ಮುಂಬೈ: ಮಹಾರಾಷ್ಟ್ರದ ಖ್ಯಾತ ಚಿತ್ರಕಾರ ರಾಮ್ ಇಂದ್ರನೀಲ್ ಕಾಮತ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಾಮತ್ ನಿನ್ನೆ ಮಧ್ಯಾಹ್ನ ಬದುಕು ಕೊನೆಗೊಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
41 ವರ್ಷದ ರಾಮ್ ಕಾಮತ್ ಅವಿವಾಹಿತರಾಗಿದ್ದು ತಮ್ಮ ತಾಯಿ ಮತ್ತು ಸಹೋದರಿಯೊಟ್ಟಿಗೆ ಮುಂಬೈನ ಮಾತುಂಗಾದಲ್ಲಿ ವಾಸವಾಗಿದ್ದರು. ಬುಧವಾರ ಬಾತ್ರೂಮ್ಗೆ ಹೋಗ್ತೀನಿ ಎಂದು ಒಳಹೋದ ಚಿತ್ರಕಾರ ಬಹಳ ಹೊತ್ತು ಹೊರಬರಲೇ ಇಲ್ಲವಂತೆ. ಹೀಗಾಗಿ, ಅವರ ತಾಯಿ ಸ್ನಾನದ ಕೋಣೆಯ ಒಳಹೊಕ್ಕಾಗ ರಾಮ್ ಕಾಮತ್ರ ಮೃತದೇಹ ಬಾತ್ಟಬ್ನಲ್ಲಿ ಪತ್ತೆಯಾಗಿದೆ.
ಕೂಡಲೇ ಕಾಮತ್ ತಾಯಿ, ಮಗನನ್ನ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಷ್ಟರೊಳಗೆ ರಾಮ್ ಕಾಮತ್ ಮೃತಪಟ್ಟಿದ್ರು ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಮೃತದೇಹದ ಬಳಿ ಸೂಸೈಡ್ ನೋಟ್ ಪತ್ತೆಯಾಗಿದ್ದು ಅದರಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಕಾಮತ್ ಉಲ್ಲೇಖಿಸಿದ್ದಾರಂತೆ.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ.