ದೆಹಲಿ ಆಗಸ್ಟ್ 29: ಅಕ್ಟೋಬರ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಸರ್ಕಾರದ ಮುಖ್ಯಸ್ಥರ ಸಭೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಪಾಕಿಸ್ತಾನ ಔಪಚಾರಿಕವಾಗಿ ಆಹ್ವಾನಿಸಿದೆ ಎಂದು ವಿದೇಶಾಂಗ ಕಚೇರಿ ವಕ್ತಾರರು ತಿಳಿಸಿದ್ದಾರೆ. ಪಾಕಿಸ್ತಾನವು ಎರಡು ದಿನಗಳ ಎಸ್‌ಸಿಒ ಸರ್ಕಾರದ ಮುಖ್ಯಸ್ಥರ ಸಭೆಯನ್ನು ಅಕ್ಟೋಬರ್‌ನಲ್ಲಿ ಆಯೋಜಿಸಲಿದೆ. ಪ್ರಸ್ತುತ ಶಾಂಘೈ ಸಹಕಾರ ಸಂಸ್ಥೆ (SCO) ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (CHG) ನ ಅಧ್ಯಕ್ಷ ಸ್ಥಾನವನ್ನು ಪಾಕಿಸ್ತಾನ ಹೊಂದಿದೆ.
ಅಕ್ಟೋಬರ್ 15-16 ರಂದು ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ದೇಶಗಳ ಮುಖ್ಯಸ್ಥರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ (ಸಹ) ಆಹ್ವಾನವನ್ನು ಕಳುಹಿಸಲಾಗಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೆಲವು ದೇಶಗಳು ಈಗಾಗಲೇ ಎಸ್‌ಸಿಒ ಸಭೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿವೆ, ಪಾಲ್ಗೊಳ್ಳುವವರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿಲ್ಲ. ಈ ಆಹ್ವಾನಕ್ಕೆ ಭಾರತ ಇನ್ನೂ ಸ್ಪಂದಿಸಿಲ್ಲ.
ಭಾರತದೊಂದಿಗಿನ ಸಂಬಂಧದ ಬಗ್ಗೆ ಕೇಳಿದಾಗ, ವಕ್ತಾರರು, “ಪಾಕಿಸ್ತಾನವು ಭಾರತದೊಂದಿಗೆ ನೇರ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿಲ್ಲ” ಎಂದು ಹೇಳಿದರು.
ಕಳೆದ ವರ್ಷ, ಭಾರತವು ಎಸ್‌ಸಿಒ ಸಭೆಯನ್ನು ವರ್ಚುವಲ್ ಸ್ವರೂಪದಲ್ಲಿ ಆಯೋಜಿಸಿದ್ದು, ಅದರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನವನ್ನು ಆಹ್ವಾನಿಸಿತು. ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿಡಿಯೋ ಲಿಂಕ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಮೇ 2023 ರಲ್ಲಿ ಗೋವಾದಲ್ಲಿ ನಡೆದ SCO ಕೌನ್ಸಿಲ್ ಆಫ್ ವಿದೇಶಾಂಗ ಮಂತ್ರಿಗಳ ವೈಯಕ್ತಿಕ ಎರಡು ದಿನಗಳ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದ್ದರು. ಸುಮಾರು 12 ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ಮೊದಲ ಪಾಕಿಸ್ತಾನಿ ವಿದೇಶಾಂಗ ಸಚಿವರಾಗಿದ್ದಾರೆ ಭುಟ್ಟೋ.
ಈ ಹಿಂದೆ, ಎಸ್‌ಸಿಒ ಸಭೆಯ ಆಹ್ವಾನವನ್ನು ಭಾರತ ತಿರಸ್ಕರಿಸಿದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದಾಗ್ಯೂ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಧಿಕೃತ ಹೇಳಿಕೆಯಲ್ಲಿ ಈ ವರದಿಗಳನ್ನು ನಿರಾಕರಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಆಕೆಗೆ ಅತ್ಯಾಚಾರದ ಅನುಭವವಿದೆ ಎಂದ ಪಂಜಾಬ್ ನಾಯಕನಿಗೆ ಕಂಗನಾ ರಣಾವತ್ ಖಡಕ್ ತಿರುಗೇಟು
“ಪಾಕಿಸ್ತಾನದಲ್ಲಿ ಎಸ್‌ಸಿಒ ಸಭೆಯಲ್ಲಿ ಪ್ರಧಾನಿ ಭಾಗವಹಿಸುವುದಿಲ್ಲ ಅಥವಾ ಇಎಎಂ ಪಾಕಿಸ್ತಾನದಲ್ಲಿ ಎಸ್‌ಸಿಒ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಸುದ್ದಿಗಳು ಹರಿದಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. MEA ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಈ ವಿಷಯದಲ್ಲಿ ಊಹಾಪೋಹದ ಸುದ್ದಿಗಳನ್ನು ತಪ್ಪಿಸುವಂತೆ ವಿನಂತಿಸುತ್ತದೆ” ಎಂದು MEA ಅಧಿಕಾರಿಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ