ಜೈಪುರ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, 2021ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ರಾಜ್ಯವಾರು ಪಟ್ಟಿಯಲ್ಲಿ ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಸುಳ್ಳು ಕೇಸುಗಳಾಗಿವೆ ಎಂದು ಹೇಳಿದ್ದಾರೆ. ರಾಜಸ್ಥಾನದಲ್ಲಿ (Rajasthan) ಜಾರಿಗೆ ತಂದಿರುವ ಕಡ್ಡಾಯ ಎಫ್‌ಐಆರ್ ವ್ಯವಸ್ಥೆಯೇ ಈ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಅತ್ಯಾಚಾರ (Rape Cases) ಪ್ರಕರಣಗಳು ಸೇರಿದಂತೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಉತ್ತರ ಪ್ರದೇಶದ ನಂತರ ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ.
ಜೈಪುರದ ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಘಟಿಕೋತ್ಸವ ಪರೇಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್, ರಾಜಸ್ಥಾನದಲ್ಲಿ ಮಹಿಳೆಯರ ಮೇಲಾಗುತ್ತಿರುವ ಹಲ್ಲೆ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯದ ಸುಮಾರು ಶೇ. 56ರಷ್ಟು ಅಪರಾಧ ಪ್ರಕರಣಗಳು ಸುಳ್ಳು ಕೇಸುಗಳಾಗಿವೆ ಎಂದು ಹೇಳಿದ್ದಾರೆ.
ಯಾರು ಅತ್ಯಾಚಾರ ಎಸಗುತ್ತಾರೆ? ಹೆಚ್ಚಿನ ಪ್ರಕರಣಗಳಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಪರಿಚಿತರು, ಸಂಬಂಧಿಕರೇ ಈ ಕೃತ್ಯ ಎಸಗಿರುತ್ತಾರೆ. ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಶೇ.56ರಷ್ಟು ಪ್ರಕರಣಗಳು ನಕಲಿಯಾಗಿವೆ. ಈ ನಿಟ್ಟಿನಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ” ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ದಲಿತ ಬಾಲಕನ ಸಾವು ಪ್ರಕರಣ: ಶಾಸಕನ ರಾಜೀನಾಮೆ ಬೆನ್ನಲ್ಲೇ 12 ಕೌನ್ಸಿಲರ್ಗಳ ರಾಜೀನಾಮೆ
ಡಿಜಿಪಿ ನನ್ನ ಪಕ್ಕದಲ್ಲಿ ನಿಂತಿದ್ದಾರೆ, ಸುಳ್ಳು ಪ್ರಕರಣಗಳನ್ನು ದಾಖಲಿಸುವವರನ್ನು ಸುಮ್ಮನೆ ಬಿಡಬಾರದು. ಸುಳ್ಳು ಕೇಸ್ ಹಾಕಿದವರಿಗೆ ಶಿಕ್ಷೆ ನೀಡಿದರೆ ಇತರರು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ರಾಜ್ಯದ ಮಾನಹಾನಿ ಮಾಡುವ ಧೈರ್ಯ ಮಾಡುವುದಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ವಾಸ್ತವವಾಗಿ ರಾಜಸ್ಥಾನದಲ್ಲಿ ಅಪರಾಧದ ಪ್ರಮಾಣ ಕಡಿಮೆಯಾಗಿದೆ. ನಮ್ಮ ವಿರೋಧ ಪಕ್ಷಗಳು ಅಪರಾಧದ ಪ್ರಮಾಣ ಹೆಚ್ಚುತ್ತಿದೆ ಎಂದು ವದಂತಿಗಳನ್ನು ಹರಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರಧಾನ ಕಚೇರಿ ಹೊರಗೆ ಎಎಪಿ ಪ್ರತಿಭಟನೆ, ದಲಿತ ಬಾಲಕನ ಕುಟುಂಬಕ್ಕೆ ₹20 ಲಕ್ಷ ಪರಿಹಾರ ಘೋಷಿಸಿದ ಅಶೋಕ್ ಗೆಹ್ಲೋಟ್
ಈ ಹಿಂದೆ ಜನರು ಅವಮಾನದ ಭಯದಿಂದ ಠಾಣೆಗೆ ಹೋಗುತ್ತಿರಲಿಲ್ಲ. ಈಗ ಪೊಲೀಸ್ ಠಾಣೆಗಳಲ್ಲಿ ಸ್ವಾಗತ ಕೊಠಡಿಗಳನ್ನು ಸ್ಥಾಪಿಸಿ, ಕಡ್ಡಾಯ ಎಫ್‌ಐಆರ್‌ಗಳನ್ನು ಒದಗಿಸುವ ಕ್ರಮವನ್ನು ಜಾರಿಗೆ ತಂದಿದ್ದೇವೆ. ಇದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈಗ ಪೊಲೀಸ್ ಠಾಣೆಗೆ ದೂರು ನೀಡಿ ಯಾರೇ ಹೋದರೂ ಎಫ್‌ಐಆರ್ ದಾಖಲಾಗಬೇಕು. ಪ್ರತಿ ರಾಜ್ಯದಲ್ಲೂ ಈ ಕ್ರಮ ಜಾರಿಯಾಗಬೇಕು. ಎಫ್‌ಐಆರ್‌ಗಳನ್ನು ಕಡ್ಡಾಯಗೊಳಿಸುವುದರಿಂದ ಅಪರಾಧದ ಅಂಕಿಅಂಶಗಳು ಹೆಚ್ಚಾಗುತ್ತವೆ ಎಂದು ನಾವು ಮೊದಲೇ ಹೇಳಿದ್ದೆವು ಎಂದು ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ರಾಷ್ಟ್ರೀಯ ದರಕ್ಕೆ ಹೋಲಿಸಿದರೆ ರಾಜಸ್ಥಾನದಲ್ಲಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಹೆಚ್ಚಾಗಿದೆ ಎಂದು ಗೆಹ್ಲೋಟ್ ರಾಜ್ಯದ ಪೊಲೀಸ್ ಸೇವೆಯನ್ನು ಶ್ಲಾಘಿಸಿದ್ದಾರೆ.
Published On - 8:43 am, Sat, 3 September 22