ಪಿಸಿಎಸ್ ಅಧಿಕಾರಿ ಎಂದು ಹೇಳಿಕೊಂಡು ಎಎಪಿ ನಾಯಕನಿಗೆ ವಂಚನೆ, ಮದುವೆಯಾದ ಬಳಿಕ ಆಭರಣಗಳೊಂದಿಗೆ ಮಹಿಳೆ ಪರಾರಿ

ಪಂಜಾಬ್‌ನಲ್ಲಿ ಮಹಿಳೆಯೊಬ್ಬರು ತಮ್ಮನ್ನು ಪಿಸಿಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಎಪಿ ನಾಯಕರೊಬ್ಬರನ್ನು ಮದುವೆಯಾಗಿದ್ದಾರೆ. ಮದುವೆಯ ನಂತರ ಆಭರಣಗಳು ಮತ್ತು ನಗದಿನೊಂದಿಗೆ ಪರಾರಿಯಾಗಿದ್ದಾರೆ. ಮನ್‌ವಿಂದರ್ ಕೌರ್ ಎಂಬುವವರು ನಕಲಿ ಪಿಸಿಎಸ್ ಅಧಿಕಾರಿ ಎಂದು ಹೇಳಿಕೊಂಡು ಅಮರಿಂದರ್ ಸಿಂಗ್ ಮಂಡೋಫಲ್ ಎಂಬುವರಿಗೆ ವಂಚನೆ ಮಾಡಿದ್ದಾರೆ. ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

ಪಿಸಿಎಸ್ ಅಧಿಕಾರಿ ಎಂದು ಹೇಳಿಕೊಂಡು ಎಎಪಿ ನಾಯಕನಿಗೆ ವಂಚನೆ, ಮದುವೆಯಾದ ಬಳಿಕ ಆಭರಣಗಳೊಂದಿಗೆ ಮಹಿಳೆ ಪರಾರಿ
ಮದುವೆ
Image Credit source: NDTV

Updated on: Oct 07, 2026 | 7:28 AM

ಫತೇಘರ್ ಸಾಹಿಬ್, ಅಕ್ಟೋಬರ್ 07: ಪಂಜಾಬ್​ನಲ್ಲಿ ಮಹಿಳೆಯೊಬ್ಬರು ತಮ್ಮನ್ನು ಪಿಸಿಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಎಪಿ ನಾಯಕರೊಬ್ಬರನ್ನು ಮದುವೆಯಾಗಿ ಬಳಿಕ ಆಭರಣಗಳ ಜತೆ ಪರಾರಿಯಾಗಿರುವ ಘಟನೆ ನಡೆದಿದೆ. ಎಎಪಿ ನಾಯಕ ಅಮರಿಂದರ್ ಸಿಂಗ್ ಮಂಡೋಫಲ್ ಎಂಬುವವರ ಬಳಿ ಇದ್ದ ಒಡವೆಗಳನ್ನು ಕದ್ದು ಮಹಿಳೆ ಓಡಿ ಹೋಗಿದ್ದಾಳೆಂದು ಪೊಲೀಸರಿಗೆ ದೂರು ನೀಡಲಾಗಿದೆ.

ಮಂಡೋಫಲ್ ಅವರ ಆರೋಪದ ಪ್ರಕಾರ, ಮನ್‌ವಿಂದರ್ ಕೌರ್ ಮತ್ತು ಆಕೆಯ ಕುಟುಂಬದವರು ಆಕೆಯನ್ನು ಅವಿವಾಹಿತ ಪಿಸಿಎಸ್ ಅಧಿಕಾರಿಯೆಂದು ಪರಿಚಯಿಸಿದ್ದರು. ಆಕೆಯ ವಯಸ್ಸಿನ ಬಗ್ಗೆಯೂ ತಪ್ಪು ಮಾಹಿತಿ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಮಹಿಳೆ ಜಲಂಧರ್‌ನಲ್ಲಿ ಪಿಸಿಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ, ಬಳಿಕ ಮೊಹಾಲಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ (ADC) ಹುದ್ದೆಯ ಜವಾಬ್ದಾರಿ ಪಡೆದಿದ್ದಾರೆ ಎಂದು ಹೇಳಿಕೊಂಡಿದ್ದರೆಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಫೆಬ್ರವರಿಯಲ್ಲಿ ನಡೆದಿತ್ತು ಮದುವೆ

ಅಮರಿಂದರ್ ಸಿಂಗ್ ಮತ್ತು ಮನ್‌ವಿಂದರ್ ಕೌರ್ ಅವರ ಮದುವೆ ಫೆಬ್ರವರಿ 10, 2026ರಂದು ನಡೆದಿತ್ತು. ಪಂಜಾಬ್ ವಿಧಾನಸಭಾ ಸ್ಪೀಕರ್ ಸೇರಿದಂತೆ ಹಲವು ಎಎಪಿ ನಾಯಕರು ಮತ್ತು ಜನಪ್ರತಿನಿಧಿಗಳು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಂಡೋಫಲ್ ಅವರು ಸಿರ್ಹಿಂದ್ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪರಿಷತ್ ಸದಸ್ಯರೂ ಆಗಿದ್ದಾರೆ.

ಮತ್ತಷ್ಟು ಓದಿ:

ಬೆಚ್ಚಿಬಿದ್ದ ಬಳ್ಳಾರಿ: ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತನ ಬರ್ಬರ ಕೊಲೆ

 

ಮದುವೆಯ ಬಳಿಕ ಏನಾಯ್ತು?

ಮದುವೆಯ ನಂತರ ಮನ್‌ವಿಂದರ್ ಕೌರ್ ಮನೆಯಿಂದ ಹೊರಟುಹೋಗುವಾಗ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮಂಡೋಫಲ್ ಆರೋಪಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಸುಮಾರು 14 ತೊಲೆ ಚಿನ್ನ ಮತ್ತು 1 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಂತರ ಮಂಡೋಫಲ್ ಅವರು ಮಹಿಳೆಯ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಆಕೆ ಈ ಹಿಂದೆ ಮದುವೆಯಾಗಿದ್ದು ವಿಚ್ಛೇದನ ಪಡೆದಿರುವುದು ತಿಳಿದುಬಂದಿದೆ ಎಂದು ಆರೋಪಿಸಿದ್ದಾರೆ. ಆಕೆಗೆ 18 ವರ್ಷದ ಮಗನಿದ್ದಾನೆ ಎಂಬುದನ್ನೂ ಅವರು ಹೇಳಿದ್ದಾರೆ.

ಆರು ಮಂದಿ ವಿರುದ್ಧ ಪ್ರಕರಣ

ಮಂಡೋಫಲ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಮನ್‌ವಿಂದರ್ ಕೌರ್ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಕೆಯ ಸಹೋದರ, ತಾಯಿ, ಸೋದರಸಂಬಂಧಿ, ಅತ್ತಿಗೆ ಮತ್ತು ಮಾಜಿ ಗ್ರಾಮ ಸರಪಂಚ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಎಲ್ಲರೂ ತರಣ್ ತರಣ್ ಜಿಲ್ಲೆಯ ಭಿಖಿವಿಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ ಸಿಂಗ್ ಗ್ರಾಮದವರು, ಸದ್ಯ ಪೊಲೀಸರು ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯ ವಿರುದ್ಧದ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪಗಳು ಸಾಬೀತಾಗಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us