Aadhaar- PAN Card Linking: ಆಧಾರ್ ಮತ್ತು ಪ್ಯಾನ್ ಕಾರ್ಡ್ ಮಾರ್ಚ್ 31ರೊಳಗೆ ಜೋಡಣೆ ಆಗದಿದ್ದಲ್ಲಿ 1000 ರೂಪಾಯಿ ಶುಲ್ಕ

|

Updated on: Mar 24, 2021 | 12:03 PM

ಆಧಾರ್- ಪ್ಯಾನ್ ಕಾರ್ಡ್ ಜೋಡಣೆ ಮಾರ್ಚ್ 31, 2021ರೊಳಗೆ ಆಗದಿದ್ದಲ್ಲಿ 1000 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಂಗಳವಾರದಂದು ಲೋಕಸಭೆಯಲ್ಲಿ ಅನುಮೋದನೆ ಪಡೆದ ಮಸೂದೆ ಏನನ್ನು ಹೇಳುತ್ತದೆ ಎಂಬುದನ್ನು ತಿಳಿಯಿರಿ.

Aadhaar- PAN Card Linking: ಆಧಾರ್ ಮತ್ತು ಪ್ಯಾನ್ ಕಾರ್ಡ್  ಮಾರ್ಚ್ 31ರೊಳಗೆ ಜೋಡಣೆ ಆಗದಿದ್ದಲ್ಲಿ 1000 ರೂಪಾಯಿ ಶುಲ್ಕ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಆಧಾರ್ ಮತ್ತು ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಜೋಡಣೆ ಮಾಡುವುದಕ್ಕೆ ಮಾರ್ಚ್ 31 ಕೊನೆ ದಿನವಾಗಿದೆ. ಒಂದು ವೇಳೆ ಇದನ್ನು ಮಾಡದಿದ್ದಲ್ಲಿ ಪ್ಯಾನ್ ಅಮಾನ್ಯವಾಗುತ್ತದೆ. ಮಂಗಳವಾರದಂದು ಲೋಕಸಭೆಯಲ್ಲಿ ಅನುಮೋದನೆ ಪಡೆದ ಹಣಕಾಸು ಮಸೂದೆ, 2021ರಲ್ಲಿ ಸರ್ಕಾರವು ತಿದ್ದುಪಡಿಯನ್ನು ಪರಿಚಯಿಸಿದೆ. ಅದರ ಪ್ರಕಾರ, ಯಾವ ವ್ಯಕ್ತಿಯು ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡುವುದಿಲ್ಲವೋ ಅಂಥವರು 1,000 ರೂಪಾಯಿ ತನಕ ವಿಳಂಬ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

“ಆಧಾರ್ ಸಂಖ್ಯೆಯನ್ನು ತಿಳಿಸಲು ವಿಫಲರಾಗುವವರಿಗೆ ಶುಲ್ಕ ವಿಧಿಸುವುದಕ್ಕೆ ಹಣಕಾಸು ಮಸೂದೆಯು (ಲೋಕಸಭೆ) ಹೊಸ ಸೆಕ್ಷನ್ 234H ಸೇರ್ಪಡೆ ಮಾಡಿದೆ. ಯಾವುದಾದರೂ ವ್ಯಕ್ತಿ 139AA(2) ಸೆಕ್ಷನ್ ಅಡಿಯಲ್ಲಿ ಆಧಾರ್ ನಂಬರ್ ತಿಳಿಸಬೇಕು ಮತ್ತು ಅಂಥ ವ್ಯಕ್ತಿಗಳು ಹಾಗೆ ಮಾಡುವಲ್ಲಿ ವಿಫಲರಾದಲ್ಲಿ ಶುಲ್ಕವನ್ನು ಪಾವತಿಸಬೇಕಾಗಬಹುದು, ಈಗ ತಿಳಿಸಿರುವಂತೆ, ಆಧಾರ್ ಬಗ್ಗೆ ಮಾಹಿತಿ ನೀಡುವಾಗ ರೂ. 1000 ಮೀರಬಾರದು,” ಎಂದು ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ತಿಳಿಸಿರುವುದಾಗಿ ಮಿಂಟ್ ವರದಿ ಮಾಡಿದೆ.

1000 ರೂಪಾಯಿ ಶುಲ್ಕ ಪಾವತಿಸಬೇಕು
“ಆ ಕಾರಣಕ್ಕೆ ಯಾವುದೇ ವ್ಯಕ್ತಿಯು ಮಾರ್ಚ್ 31ರೊಳಗೆ ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡಲು ವಿಫಲರಾದರೆ ಅಂಥವರು 1000 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ಆಧಾರ್ ಜೋಡಣೆ ಆಗದೆ ಪ್ಯಾನ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದಲ್ಲಿ ಶುಲ್ಕದ ಜತೆಗೆ ಇತರ ಪರಿಣಾಮಗಳನ್ನು ಸಹ ಎದುರಿಸಬೇಕಾಗುತ್ತದೆ,” ಎಂದು ಹೇಳಲಾಗಿದೆ.

ಆಧಾರ್- ಪ್ಯಾನ್ ಜೋಡಣೆಗೆ ಈ ಹಿಂದೆ ಸರ್ಕಾರದಿಂದ ಹಲವು ಬಾರಿ ಕಾಲಾವಧಿ ವಿಸ್ತರಣೆ ಮಾಡಲಾಗಿದೆ. ಆದರೆ ಈಗ ಗಡುವಿನೊಳಗೆ ಯಾರು ಆಧಾರ್- ಪ್ಯಾನ್ ಜೋಡಣೆ ಮಾಡುವುದಿಲ್ಲವೋ ಅಂಥವರಿಗೆ ದಂಡ ವಿಧಿಸುವುದಕ್ಕೆ ಬಯಸಿದೆ ಎನ್ನುತ್ತಾರೆ ಆದಾಯ ತೆರಿಗೆ ಸಲಹೆಗಾರರು. ಸೆಕ್ಷನ್ 139AA ಪ್ರಕಾರ, ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ಎಲ್ಲರೂ ತಮ್ಮ ಆಧಾರ್ ಸಂಖ್ಯೆಯನ್ನು ಹಾಕಬೇಕು. ಜತೆಗೆ ಪ್ಯಾನ್ ವಿತರಣೆಗೂ ಇದು ಅಗತ್ಯ.

ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಿಸಲ್ಲ
ಇದನ್ನು ಹೊರತುಪಡಿಸಿ, ಜುಲೈ 1, 2017ರ ತನಕ ಯಾರಿಗೆಲ್ಲ ಪ್ಯಾನ್ ವಿತರಣೆ ಆಗಿದೆಯೋ ಮತ್ತು ಆಧಾರ್ ಸಂಖ್ಯೆ ಪಡೆಯಲು ಯಾರೆಲ್ಲ ಅರ್ಹರಿರುತ್ತಾರೋ ಅಂಥವರು ತಮ್ಮ ಪ್ಯಾನ್ ಅನ್ನು ಆಧಾರ್ ಜತೆ ಜೋಡಣೆ ಮಾಡಬೇಕು. ಒಂದು ವೇಳೆ ಅಂಥ ವ್ಯಕ್ತಿಗಳು ಜೋಡಣೆ ಮಾಡದಿದ್ದಲ್ಲಿ ಮಾರ್ಚ್ 31, 2021ರ ನಂತರ ಅವರ ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಿಸಲ್ಲ.

ಇದನ್ನೂ ಓದಿ: How to link Aadhaar to PAN card: ಆಧಾರ್ ಜತೆಗೆ ಪ್ಯಾನ್ ಕಾರ್ಡ್ ಜೋಡಣೆ ಹೇಗೆ?

Published On - 12:02 pm, Wed, 24 March 21