
ನವದೆಹಲಿ, ಡಿಸೆಂಬರ್ 25: ಬೆಂಗಳೂರಿನ ಬಳಿ ಫಾಕ್ಸ್ಕಾನ್ ಬೃಹತ್ ಘಟಕ ಸ್ಥಾಪಿಸಿ 9 ತಿಂಗಳಲ್ಲಿ 30,000 ಮಂದಿಯನ್ನು ನೇಮಕಾತಿ ಮಾಡಿಕೊಂಡ ಸುದ್ದಿಯನ್ನು ಹಂಚಿಕೊಂಡು, ಕರ್ನಾಟಕದ ಮಾದರಿ ಹಾಕಿಕೊಟ್ಟಿದೆ ಎಂದಿದ್ದ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇದು ಮೇಕ್ ಇನ್ ಇಂಡಿಯಾ ಯೋಜನೆ ಫಲ ಎಂದು ನೆನಪಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾವನ್ನು ಗುರುತಿಸಿದ್ದಕ್ಕೆ ಧನ್ಯವಾದ ಎಂದು ರಾಹುಲ್ ಗಾಂಧಿಗೆ (Rahul Gandhi) ಪರೋಕ್ಷವಾಗಿ ಟಾಂಟ್ ಕೊಟ್ಟಿದ್ದಾರೆ ಕೇಂದ್ರ ಸಚಿವರು.
‘ಕೇವಲ 8-9 ತಿಂಗಳಲ್ಲಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಈವರೆಗೂ ಇಷ್ಟು ವೇಗದಲ್ಲಿ ಫ್ಯಾಕ್ಟರಿ ನೇಮಕಾತಿ ಆಗಿದ್ದಿಲ್ಲ. ಇದು ಕೇವಲ ಅಂಕಿ ಅಂಶ ಅಲ್ಲ. ಪರಿವರ್ತನಾತ್ಮಕ ಉದ್ಯೋಗ ಸೃಷ್ಟಿ ಇದು. ಈ ಘಟಕದಲ್ಲಿ ಶೇ. 80ರಷ್ಟು ಮಹಿಳೆಯರೇ ಇರುವುದು, ಅದರಲ್ಲೂ 19-24ರ ವಯಸ್ಸಿನಲ್ಲಿರುವ, ಮೊದಲ ಬಾರಿಗೆ ಕೆಲಸ ಮಾಡುತ್ತಿರುವ ಯುವತಿಯರೇ ಇದ್ದಾರೆ. ಹೀಗಾಗಿ, ಈ ಉದ್ಯೋಗಸೃಷ್ಟಿ ಇನ್ನೂ ಪ್ರಬಲವೆನಿಸುತ್ತದೆ’ ಎಂದು ಕಾಂಗ್ರೆಸ್ ನಾಯಕ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದರು.
‘ಈ ಮಟ್ಟದಲ್ಲಿ ಮತ್ತು ವೇಗದಲ್ಲಿ ಉತ್ಪಾದನಾ ವಲಯ ಬೆಳೆಯಬಲ್ಲಂತಹ ಇಕೋಸಿಸ್ಟಂ ಅನ್ನು ನಿರ್ಮಿಸುವ ಮೂಲಕ ಕರ್ನಾಟಕವು ಒಂದು ಮಾದರಿ ಹಾಕಿಕೊಟ್ಟಿದೆ. ಗೌರವದ ಕೆಲಸ ಮತ್ತು ಸರ್ವರಿಗೂ ಅವಕಾಶ.. ಇಂಥ ಭಾರತವನ್ನು ನಾವು ಕಟ್ಟಬೇಕಿರುವುದು’ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನಿ ವೈಷ್ಣವ್, ‘ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸನ್ನು ಗುರುತಿಸಿದ್ದಕ್ಕೆ ಧನ್ಯವಾದ. ನೀವು ಗಮನಿಸಿದಂತೆ, ನಮ್ಮ ಪ್ರಧಾನಿಗಳ ದೃಷ್ಟಿಯಂತೆ ನಾವು ಉತ್ಪಾದಕ ಆರ್ಥಿಕತೆಯಾಗಿ ಬೆಳೆಯುತ್ತಿದ್ದೇವೆ’ ಎಂದಿದ್ದಾರೆ.
ಸಚಿವ ಅಶ್ವಿನಿ ವೈಷ್ಣವ್ ಅವರ ಎಕ್ಸ್ ಪೋಸ್ಟ್
Thanks @RahulGandhi for acknowledging the success of PM Shri @narendramodi Ji’s ‘Make in India’ programme. As you have noted, we are becoming a producer economy as we implement our PM’s vision. pic.twitter.com/1K8kmE6s3t
— Ashwini Vaishnaw (@AshwiniVaishnaw) December 24, 2025
ಇದನ್ನೂ ಓದಿ: ಒಡಿಶಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಐವರು ನಕ್ಸಲರ ಹತ್ಯೆ
ದೇವನಹಳ್ಳಿ ಬಳಿ 300 ಎಕರೆ ಪ್ರದೇಶದಲ್ಲಿ ಫಾಕ್ಸ್ಕಾನ್ನ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಅನ್ನು ಸ್ಥಾಪಿಸಲಾಗಿದೆ. ಇಲ್ಲಿ 50,000 ಮಂದಿ ಉದ್ಯೋಗಿಗಳು ಕೆಲಸ ಮಾಡುವಷ್ಟು ವಿಶಾಲವಾಗಿದೆ. ವರ್ಷಕ್ಕೆ ಇಲ್ಲಿ ಎರಡು ಕೋಟಿ ಐಫೋನ್ಗಳನ್ನು ಅಸೆಂಬ್ಲಿಂಗ್ ಮಾಡಬಹುದು. ಫಾಕ್ಸ್ಕಾನ್ ಇಲ್ಲಷ್ಟೇ ಅಲ್ಲದೆ, ತಮಿಳುನಾಡಿನಲ್ಲಿ ಎರಡು ಘಟಕಗಳನ್ನು ಹೊಂದಿದೆ. ಆ್ಯಪಲ್ ಕಂಪನಿಯ ಐಫೋನ್ಗಳನ್ನು ಭಾರತದಲ್ಲಿ ಫಾಕ್ಸ್ಕಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗಳು ಅಸೆಂಬ್ಲಿಂಗ್ ಮಾಡಿಕೊಡುತ್ತವೆ. ಚೀನಾದಲ್ಲಿ ಈಗಲೂ ಹೆಚ್ಚಿನ ಐಫೋನ್ ತಯಾರಿಕೆ ಆಗುತ್ತದಾದರೂ ಸದ್ಯ ಭಾರತದಲ್ಲಿ ತಯಾರಾಗುತ್ತಿರುವ ಐಫೋನ್ಗಳ ಸಂಖ್ಯೆ ಶೇ. 20 ಮುಟ್ಟಿರುವುದು ಗಮನಾರ್ಹ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ