
ನವದೆಹಲಿ, ಮೇ 5: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ (India-Pakistan Tensions) ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇದರ ನಡುವೆ, ಪಾಕಿಸ್ತಾನಿ ಹ್ಯಾಕರ್‌ಗಳು ಭಾರತೀಯ ರಕ್ಷಣಾ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಸೈಬರ್ ದಾಳಿಗಳು ರಕ್ಷಣಾ ಸಿಬ್ಬಂದಿಯ ಲಾಗಿನ್ ಆಕ್ಸೆಸ್ ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ ಎಕ್ಸ್ “ಪಾಕಿಸ್ತಾನ ಸೈಬರ್ ಫೋರ್ಸ್” ನ ಹ್ಯಾಕರ್‌ಗಳು ಮಿಲಿಟರಿ ಎಂಜಿನಿಯರ್ ಸರ್ವೀಸಸ್ ಮತ್ತು ಮನೋಹರ್ ಪರಿಕ್ಕರ್ ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್‌ನ ಸೂಕ್ಷ್ಮ ಡೇಟಾಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದೆ. ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಉದ್ಯಮವಾದ ಆರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್‌ನ ವೆಬ್‌ಸೈಟ್ ಅನ್ನು ಕೂಡ ಹ್ಯಾಕ್ ಮಾಡಲು ಹ್ಯಾಕರ್‌ಗಳು ಪ್ರಯತ್ನಿಸಿದ್ದಾರೆ.
“ಪಾಕಿಸ್ತಾನ ಸೈಬರ್ ಫೋರ್ಸ್” ಎಂದು ಗುರುತಿಸಿಕೊಳ್ಳುವ ಗುಂಪು ಮಿಲಿಟರಿ ಎಂಜಿನಿಯರಿಂಗ್ ಸೇವೆ (MES) ಮತ್ತು ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ (MP-IDSA) ಸೇರಿದಂತೆ ಭಾರತೀಯ ರಕ್ಷಣಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮೇ 9ರಂದು ಕಾದಿದೆಯಾ ಆಪತ್ತು? ಐಎಂಎಫ್ಗೆ ಭಾರತದ ಪ್ರತಿನಿಧಿಯಾಗಿ ಪಿ ಅಯ್ಯರ್ ಆಯ್ಕೆ
ವರದಿಯ ಪ್ರಕಾರ, ಹ್ಯಾಕಿಂಗ್ ಪ್ರಯತ್ನದಿಂದ ಉಂಟಾದ ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಆರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್‌ನ ವೆಬ್‌ಸೈಟ್ ಅನ್ನು ಸಂಪೂರ್ಣ ಆಡಿಟ್‌ಗಾಗಿ ಆಫ್‌ಲೈನ್‌ಗೆ ತೆಗೆದುಕೊಳ್ಳಲಾಗಿದೆ. ಈ ಘಟನೆಗೆ ಪ್ರತಿಕ್ರಿಯೆಯಾಗಿ, ರಕ್ಷಣಾ ಸಂಬಂಧಿತ ವೇದಿಕೆಗಳಲ್ಲಿ ಸೈಬರ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. ಇದರಲ್ಲಿ ಡಿಜಿಟಲ್ ರಕ್ಷಣೆಗಳನ್ನು ಬಲಪಡಿಸುವುದು, ಲೆಕ್ಕಪರಿಶೋಧನೆಗಳನ್ನು ನಡೆಸುವುದು ಮತ್ತು ಅತ್ಯಾಧುನಿಕ ಒಳನುಗ್ಗುವಿಕೆ ಪ್ರಯತ್ನಗಳ ವಿರುದ್ಧ ಅಲರ್ಟ್ ಆಗಿರುವುದು ಸೇರಿವೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಭಾರತದ ಶಾಕ್; ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಕಳೆದ ವಾರದ ಆರಂಭದಲ್ಲಿ, ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದಿಂದ ಸಂಭಾವ್ಯ ಸೈಬರ್ ದಾಳಿಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಶ್ರೀನಗರ ಮತ್ತು ರಾಣಿಖೇತ್‌ನಲ್ಲಿರುವ ಸೈನಿಕ್ ಶಾಲೆಗಳಿಗೆ ಎಚ್ಚರಿಕೆಗಳನ್ನು ನೀಡಿತ್ತು. ಕಳೆದ 24 ಗಂಟೆಗಳಲ್ಲಿ ಅಂತಹ 4 ಪ್ರಯತ್ನಗಳನ್ನು ವಿಫಲಗೊಳಿಸಿದ ನಂತರ ಎಚ್ಚರಿಕೆ ನೀಡಲಾಗಿತ್ತು. ಶಾಲಾ ವೆಬ್‌ಸೈಟ್‌ಗಳು ಮತ್ತು ಸಂವಹನ ವೇದಿಕೆಗಳ ಮೂಲಕ ಮಿಲಿಟರಿ ಸಂಬಂಧಿತ ಡೇಟಾವನ್ನು ಪ್ರವೇಶಿಸಲು ಪಾಕಿಸ್ತಾನಿ ಕಾರ್ಯಕರ್ತರು ಮಾಡುವ ಪ್ರಯತ್ನಗಳೆಂದು ಪರಿಗಣಿಸಲಾಗುತ್ತಿರುವ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವುದು ಅಥವಾ ಅನುಮಾನಾಸ್ಪದ ಕರೆಗಳು, ಸಂದೇಶಗಳಿಗೆ ಆನ್‌ಲೈನ್‌ನಲ್ಲಿ ಪ್ರತಿಕ್ರಿಯಿಸದಂತೆ ಶಾಲೆಗಳು ಪೋಷಕರನ್ನು ಎಚ್ಚರಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ