Omicron Variant: ಭಾರತದಲ್ಲಿ ಒಮಿಕ್ರಾನ್ ರೂಪಾಂತರಿ ಹೆಚ್ಚಳ; ಮತ್ತೆ ಮಾಸ್ಕ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧಾರ
ಹೊಸ ಒಮಿಕ್ರಾನ್ ರೂಪಾಂತರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ದೇಶಾದ್ಯಂತ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ನಿರ್ಧರಿಸಿದೆ.
ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ (Coronavirus) ಅಬ್ಬರ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೊಸ-ಹೊಸ ರೂಪಾಂತರಿಯ ರೂಪದಲ್ಲಿ ಮತ್ತೆ ಕೊವಿಡ್ ಸೋಂಕು (COVID-19) ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿ ಒಮಿಕ್ರಾನ್ ಮತ್ತು ಕೊರೊನಾ ಸ್ಥಿತಿಯ ಕುರಿತಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಮಾನ್ಸುಖ್ ಮಾಂಡವಿಯಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಹೊಸ ಒಮಿಕ್ರಾನ್ ರೂಪಾಂತರ (Omicron Variant) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ದೇಶಾದ್ಯಂತ ಮಾಸ್ಕ್ (Face Mask) ಧರಿಸುವುದನ್ನು ಕಡ್ಡಾಯಗೊಳಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ನಿರ್ಧರಿಸಿದೆ.
ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ಕೊವಿಡ್ ಮಾರ್ಗಸೂಚಿಗಳನ್ನು ಮುಂದುವರೆಸುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಭಾರತದಲ್ಲಿ ಒಮಿಕ್ರಾನ್ನ ಹೊಸ ರೂಪಾಂತರಿಗಳು ಪತ್ತೆಯಾಗುವ ಮೂಲಕ ಆತಂಕ ಮೂಡಿಸಿವೆ. ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರಿಯ ಉಪ-ರೂಪಾಂತರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಮತ್ತು ಕೊವಿಡ್ ನಿಯಮಗಳನ್ನು ದೇಶಾದ್ಯಂತ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್, ಎನ್‌ಐಟಿಐ ಆಯೋಗ್ ಸದಸ್ಯ (ಆರೋಗ್ಯ) ವಿಕೆ ಪಾಲ್, ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ ಎನ್‌ಕೆ ಪಾಲ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಚೀನಾದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ ಪತ್ತೆ; 13 ಮಿಲಿಯನ್ ಜನರಿರುವ ಕ್ಲಿಯಾನ್ ಲಾಕ್ಡೌನ್
ಭಾರತದ ರಾಜ್ಯಗಳ ಪೈಕಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣಗಳಲ್ಲಿ ಶೇ. 17.7ರಷ್ಟು ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಒಮಿಕ್ರಾನ್ ರೂಪಾಂತರದ ಹೊಸ ಉಪ-ರೂಪವಾದ XBB ಕೇರಳ ಸೇರಿದಂತೆ ದೇಶದ ಇತರ ಕೆಲವು ಭಾಗಗಳಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್-ಬಿಎ.2.3.20 ಮತ್ತು ಬಿಕ್ಯೂ.1 ರೂಪಾಂತರದ ಉಪ-ವೇರಿಯಂಟ್‌ಗಳು ಪತ್ತೆಯಾಗಿವೆ. ಗುಜರಾತ್ನಲ್ಲಿ ಬಿಎಫ್-7 ರೂಪಾಂತರಿ ಪತ್ತೆಯಾಗಿದೆ. ಇತರ ರೂಪಾಂತರಗಳಂತೆ ಓಮಿಕ್ರಾನ್ BF.7 ನ ರೋಗಲಕ್ಷಣಗಳು ಒಂದೇ ಆಗಿರುತ್ತವೆ, ಆದರೆ ಉಸಿರು ಕಟ್ಟುವಿಕೆ, ಗಂಟಲು ಕೆರೆತ,ಆಯಾಸ, ಕೆಮ್ಮು, ಶೀತ, ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೈಕೈ ನೋವು ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.