ರೀತಿಯ ರಾಜಕೀಯ ನಿರ್ಣಯಗಳಿಂದ ಕೆಲವರು ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಅನುಕೂಲ ಆಗಬಹುದೇ ವಿನಃ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂಬುದಕ್ಕೆ ಯಾವ ಸಾಕ್ಷ್ಯ ಇಲ್ಲ.

3) ಬೊಮ್ಮಾಯಿಯವರು ಸ್ವಾತಂತ್ರ್ಯ ದಿನದಂದು ಘೋಷಿಸಿದ ಹೊಸ ಯೋಜನೆಗಳ ಬಗ್ಗೆ ಜನರಿಗೆ ಮರೆತೇ ಹೋಗಿದೆ. ಅಂದರೆ ಅಧಿಕಾರಿಗಳು ಅದನ್ನು ವ್ಯವಸ್ಥಿತವಾಗಿ ಕಾಲೊರೆಸಿನ ಕೆಳಗೆ ಹಾಕಿದ್ದಾರೆ. ಅದೇ ರೀತಿ ಜನರ ಮನಸ್ಸು ತಟ್ಟುವ ಯೋಜನೆಗಳು- ಮಕ್ಕಳಿಗೆ ಬೇರೆಬೇರೆ ಸ್ಕೀಮ್​ ಕೆಳಗೆ ವಾರ್ಷಿಕವಾಗಿ ಕೊಡುವ ವಿದ್ಯಾರ್ಥಿವೇತನ, ಅವರ ತಂದೆ ತಾಯಿಗೆ ಅಥವಾ ಬೇರೆ ಕುಟುಂಬದ ಸದಸ್ಯರಿಗೆ ಅರ್ಹತೆ ಇದ್ದರೆ ಯೋಜನೆಗಳಲ್ಲಿ ಕೊಡುವ ನೆರವು. ಹೀಗೆ ಒಂದು ಪ್ಯಾಕೇಜ್ ತರಹ ಕೊಡಮಾಡದಿದ್ದರೆ ಜನಕ್ಕೆ ಏನು ಉಪಯೋಗ? ಈ ರೀತಿ ಕೆಲಸ ಮಾಡಿ, ಕೆಲಸ ಮಾಡಿದ್ದನ್ನು ಹೊರ ಜಗತ್ತಿಗೆ ತೋರಿಸುವ ಯಾವ ಕಾರ್ಯಕ್ಷಮತೆಯ ವರದಿ ಇಲ್ಲದಿರುವುದು ಬಿಜೆಪಿಗೆ ದೊಡ್ಡ ಸಮಸ್ಯೆ ಆಗಿದೆ. ಇದಕ್ಕೆ ಇನ್ನೊಂದು ಮುಖ್ಯ ಕಾರಣ: ಅತ್ಯಂತ ಕಳಪೆ ಅಧಿಕಾರಿಗಳು ಅತ್ಯಂತ ಪ್ರಮುಖ ಖಾತೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು. ಇದರಿಂದ ಅಭಿವೃದ್ಧಿ ಯೋಜನೆಗಳ ಜಾರಿಯಲ್ಲಿ ಹಿನ್ನಡೆ ಆಗಿರುವುದು ನಿಜ.

4) ಕೇಂದ್ರ ಸರಕಾರವು ಉತ್ತರ ಪ್ರದೇಶಕ್ಕೆ ಹಣ ನೀಡುವುದು ತಪ್ಪಲ್ಲ. ಅಲ್ಲಿ ಅನೇಕ ದೊಡ್ಡದೊಡ್ಡ ಯೋಜನೆಗಳ ಕಾರ್ಯರಂಭ, ಉದ್ಘಾಟನೆ ಆಗುತ್ತಿದೆ. ಆದರೆ ಬಿಜೆಪಿ ಬಂದ ಮೇಲೆ ಕರ್ನಾಟಕಕ್ಕೆ ಯಾವ ಯಾವ ಬೃಹತ್​ ಯೋಜನೆಗಳು ಬಂದಿವೆ? ಜಾರಿ ಆಗಿವೆ. ನೋಡಿದರೆ ಜನರ ಮನಸ್ಸಿನಲ್ಲಿ ನಿಲ್ಲುವ ಯಾವ ಯೋಜನೆಗಳೂ ಬಂದಿಲ್ಲ. ಉದಾಹರಣೆಗೆ ಮೇಕೆದಾಟು ಯೋಜನೆಯನ್ನು ನೋಡೋಣ. ತಮಿಳುನಾಡಿನಲ್ಲಿ ಒಂದು ಸೀಟು ಸಿಗದ ಸ್ಥಿತಿ ಬಿಜೆಪಿಯದು. ಆದರೆ, ಕರ್ನಾಟಕ 25 ಲೋಕಸಭೆ ಸೀಟು ಕೊಟ್ಟರೂ ಕರ್ನಾಟಕದ ನೀರಾವರಿ ವಿಚಾರಕ್ಕೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದ್ದು ಬಿಜೆಪಿ. ಈ ರೀತಿಯ ಮನೋಭಾವ ಮೂಡಲು ಕಾರಣ ಯಾರು? ಬಿಜೆಪಿ ತಾನೆ? ಕೇಂದ್ರ ಸರಕಾರ ಸಹಕಾರ ನೀಡದೇ ಬರೀ ರಾಜ್ಯದಲ್ಲಿರುವ ಬಿಜೆಪಿ ಸರಕಾರ ತನಗೆ ಒಳ್ಳೇ ಹೆಸರು ತಂದು ಕೊಡಬೇಕು ಎಂದು ಆಶಿಸುವುದು ರಾಜ್ಯಕ್ಕೆ ಮಾಡುವ ಅನ್ಯಾಯ ಎಂದು ಜನ ಭಾವಿಸಿದರೆ ಆಗ ಬಿಜೆಪಿಗೆ ಇನ್ನೂ ನಷ್ಟವಾಗುವ ಸಾಧ್ಯತೆ ಇದೆ.ಇದನ್ನೂ ಓದಿ: ಬೆಂಗಳೂರು: ಹೆಬ್ಬಗೋಡಿ ನಗರಸಭೆ ಬಿಜೆಪಿ ಪಾಲಿಗೆ, ಕಾಂಗ್ರೆಸ್​ಗೆ ಜಿಗಣಿ, ಬಿಜೆಪಿಗೆ ಚಂದಾಪುರ ಪುರಸಭೆ ಇದನ್ನೂ ಓದಿ: Amit Shah: ರಾಜಕೀಯ ಅಂದ್ರೆ ಫಿಸಿಕ್ಸ್ ಅಲ್ಲ, ಕೆಮಿಸ್ಟ್ರಿ: ಬಿಜೆಪಿ ಚಾಣಕ್ಯ ಅಮಿತ್ ಶಾ ವಿಶ್ಲೇಷಣೆ

Published On - 6:07 pm, Thu, 30 December 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್