ಕೃಷಿ ಕಾಯ್ದೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ: ಟ್ವೀಟ್​ನಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗಲ್ಲ ಎಂದ ವಿಪಕ್ಷ

ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ರಾಷ್ಟ್ರಪತಿ ಭಾಷಣದ ಅಂಶಗಳನ್ನು ಉಲ್ಲೇಖಿಸಿದ ಝಾ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸುದೃಢವಾಗಿದೆ. ಯಾರೊಬ್ಬರ ಟ್ವೀಟ್ ನಿಂದ ಅದು ದುರ್ಬಲವಾಗಲ್ಲ ಎಂದರು.

ಕೃಷಿ ಕಾಯ್ದೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ: ಟ್ವೀಟ್​ನಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗಲ್ಲ ಎಂದ ವಿಪಕ್ಷ
ಸಂಸತ್ ಭವನ
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 04, 2021 | 9:33 PM

ದೆಹಲಿ: ರೈತರ ಪ್ರತಿಭಟನೆ ಮತ್ತು ರೈತರ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಧೋರಣೆ ಗುರುವಾರ ರಾಜ್ಯಸಭೆ ಕಲಾಪದಲ್ಲಿಯೂ ಪ್ರತಿಧ್ವನಿಸಿತು. ಯಾರೊಬ್ಬರ ಟ್ವೀಟ್​ನಿಂದ ದುರ್ಬಲವಾಗುವಂಥ ಪ್ರಜಾಪ್ರಭುತ್ವ ನಮ್ಮದಲ್ಲ ಎಂಬ ಮಾತು ದೊಡ್ಡದನಿಯಲ್ಲಿ ಸದ್ದು ಮಾಡಿತು. ಎಲ್ಲರ ಗಮನ ಸೆಳೆಯಿತು.

ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ರಾಷ್ಟ್ರಪತಿ ಭಾಷಣದ ಅಂಶಗಳನ್ನು ಉಲ್ಲೇಖಿಸಿದ ಆರ್​ಜೆಡಿ ಸಂಸದ ಮನೋಜ್ ಕುಮಾರ್  ಝಾ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿದೆ. ಯಾರೊಬ್ಬರ ಟ್ವೀಟ್ ನಿಂದ ಅದು ದುರ್ಬಲವಾಗಲ್ಲ  ಎಂದರು. ಅಮೆರಿಕದ ಪಾಪ್ ತಾರೆ ರಿಹಾನ್ನಾ ಮತ್ತು ಸ್ವೀಡನ್​ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್​ಬರ್ಗ್ ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿಕ್ರಿಯೆಯ ಬಗ್ಗೆ ಝಾ ಮೇಲಿನಂತೆ ಪ್ರತಿಕ್ರಿಯಿಸಿದರು.

ರೈತರ ಪ್ರತಿಭಟನೆಗೆ ಸರ್ಕಾರ ಪ್ರತಿಕ್ರಿಯಿಸಿದ ರೀತಿಯನ್ನು ಟೀಕಿಸಿದ ಅವರು, ರೈತರ ಪ್ರತಿಭಟನೆ ಬಗ್ಗೆ ಮಾಧ್ಯಮಗಳು ಪಾಕಿಸ್ತಾನಿ ದೃಷ್ಟಿಕೋನ ಮತ್ತು ಖಾಲಿಸ್ತಾನಿ ದೃಷ್ಟಿಕೋನದಿಂದ ಮಾತನಾಡಿವೆ. ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭೆಯಲ್ಲಿ ಹೆಚ್ಚಿನ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಸಂಸದ ಜೈರಾಮ್ ರಮೇಶ್ ಮನವಿ ಮಾಡಿದರು. ಕೋವಿಡ್ ನಿಯಮಾವಳಿ ಅನುಸರಿಸಿ ರಾಜ್ಯಸಭೆ ಮತ್ತು ಲೋಕಸಭೆ ಹಾಲ್​ಗಳಲ್ಲಿ ಸದಸ್ಯರಿಗೆ ಆಸನಗಳನ್ನು ಕಲ್ಪಿಸಲಾಗಿದೆ. ಈ ಬಗ್ಗೆ ಆಮೇಲೆ ಚರ್ಚೆಮಾಡೋಣ ಎಂದು ಸಭಾಪತಿ ವೆಂಕಯ್ಯನಾಯ್ಡು ಹೇಳಿದರು.

ರೈತರ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ಸಂಸದ ಕನಕಮೇದಲ ರವೀಂದ್ರ ಕುಮಾರ್ ಹೇಳಿದ್ದಾರೆ. ಕಳೆದ 415 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅಮರಾವತಿ ರೈತರ ಬೇಡಿಕೆಯನ್ನು ಆಂಧ್ರ ಪ್ರದೇಶ ಸರ್ಕಾರ ಪರಿಗಣಿಸಬೇಕು ಎಂದು ಸಲಹೆ ಮಾಡಿದರು.

ರಾಜ್ಯಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗಲಿದೆ ಎಂದಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಭಾಗದಲ್ಲಿ ಮುಕ್ತವಾಗಿ ಮಾರಾಟ ಮಾಡುವ ಅವಕಾಶವನ್ನು ಇದು ನೀಡುತ್ತದೆ. ಈ ಹಿಂದೆ ಕೃಷಿ ಕಾನೂನಿಗೆ ಬೆೆಂಬಲ ನೀಡುತ್ತೇವೆ ಎಂದು ಹೇಳಿದವರು ಈಗ ನಿಲುವು ಬದಲಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ 2019ರ ಪ್ರಣಾಳಿಕೆಯನ್ನು ಉಲ್ಲೇಖಿಸಿ ಮಾತನಾಡಿದರು.

ರೈತರೇ ದೇಶದ ಬೆನ್ನೆಲುಬು ಎಂದು ಕರ್ನಾಟಕದ ಸಂಸದ ದೇವೇಗೌಡ ಹೇಳಿದರು. ಗಣರಾಜ್ಯೋತ್ಸವದಂದು ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ದುಷ್ಕರ್ಮಿಗಳು ಮಾಡಿದ ಕೃತ್ಯವನ್ನು ಎಲ್ಲ ರಾಜಕೀಯ ಪಕ್ಷಗಳು ಖಂಡಿಸಿವೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಆದರೆ ರೈತರ ವಿಷಯವನ್ನು ವಿಷಯಾಂತರ ಮಾಡಬಾರದು ಎಂದಿದ್ದಾರೆ.

ಮೈಕ್ ಮ್ಯೂಟ್ ಮಾಡದೆಯೇ ನಮಗೆ ಮಾತನಾಡಲು ಅವಕಾಶ ನೀಡಿದ್ದಕ್ಕೆ ನಾವು ಧನ್ಯವಾದಗಳನ್ನು ಹೇಳಬೇಕು ಎಂದು ಮಾತು ಆರಂಭಿಸಿದ ಟಿಎಂಸಿ ನಾಯಕ ಡೆರಿಕ್ ಓ ಬ್ರೇನ್, ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ರೈತರೊಬ್ಬರು ಸಾವಿಗೀಡಾಗಿದ್ದಾರೆ. ಇದೇ ರೀತಿಯ ಘಟನೆ ಪಶ್ಚಿಮ ಬಂಗಾಳ ಅಥವಾ ಮಹಾರಾಷ್ಟ್ರದಲ್ಲಿ ನಡೆದಿದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು? ಗೃಹ ಸಚಿವರು ಮತ್ತು ಪ್ರಧಾನಿ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿದ್ದಾರೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಹೇಳಬೇಕು. ಮೋದಿ ಸರ್ಕಾರ ಎಲ್ಲ ರೀತಿಯಲ್ಲಿಯೂ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಕಿಶನ್ ರೆಡ್ಡಿ ಜಮ್ಮು ಮತ್ತು ಕಾಶ್ಮೀರ ಪುನರ್​ವಿಂಗಡಣೆ (ತಿದ್ದುಪಡಿ) ಮಸೂದೆ 2021 ಮಂಡಿಸಿದರು.

ದೀಪ್ ಸಿಧು ಬಿಜೆಪಿಯ ವ್ಯಕ್ತಿ ಬಿಜೆಪಿ ಕಾರ್ಯಕರ್ತರು ಕೆಂಪುಕೋಟೆಗೆ ನುಗ್ಗಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಜನವರಿ 26ರಂದು ರೈತರು ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದರು. ಆದರೆ ಕೆಂಪುಕೋಟೆಗೆ ನುಗ್ಗಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರು ಬಿಜೆಪಿಯವರು. ದೀಪ್ ಸಿಧು ಬಿಜೆಪಿಯ ವ್ಯಕ್ತಿ , ಅವರು ಮೋದಿಯನ್ನು ಭೇಟಿ ಮಾಡಿದ್ದರು. ಅವರು ರಾಜಕೀಯಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲರು. ಅಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ನಾವು ರೈತರಿಗೆ ಬೆಂಬಲ ನೀಡುತ್ತೇವೆ, ಅದನ್ನು ನಾವು ಮುಂದುವರಿಸುತ್ತೇವೆ. ನೀವು ಸ್ಟೇಡಿಯಂನ್ನು ಜೈಲಾಗಿ ಪರಿವರ್ತಿಸಲು ಹೇಳಿದಾಗ ನಾವು ಅದನ್ನು ನಿರಾಕರಿಸಿದೆವು. ನಾವೀಗ ಟಾಯ್ಲೆಟ್ ಮತ್ತು ನೀರನ್ನು ಒದಗಿಸುತ್ತಿದ್ದೇವೆ. ಅದನ್ನೂ ನಿಲ್ಲಿಸಲು ನೀವು ಹೇಳುತ್ತಿದ್ದೀರಿ ಎಂದು ಸಂಜಯ್ ಸಿಂಗ್ ಹೇಳಿದರು.

ನಾವು ಯಾವತ್ತೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಮತ್ತು ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳ ನಡುವೆ ತಾರತಮ್ಯ ಮಾಡುವುದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದರು.

ರೋಹಿತ್ ಶರ್ಮಾ ಟ್ವೀಟ್​ಗೆ ಆಕ್ಷೇಪಾರ್ಹ ಪ್ರತಿಕ್ರಿಯೆ; ಕಂಗನಾ ಟ್ವೀಟ್ ಡಿಲೀಟ್ ಮಾಡಿದ ಟ್ವಿಟರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada