ವಿಸ್ತಾರಾ ವಿಮಾನದಲ್ಲಿ ‘ಹೈಜಾಕಿಂಗ್’ ಬಗ್ಗೆ ಫೋನ್‌ನಲ್ಲಿ ಮಾತು; ಯುವಕನ ಬಂಧನ
ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಈ ಫೋನ್ ಸಂಭಾಷಣೆಯನ್ನು ಕೇಳಿದ ನಂತರ ಹರ್ಯಾಣ ಮೂಲದ ಆ ಪ್ರಯಾಣಿಕನನ್ನು ಕೆಳಗಿಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಯಿತು
ಮುಂಬೈ: ಮುಂಬೈ-ದೆಹಲಿ ನಡುವೆ ಪ್ರಯಾಣಿಸುತ್ತಿದ್ದ ವಿಸ್ತಾರಾ (Vistara)ವಿಮಾನದಲ್ಲಿ 23 ವರ್ಷದ ಪ್ರಯಾಣಿಕರೊಬ್ಬರು ವಿಮಾನ ಟೇಕ್ ಆಫ್ ಆಗುವುದಕ್ಕಿಂತ ಸ್ವಲ್ಪ ಹೊತ್ತು ಮೊದಲು ಹೈಜಾಕ್ ಮಾಡುವ ಯೋಜನೆ (hijacking plan) ಬಗ್ಗೆ ಫೋನ್‌ನಲ್ಲಿ ಮಾತನಾಡುವುದನ್ನು ಕೇಳಿದ ನಂತರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Chhatrapati Shivaji Maharaj International Airport) ಗುರುವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಈ ಫೋನ್ ಸಂಭಾಷಣೆಯನ್ನು ಕೇಳಿದ ನಂತರ ಹರ್ಯಾಣ ಮೂಲದ ಆ ಪ್ರಯಾಣಿಕನನ್ನು ಕೆಳಗಿಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಯಿತು. ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಿ, ಅಧಿಕಾರಿಗಳ ಅನುಮತಿಯ ನಂತರ ವಿಮಾನವು ಉಳಿದ ಪ್ರಯಾಣಿಕರೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿದೆ.
ಸಂಜೆ 7 ಗಂಟೆ ಸುಮಾರಿಗೆ ದೆಹಲಿಗೆ ವಿಮಾನ ಟೇಕ್ ಆಫ್ ಆಗುವ ಮುನ್ನ ಈ ಘಟನೆ ನಡೆದಿದೆ. ಎಲ್ಲಾ ಪ್ರಯಾಣಿಕರು ತಮ್ಮ ಸೀಟಿನಲ್ಲಿ ಕುಳಿತಿದ್ದರು. ಕ್ಯಾಬಿನ್ ಸಿಬ್ಬಂದಿ ತಮ್ಮ ಕೆಲಸದಲ್ಲಿ ತೊಡಗಿದ್ದರು. ಆಗ ಕ್ಯಾಬಿನ್ ಸಿಬ್ಬಂದಿ ಮತ್ತು ಇತರ ಸಹ ಪ್ರಯಾಣಿಕರು ವ್ಯಕ್ತಿಯೊಬ್ಬ ತಮ್ಮ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡಿದ್ದಾರೆ. ಫೋನ್‌ನಲ್ಲಿ ಮಾತನಾಡುತ್ತಿದ್ದ ಆ ವ್ಯಕ್ತಿ ‘ಅಹಮದಾಬಾದ್ ಕಾ ಫ್ಲೈಟ್ ಬೋರ್ಡ್ ಕರ್ನೆ ವಾಲಾ ಹೈಂ. ಕೋಯಿ ಭಿ ದಿಕ್ಕತ್ ಹೋ ತೋ ಮುಝೆ ಕಾಲ್ ಕರ್ನಾ. (ಅಹಮದಾಬಾದ್‌ಗೆ ವಿಮಾನ ಹತ್ತುತ್ತೇನೆ. ನಿಮಗೆ ಯಾವುದೇ ತೊಂದರೆ ಎದುರಾದರೆ ನನಗೆ ಕರೆ ಮಾಡಿ). ಹೈಜಾಕ್ ಕಾ ಸಾರಾ ಪ್ಲಾನಿಂಗ್ ಹೇ. ಉಸ್ಕಾ ಸಾರಾ ಆಕ್ಸೆಸ್ ಹೈ, ಚಿಂತಾ ಮತ್ ಕರ್ನಾ.’ (ಹೈಜಾಕ್ ಮಾಡಲು ಎಲ್ಲಾ ಯೋಜನೆಗಳನ್ನು ಮಾಡಲಾಗಿದೆ. ಚಿಂತೆ ಮಾಡಬೇಡಿ)’ ಎಂದು ಹೇಳುತ್ತಿರುವುದು ಕೇಳಿದೆ.
ಈ ಸಂಭಾಷಣೆಯನ್ನು ಕೇಳಿದ ನಂತರ, ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಹೆದರಿದ್ದು, ಅವರಲ್ಲಿ ಹಲವರು ಎದ್ದು ನಿಂತರು. ಕ್ಯಾಬಿನ್ ಸಿಬ್ಬಂದಿ ವಿಮಾನದ ಭದ್ರತಾ ಸಿಬ್ಬಂದಿಯನ್ನು ಕರೆಸಿ ಫೋನ್‌ನಲ್ಲಿ ಮಾತನಾಡುತ್ತಿದ್ದ ಪ್ರಯಾಣಿಕರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಗೆ ಹಸ್ತಾಂತರಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿ ಕೇಂದ್ರ ಸರ್ಕಾರದ ಸಹಕಾರ ಕೋರಿದ ತೆಲಂಗಾಣ ಸಚಿವ ಕೆಟಿಆರ್
ರಿತೇಶ್ ಜುನೇಜಾ ಎಂದು ಗುರುತಿಸಲಾದ ಪ್ರಯಾಣಿಕರನ್ನು ಸಹರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಕ್ಯಾಬಿನ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಅದೇ ವೇಳೆ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, 2021ರಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಮಾನವ ಜೀವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯ) ಮತ್ತು 505 (2) (ಜನರಲ್ಲಿ ಭಯ ಅಥವಾ ಆತಂಕವನ್ನು ಉಂಟುಮಾಡುವ ಉದ್ದೇಶದಿಂದ ಹೇಳಿಕೆ ನೀಡುವುದು) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಯಾಣಿಕರ ವಿರುದ್ಧ ಐಪಿಸಿ) ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ