ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India – PFI) ಮತ್ತು ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದು ಪಿಎಫ್ಐನ ಅಂಗಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (Campus Front of India – CFI) ಘೋಷಿಸಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಭಾರತದಲ್ಲಿ ತಕ್ಷಣದಿಂದ ಸಂಘಟನೆಯ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುತ್ತೇವೆ ಎಂದು ಸಿಎಫ್ಐ ಹೇಳಿದೆ.
ಹತ್ತಾರು ವರ್ಷಗಳಿಂದ ನಾವು ವಿದ್ಯಾರ್ಥಿಗಳ ಜೊತೆಗೆ ಕೆಲಸ ಮಾಡುತ್ತಿದ್ದೆವು. ಪ್ರಜಾಸತ್ತಾತ್ಮಕ ಆಶಯ ಎತ್ತಿಹಿಡಿಯುವ, ಸಾಮಾಜಿಕ ಬದ್ಧತೆ, ಕಾಳಜಿ ಇರುವ ಯುವಜನರನ್ನು ರೂಪಿಸಲು ಯತ್ನಿಸುತ್ತಿದ್ದೆವು. ಪಿಎಫ್ಐ ಮತ್ತು ಸಿಎಫ್ಐ ವಿರುದ್ಧ ಕೇಂದ್ರ ಸರ್ಕಾರವು ಮಾಡಿರುವ ಎಲ್ಲ ಆರೋಪಗಳನ್ನು ನಿರಾಕರಿಸುತ್ತೇವೆ. ನೆಲದ ಕಾನೂನಿನ ವಿರುದ್ಧ ಯಾವುದೇ ಕೆಲಸ ನಾವು ಮಾಡಿಲ್ಲ ಎಂದು ಸಿಎಫ್ಐ ತಿಳಿಸಿದೆ. ಸಂಘಟನೆಯ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಬೇಡಿ. ಅಕಸ್ಮಾತ್ ಬೇರೆ ಯಾರಾದರೂ ಸಂಘಟನೆಯ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದರೆ ಅಂಥವರಿಂದ ನೀವು ದೂರ ಇರಿ ಎಂದು ಸಿಎಫ್ಐ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದೆ.
ಈ ನಡುವೆ ಕೇರಳದ ಪಿಎಫ್ಐ ಘಟಕವನ್ನು ವಿಸರ್ಸಿಸಲಾಗಿದೆ. ಪಿಎಫ್ಐ ಹೆಸರಿನಲ್ಲಿ ನಡೆಯುತ್ತಿದ್ದ ಎಲ್ಲ ರಾಜಕೀಯ ಮತ್ತು ಸಂಘಟನಾತ್ಮಕ ಚಟುವಟಿಕೆ ನಿಲ್ಲಿಸುವಂತೆ ಪಿಎಫ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ಸತ್ತಾರ್ ಕರೆ ನೀಡಿದ್ದಾರೆ ಎನ್ನುವ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಪಿಎಫ್ಐನ ಯಾವುದೇ ಪದಾಧಿಕಾರಿ ಈ ಪತ್ರವನ್ನು ನಿರಾಕರಿಸಿಲ್ಲ. ಪಿಎಫ್ಐ ವಿಸರ್ಜನೆಯಾಗಿದೆ ಎಂದು ಪ್ರಶ್ನಾರ್ಥಕ ಚಿಹ್ನೆಯ ಶೀರ್ಷಿಕೆಯೊಂದಿಗೆ ‘ದಿ ಹಿಂದೂ’ ಜಾಲತಾಣವು ವರದಿ ಮಾಡಿದೆ.
Ban on Campus Front is Undemocratic and Anti-Constitutional; will be challenged in court. Stopped Activities in Accordance with Law 6/1 pic.twitter.com/ZB2lyZX1sX
— Campus Front of India (@CampusFrontInd) September 28, 2022
ಪಿಎಫ್ಐ ನಿಷೇಧ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ನಿಷೇಧಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣ ಪ್ರಸ್ತಾಪವಾಗಿದೆ. ಪಿಎಫ್ಐ ನಿಷೇಧಕ್ಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಅಧಿಸೂಚನೆಯಲ್ಲಿ ನೀಡಿರುವ ವಿವರಣೆಯಲ್ಲಿ ಕರ್ನಾಟಕ ಸರ್ಕಾರದ ಶಿಫಾರಸನ್ನೂ ಉಲ್ಲೇಖಿಸಿದೆ.