
ಚಿಕ್ಕಬಳ್ಳಾಪುರ, ಜುಲೈ 12: ಬಾಗೇಪಲ್ಲಿ ತಾಲೂಕಿನಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ಹಾಗೂ ಭಾರತೀಯ ಗುರುತಿನ ಚೀಟಿಗಳನ್ನು ಹೊಂದಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಾಕಿಸ್ತಾನ ಮೂಲದ ಮಹಿಳೆ ಫರ್ಹಾನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದಿನ್ ಖಾನ್ ಎಂದು ಗುರುತಿಸಲಾಗಿದೆ. ಇವರು ಬಾಗೇಪಲ್ಲಿಯ ಸ್ಥಳೀಯ ನಿವಾಸಿ ಅಯೂಬ್ ಖಾನ್ ಎಂಬಾತನನ್ನು ವಿವಾಹವಾಗಿದ್ದರು. ಅಯೂಬ್ ಖಾನ್ ಪ್ರಸ್ತುತ ಗಲ್ಫ್ (ಅರಬ್) ದೇಶವೊಂದರಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ ನಾಲ್ಕು ಮಕ್ಕಳಿದ್ದು, ಅವರಲ್ಲಿ ಮೂವರು ಮಕ್ಕಳು ಮತ್ತು ಅಯೂಬ್ ಖಾನ್ ಭಾರತೀಯ ನಾಗರಿಕರಾಗಿದ್ದಾರೆ. ಆದರೆ ಫರ್ಹಾನಾಜ್ ಮತ್ತು ಆಕೆಯ ಒಬ್ಬ ಮಗ ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ.
ಫರ್ಹಾನಾಜ್ (Farhanaz) ಮತ್ತು ಮೊಹಮ್ಮದ್ ಫರ್ದೀನ್ ಖಾನ್ (Mohammed Fardeen Khan), ಈ ಇಬ್ಬರೂ ಪಾಕಿಸ್ತಾನಿ ಪ್ರಜೆಗಳು ತಮ್ಮ ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದರು. ಅದಕ್ಕಿಂತ ಮುಖ್ಯವಾಗಿ, ತಾವು ಪಾಕಿಸ್ತಾನಿ ಪ್ರಜೆಗಳು ಎಂಬ ನೈಜ ಸಂಗತಿಯನ್ನು ಮರೆಮಾಚಿ ಭಾರತದ ಮತದಾರರ ಗುರುತಿನ ಚೀಟಿ (Voter ID) ಮತ್ತು ರೇಷನ್ ಕಾರ್ಡ್ (Ration Card) ನಂತಹ ಅಧಿಕೃತ ದಾಖಲೆಗಳನ್ನು ಪಡೆದುಕೊಂಡಿದ್ದರು. ಈ ರೀತಿ ಅಕ್ರಮವಾಗಿ ನಾಗರಿಕ ದಾಖಲೆಗಳನ್ನು ಪಡೆದಿರುವ ಆರೋಪದ ಮೇಲೆ ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದಾರೆ. ನಾಗರಿಕ ದಾಖಲೆಗಳನ್ನು ಪಡೆಯುವ ಮೊದಲು ಪೌರತ್ವ ಪಡೆಯುವುದು ಕಾನೂನಿನಲ್ಲಿರುವ ನಿಯಮ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು?
ಬಾಗೇಪಲ್ಲಿ ತಹಶೀಲ್ದಾರ್ ಮನಿಷಾ ಎನ್. ಪತ್ರಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಗಳು ತಕ್ಷಣವೇ ಜಾರಿಗೆ ಬರುವಂತೆ ಅವರ ಅಕ್ರಮ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಿದ್ದಾರೆ. ಸಂಬಂಧಪಟ್ಟ ಚುನಾವಣಾ ಅಧಿಕಾರಿಯು ಅವರ ವೋಟರ್ ಐಡಿಯನ್ನು ಕೂಡ ರದ್ದುಗೊಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಾಲ್ ಚೌಕ್ಸೆ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ವಿದೇಶಿಯರ ಕಾಯ್ದೆ (Foreigners Act) ಮತ್ತು ಜನಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ.
ಇದನ್ನೂ ಓದಿ: ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್ನ ವಾಟ್ಸಾಪ್ ಸ್ಕ್ರೀನ್ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ?
ಈ ಪಾಕಿಸ್ತಾನಿ ಪ್ರಜೆಗಳಿಗೆ ಭಾರತೀಯ ಗುರುತಿನ ಚೀಟಿಗಳನ್ನು ನೀಡಲು ಯಾರು ಸಹಾಯ ಮಾಡಿದರು ಮತ್ತು ಇವರು ಯಾವ ವ್ಯವಸ್ಥೆಯ ಮೂಲಕ ಈ ದಾಖಲೆಗಳನ್ನು ಪಡೆದುಕೊಂಡರು ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ