ಪಾಕಿಸ್ತಾನದ ಪಿಆರ್; ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ವಿರುದ್ಧ ಕಾಂಗ್ರೆಸ್, ಬಿಜೆಪಿ ವಾಗ್ದಾಳಿ

ಅಮೆರಿಕದ ನ್ಯೂಯಾರ್ಕ್ ನಗರದ ಡೆಮಾಕ್ರಟಿಕ್ ಮೇಯರ್ ಪ್ರೈಮರಿಯಲ್ಲಿ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ವಿರುದ್ಧ ಜೋಹ್ರಾನ್ ಮಮ್ದಾನಿ ಗೆಲುವು ಸಾಧಿಸಿದ್ದಾರೆ. ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕಾಗಿ ನಡೆದ ಡೆಮಾಕ್ರಟಿಕ್ ಪ್ರೈಮರಿಯಲ್ಲಿ ಜೋಹ್ರಾನ್ ಮಮ್ದಾನಿ ಅವರ ಅನಿರೀಕ್ಷಿತ ಗೆಲುವು ಭಾರತೀಯ ರಾಜಕೀಯ ವ್ಯಕ್ತಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಸೇರಿದಂತೆ ಹಲವರು ಮಮ್ದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ, ಜೂನ್ 26: ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ಡೆಮಾಕ್ರಟಿಕ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ಅವರ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಟೀಕಿಸಿವೆ. ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಮಮ್ದಾನಿಯನ್ನು ಟೀಕಿಸಿದ್ದಾರೆ. “ಜೊಹ್ರಾನ್ ಮಮ್ದಾನಿ ಬಾಯಿ ತೆರೆದಾಗ, ಪಾಕಿಸ್ತಾನದ ಪಿಆರ್ ತಂಡವು ರಜೆ ತೆಗೆದುಕೊಳ್ಳುತ್ತದೆ. ನ್ಯೂಯಾರ್ಕ್‌ನಿಂದ ಕಾಲ್ಪನಿಕ ಕಥೆಗಳನ್ನು ಘೋಷಿಸುತ್ತಿರುವ ಅವರಂತಹ ಹಿತಶತ್ರುಗಳು ಭಾರತಕ್ಕೆ ಅಗತ್ಯವಿಲ್ಲ” ಎಂದು ಸಿಂಘ್ವಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪಕ್ಷದ ಮೇಯರ್ ಪ್ರೈಮರಿಯಲ್ಲಿ ತಮ್ಮ ಪ್ರತಿಸ್ಪರ್ಧಿ ಆಂಡ್ರ್ಯೂ ಕ್ಯುಮೊ ವಿರುದ್ಧ ಜಯ ಗಳಿಸಿದ ನಂತರ ಜೋಹ್ರಾನ್ ಮಮ್ದಾನಿ ಭಾರತೀಯರಿಗಿಂತ ಹೆಚ್ಚು ಪಾಕಿಸ್ತಾನಿಯಂತೆ ಕಾಣುತ್ತಿದ್ದಾರೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಅವರ ರಕ್ತಸಂಬಂಧ ಮತ್ತು ಹಿಂದೂ ಗುರುತನ್ನು ಪ್ರಶ್ನಿಸಿದ ಕಂಗನಾ, ಡೆಮಾಕ್ರಟಿಕ್ ನ್ಯೂಯಾರ್ಕ್ ಮೇಯರ್ ನಾಮನಿರ್ದೇಶಿತರು ಹಿಂದೂ ಧರ್ಮವನ್ನು ದ್ವೇಷಿಸುತ್ತಾರೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಸ್ವತಂತ್ರ ಹಕ್ಕಿಯೂ ಆಕಾಶ ನೋಡಲೇಬೇಕು; ಶಶಿ ತರೂರ್ ನಿಗೂಢ ಪೋಸ್ಟ್‌ಗೆ ಕಾಂಗ್ರೆಸ್ ಪ್ರತಿಕ್ರಿಯೆ

“ಮಮ್ದಾನಿ ಅವರ ತಾಯಿ ಮೀರಾ ನಾಯರ್, ನಮ್ಮ ಅತ್ಯುತ್ತಮ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು. ಮಹಾನ್ ಭಾರತದಲ್ಲಿ ಹುಟ್ಟಿ ಬೆಳೆದ ಪ್ರೀತಿಯ ಮತ್ತು ಪ್ರಸಿದ್ಧ ಮಹಿಳೆಯಾದ ಅವರು ಪ್ರಸಿದ್ಧ ಲೇಖಕ ಮೆಹಮೂದ್ ಮಮ್ದಾನಿ (ಗುಜರಾತಿ ಮೂಲದವರು) ಅವರನ್ನು ವಿವಾಹವಾದರು. ಅವರ ಮಗನ ಹೆಸರು ಜೋಹ್ರಾನ್, ಅವರು ಭಾರತೀಯರಿಗಿಂತ ಹೆಚ್ಚು ಪಾಕಿಸ್ತಾನಿಯಾಗಿದ್ದಾರೆ . ಅವರ ಹಿಂದೂ ಗುರುತು ಅಥವಾ ರಕ್ತಸಂಬಂಧ ಏನೇ ಆಗಿರಲಿ ಈಗ ಅವರು ಹಿಂದೂ ಧರ್ಮವನ್ನು ಅಳಿಸಿಹಾಕಲು ಸಿದ್ಧರಾಗಿದ್ದಾರೆ. ನಾನು ಮೀರಾ ನಾಯರ್ ಅವರನ್ನು ಒಂದೆರಡು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ. ಅವರ ಪೋಷಕರಿಗೆ ಅಭಿನಂದನೆಗಳು!” ಎಂದು ಬಿಜೆಪಿ ಸಂಸದೆ ಕಂಗನಾ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾದ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಯಾರು?

ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ನ್ಯೂಯಾರ್ಕ್ ಮೇಯರ್ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಕ್ಯುಮೊ ಅವರನ್ನು ಸೋಲಿಸಿ ಮಮ್ದಾನಿ ಅದರ ಅಧಿಕೃತ ನಾಮನಿರ್ದೇಶಿತರಾದರು. ಅವರೇನಾದರೂ ಆಯ್ಕೆಯಾದರೆ ಅಮೆರಿಕದ ಅತಿದೊಡ್ಡ ನಗರವನ್ನು ಮುನ್ನಡೆಸುವ ಮೊದಲ ಮುಸ್ಲಿಂ ಮತ್ತು ಭಾರತೀಯ-ಅಮೆರಿಕನ್ ಆಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:47 pm, Thu, 26 June 25