ಅಕ್ರಮ ಬಳಕೆಯ ಸಾಕ್ಷ್ಯ ಸಿಕ್ಕರೆ ತನಿಖೆ ನಡೆಸುತ್ತೇವೆ: ಪೆಗಾಸಸ್ ರೂಪಿಸಿದ ಎನ್ಎಸ್ಒ ಭರವಸೆ
ಪೆಗಾಸಸ್ ಬೇಹುಗಾರಿಕಾ ತಂತ್ರಾಂಶ ರೂಪಿಸಿದ ಮಾತೃಸಂಸ್ಥೆ ಎನ್ಎಸ್ಒ ತಾನು ರೂಪಿಸಿದ ತಂತ್ರಜ್ಞಾನದ ಅಕ್ರಮ ಬಳಕೆಯ ಸಾಕ್ಷ್ಯ ಸಿಕ್ಕರೆ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.
ದೆಹಲಿ: ಇದೀಗ ಬಹುಚರ್ಚೆಯಲ್ಲಿರುವ ಪೆಗಾಸಸ್ ಬೇಹುಗಾರಿಕಾ ತಂತ್ರಾಂಶ ರೂಪಿಸಿದ ಮಾತೃಸಂಸ್ಥೆ ಎನ್ಎಸ್ಒ ತಾನು ರೂಪಿಸಿದ ತಂತ್ರಜ್ಞಾನದ ಅಕ್ರಮ ಬಳಕೆಯ ಸಾಕ್ಷ್ಯ ಸಿಕ್ಕರೆ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ. ರಾಜಕಾರಿಣಿಗಳು, ನ್ಯಾಯಾಧೀಶರು, ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು ಮತ್ತು ಪತ್ರಕರ್ತರ ವಿರುದ್ಧದ ಬೇಹುಗಾರಿಕೆಗೆ ಭಾರತದಲ್ಲಿ ಪೆಗಾಸಸ್ ಬಳಕೆಯಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು.
ಮಾಧ್ಯಮ ಸಂಸ್ಥೆಗಳು ಈ ಸಂಬಂಧ ಕೇಳಿದ್ದ ಪ್ರಶ್ನೆಗಳಿಗೆ ಪೆಗಾಸಸ್ ಈವರೆಗೂ ಪ್ರತಿಕ್ರಿಯಿಸಿರಲಿಲ್ಲ. ವಿಶ್ವದ ವಿವಿಧ ದೇಶಗಳ 17 ಸಂಸ್ಥೆಗಳು ಕಳೆದ ಭಾನುವಾರದಿಂದೀಚೆಗೆ ಪೆಗಾಸಸ್ ಬಳಕೆ ಕುರಿತು ಮಾಹಿತಿಗಳನ್ನು ಬಹಿರಂಗಪಡಿಸಿದ್ದವು. ‘ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಈ ಆರೋಪಗಳಿಗೆ ಯಾವುದೇ ಆಧಾರವಿಲ್ಲ’ ಎಂದು ಪೆಗಾಸಸ್ ಈ ಹಿಂದೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು.
‘ನಂಬಲರ್ಹ ದಾಖಲೆ ಒದಗಿಸಿದ ಎನ್ಎಸ್ಒ ಸಂಪೂರ್ಣ ತನಿಖೆ ನಡೆಸಲಿದೆ. ಅಗತ್ಯವಿರುವೆಡೆ ಬೇಹುಗಾರಿಕೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಎನ್ಎಸ್ಒ ವಕ್ತಾರರು ಹೇಳಿದ್ದಾರೆ. ಮಾಧ್ಯಮಗಳಲ್ಲಿ ಬಹಿರಂಗಗೊಂಡಿದ್ದ ನಿಗಾವಣೆಯಲ್ಲಿದ್ದಾರೆ ಎನ್ನಲಾದವರ ಪಟ್ಟಿಯನ್ನು ಕಳೆದ ಭಾನುವಾರದಿಂದಲೂ ಎನ್ಎಸ್ಒ ನಿರಾಕರಿಸುತ್ತಲೇ ಇತ್ತು.
ಅಮ್ನೆಸ್ಟಿ ಇಂಟರ್ನ್ಯಾಷನಲ್ ಮತ್ತು ಪ್ಯಾರಿಸ್ ಮೂಲದ ಲಾಭದ ಉದ್ದೇಶವಿಲ್ಲದ ಸಂಸ್ಥೆಯೊಂದು ನೀಡಿದ ಮಾಹಿತಿ ಆಧರಿಸಿ ಆದರೆ ಹಲವು ಮಾಧ್ಯಮ ಸಂಸ್ಥೆಗಳು ಸ್ವತಂತ್ರ ತನಿಖೆ ನಡೆಸಿದ್ದವು. ಈ ವೇಳೆ ಪೆಗಾಸಸ್ ತಂತ್ರಾಂಶ ಬಳಕೆಯಾದ ಸಾಕ್ಷ್ಯಗಳು ಲಭ್ಯವಾಗಿದ್ದವು.
ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳ ತಡೆಗೆಂದು ಸಾರ್ವಭೌಮ ಸರ್ಕಾರಗಳಿಗೆ ಮಾತ್ರ ತನ್ನ ತಂತ್ರಾಂಶವನ್ನು ಒದಗಿಸಲಾಗುವುದು ಎಂದು ಎನ್ಎಸ್ಒ ಹೇಳಿಕೊಂಡಿತ್ತು. ಪೆಗಾಸಸ್ ಮೂಲಕ ಬೇಹುಗಾರಿಕೆಗೆ ಒಳಪಟ್ಟವರ ಪಟ್ಟಿಯಲ್ಲಿರುವ ಹೆಸರುಗಳನ್ನು ಎನ್ಎಸ್ಒ ಬುಧವಾರವೂ ನಿರಾಕರಿಸಿತ್ತು. ಕಂಪನಿಯ ವಿರುದ್ಧ ಇನ್ನು ಮುಂದೆ ತಪ್ಪು ಪ್ರಚಾರ ನಡೆಸುವುದನ್ನು ಸಹಿಸಲು ಅಗುವುದಿಲ್ಲ ಎಂದು ಕಂಪನಿ ಹೇಳಿದೆ.
ಪೆಗಾಸಸ್ ತಂತ್ರಾಂಶ ಜಗತ್ತಿನ ಹಲವು ದೇಶಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ನಂತರ ಎಚ್ಚೆತ್ತುಕೊಂಡಿರುವ ಇಸ್ರೇಲ್ ಸರ್ಕಾರವು ವಿವಿಧ ಇಲಾಖೆಗಳ ಸಚಿವರ ತಂಡವನ್ನು ರಚಿಸಿ ತನಿಖೆ ನಡೆಸಲು ಮುಂದಾಗಿದೆ. ಫ್ರಾನ್ಸ್, ಮೆಕ್ಸಿಕೊ, ಭಾರತ, ಮೊರೆಕ್ಕೊ ಮತ್ತು ಇರಾಕ್ ದೇಶಗಳಲ್ಲಿ ಪೆಗಾಸಸ್ ಬಳಕೆಯಾಗಿರುವ ವರದಿಗಳು ಬಹಿರಂಗಗೊಂಡ ನಂತರ ಇಸ್ರೇಲ್ಗೆ ರಾಜತಾಂತ್ರಿಕ ವಲಯಗಳಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಬೇಹುಗಾರಿಕೆಗೆ ಒಳಪಟ್ಟವರ ಪಟ್ಟಿಯಲ್ಲಿ 10 ಪ್ರಧಾನಿಗಳು, ಮೂವರು ಅಧ್ಯಕ್ಷರು ಮತ್ತು ಓರ್ವ ರಾಜ ಸೇರಿದ್ದಾರೆ.
ಭಾರತದಲ್ಲಿ ಸುಪ್ರೀಂಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯದ ಅರೋಪ ಮಾಡಿದ್ದ ಮಹಿಳೆ ಮತ್ತು 40 ಪತ್ರಕರ್ತರು, ರಾಜಕೀಯ ನಾಯಕರಾದ ರಾಹುಲ್ ಗಾಂಧಿ, ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿ ಹಲವರ ಮೇಲೆ ಪೆಗಾಸಸ್ ಮೂಲಕ ನಿಗಾ ಇರಿಸಲಾಗಿತ್ತು ಎಂದು ದಿ ವೈರ್ ಜಾಲತಾಣ ವರದಿ ಮಾಡಿತ್ತು.
(Pegasus maker nso says it will probe any credible proof of misuse)
ಇದನ್ನೂ ಓದಿ: Explainer: ಏನಿದು ಪೆಗಾಸಸ್ ಗೂಢಚರ್ಯೆ ತಂತ್ರಾಂಶ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
Published On - 11:35 pm, Wed, 21 July 21