ದೆಹಲಿ ವಿವಿಯಲ್ಲಿ ನಡೆದ ಜಗಳದಲ್ಲಿ ಇರಿತಕ್ಕೊಳಗಾಗಿ ವಿದ್ಯಾರ್ಥಿ ಸಾವು; ಮಗನನ್ನು ನೆನೆದು ಮಾಧ್ಯಮಗಳ ಮುಂದೆ ಕಣ್ಣೀರಾದ ಅಪ್ಪ

|

Updated on: Jun 19, 2023 | 3:22 PM

ದಕ್ಷಿಣ ಕ್ಯಾಂಪಸ್‌ನಲ್ಲಿರುವ ಆರ್ಯಭಟ್ಟ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ನಿಖಿಲ್ ಚೌಹಾಣ್ (19) ಅವರು ಭಾನುವಾರದಂದು ಸಹ ವಿದ್ಯಾರ್ಥಿಗಳ ಜಗಳದಲ್ಲಿ ಚಾಕು ಇರಿತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ. ಕಾಲೇಜು ಗೇಟ್ ಹೊರಗೆ ಅವರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ಸಾಗಿಸಿದ್ದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.

ದೆಹಲಿ ವಿವಿಯಲ್ಲಿ ನಡೆದ ಜಗಳದಲ್ಲಿ ಇರಿತಕ್ಕೊಳಗಾಗಿ ವಿದ್ಯಾರ್ಥಿ ಸಾವು; ಮಗನನ್ನು ನೆನೆದು ಮಾಧ್ಯಮಗಳ ಮುಂದೆ ಕಣ್ಣೀರಾದ ಅಪ್ಪ
ಕ್ಯಾಮೆರಾ ಮುಂದೆ ಕಣ್ಣೀರಾದ ನಿಖಿಲ್ ಅಪ್ಪ ಸಂಜಯ್ ಚೌಹಾಣ್
Follow us on

ದೆಹಲಿ: ಕಾಲೇಜಿನ ಹೊರಗಡೆಯೇ ಹತ್ಯೆಗೀಡಾದ ದೆಹಲಿ ವಿಶ್ವವಿದ್ಯಾನಿಲಯದ (Delhi University) ವಿದ್ಯಾರ್ಥಿಯ ತಂದೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸೌತ್ ಕ್ಯಾಂಪಸ್‌ನಲ್ಲಿರುವ ಆರ್ಯಭಟ್ಟ ಕಾಲೇಜಿನ (Aryabhatta College)ಪ್ರಥಮ ವರ್ಷದ ವಿದ್ಯಾರ್ಥಿ ನಿಖಿಲ್ ಚೌಹಾಣ್ (19) (Nikhil Chauhan) ಅವರು ಭಾನುವಾರದಂದು ಸಹ ವಿದ್ಯಾರ್ಥಿಗಳ ಜಗಳದಲ್ಲಿ ಚಾಕು ಇರಿತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ. ಕಾಲೇಜು ಗೇಟ್ ಹೊರಗೆ ಅವರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ಸಾಗಿಸಿದ್ದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ನಿಖಿಲ್ ಡೇಟಿಂಗ್ ಮಾಡುತ್ತಿದ್ದ ಹುಡುಗಿಯೊಂದಿಗೆ ಯಾರೋ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಜಗಳ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರ ಬೆಳಗ್ಗೆ ನಿಖಿಲ್ ತಂದೆ ಸಂಜಯ್ ಚೌಹಾಣ್ ಈ ದುರಂತ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಕಣ್ಣೀರಾಗಿದ್ದಾರೆ. ತಮ್ಮ ಮಗ ಚೂರಿ ಇರಿತಕ್ಕೊಳಗಾಗಿರುವ ಬಗ್ಗೆ ಭಾನುವಾರ ಮಧ್ಯಾಹ್ನದ ಸುಮಾರಿಗೆ ಕರೆ ಬಂದಿತ್ತು. ನಾವು ಆಸ್ಪತ್ರೆಗೆ ತಲುಪಿದ ನಂತರ, ನಮ್ಮ ಮಗ ಸತ್ತಿದ್ದಾನೆ ಎಂದು ಅವರು ಹೇಳಿದರು.


ನಿಖಿಲ್, ಮಾಡೆಲಿಂಗ್ ಕಾರ್ಯಕ್ರಮಕ್ಕಾಗಿ ಮುಂಬೈಗೆ ಪ್ರಯಾಣಿಸುತ್ತಿದ್ದರು ಎಂದು ಅವರು ಹೇಳಿದರು. ನಿಖಿಲ್‌ಗೆ ಮಾಡೆಲಿಂಗ್ ಮಾಡಲು ಮುಂಬೈನಿಂದ ಕರೆ ಬಂದಿತ್ತು ಆದರೆ ಅವನ ಪರೀಕ್ಷೆಗಳು ನಡೆಯುತ್ತಿವೆ, ಆದ್ದರಿಂದ ನಾನ ಮೊದಲು ಪರೀಕ್ಷೆಗೆ ಹಾಜರಾಗಲು ಹೇಳಿದೆ. ನಿಖಿಲ್‌ನ ಮೊದಲ-ಸೆಮಿಸ್ಟರ್ ಪರೀಕ್ಷೆ ಮುಗಿದಿದೆ.ಅವನು ಅವನ ಎರಡನೇ ಸೆಮಿಸ್ಟರ್‌ನಲ್ಲಿದ್ದನು. ನಾನು ಅವನನ್ನು ಕಳುಹಿಸಲು ತಯಾರಿ ನಡೆಸುತ್ತಿದ್ದೆ.ಈಗ ಎಲ್ಲವೂ ಮುಗಿದಿದೆ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಸಂಜಯ್ ಚೌಹಾಣ್ ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯಿಂದ ನಿಖಿಲ್ ಹಂತಕರನ್ನು ಗುರುತಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಯಾರು ಎಂಬುದು ಗೊತ್ತಿಲ್ಲ, ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಖಿಲ್‌ನನ್ನು ಕೊಲ್ಲಲು 10 ರಿಂದ 15 ಹುಡುಗರು ಬಂದಿದ್ದರು. ಕೆಲವರು ಬೈಕ್‌ನಲ್ಲಿ ಬಂದಿದ್ದರು ಮತ್ತು ಕೆಲವರು ಮೆಟ್ರೋದಲ್ಲಿ ಬಂದಿದ್ದರು. ನಿಖಿಲ್ ಹೃದಯದ ಬಳಿ ಇರಿದಿದ್ದು ರಕ್ತಸ್ರಾವದಿಂದ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎಂದು ಸಂಜಯ್ ಚೌಹಾಣ್ ಹೇಳಿದ್ದಾರೆ.

ಇದನ್ನೂ ಓದಿ: Delhi Double Murder: ದೆಹಲಿಯಲ್ಲಿ ಡಬಲ್ ಮರ್ಡರ್ ಪ್ರಕರಣ: ಮೂವರು ಅರೆಸ್ಟ್

ನಿಖಿಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಕೆಲವು ಸ್ನೇಹಿತರನ್ನು ಸಹ ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಚೌಹಾಣ್ ಹೇಳಿದರು. ನಿಖಿಲ್ ತಾಯಿ ಸೋನಿಯಾ ಚೌಹಾಣ್, ನನ್ನ ಮಗ ಮಾಡೆಲಿಂಗ್ ಮತ್ತು ನಟನೆಯನ್ನು ಇಷ್ಟಪಡುತ್ತಿದ್ದನು. ಅವರ ಎರಡು ಹಾಡುಗಳನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಹಾಡುಗಳಲ್ಲಿ ನಟಿಸಲಿದ್ದ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ