Kerala: ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ; ಪಿಎಫ್‌ಐ ಸ್ಥಳೀಯ ಪದಾಧಿಕಾರಿ ಬಂಧನ

ಕೇರಳದಲ್ಲಿ ಹಾಡುಹಗಲೇ ನಡೆದಿದ್ದ ಆರ್​ಎಸ್​ಎಸ್​ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಿಎಫ್​ಐ ಸಂಘಟನೆಯ ಸ್ಥಳೀಯ ಪದಾಧಿಕಾರಿಯನ್ನು ಬಂಧಿಸಲಾಗಿದೆ.

Kerala: ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ; ಪಿಎಫ್‌ಐ ಸ್ಥಳೀಯ ಪದಾಧಿಕಾರಿ ಬಂಧನ
ಪ್ರಾತಿನಿಧಿಕ ಚಿತ್ರ

ಪಾಲಕ್ಕಾಡ್: ಪಾಲಕ್ಕಾಡ್‌ನ ಕಿನಾಸ್ಸೆರಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಸಂಜಿತ್ (27) ಹತ್ಯೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸ್ಥಳೀಯ ಪದಾಧಿಕಾರಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿಶ್ವನಾಥ್ ಮಾತನಾಡಿ, ‘‘ಬಂಧಿತ ಪಿಎಫ್‌ಐ ಸ್ಥಳೀಯ ಮುಖಂಡ ನೇರವಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಇನ್ನೂ ಇಬ್ಬರು ಯುವಕರು ಪೊಲೀಸರ ವಶದಲ್ಲಿದ್ದಾರೆ’’ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಟ್ಟಾಯಂನ ಮುಂಡಕ್ಕಯಂ ಮೂಲದ ಒಬ್ಬ ಮತ್ತು ಪಾಲಕ್ಕಾಡ್‌ನ ನೆಮ್ಮಾರದ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸರು ಮೊದಲು ಮುಂಡಕ್ಕಯಂನ ಸುಬೈರ್‌ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ವಿಚಾರಣೆ ನಡೆಸಿದ ನಂತರ ಮುಂಡಕ್ಕಯಂನಲ್ಲಿರುವ ಅವನ ಕೋಣೆಯಲ್ಲಿ ತಂಗಿದ್ದ ಸಲೀಂ ಮತ್ತು ಇಸಾಹಕ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರಲ್ಲಿ ಓರ್ವನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಈ ಪ್ರಕರಣದಲ್ಲಿ ಇನ್ನೂ ಕೆಲವು ಶಂಕಿತ ವ್ಯಕ್ತಿಗಳನ್ನು ವಿಚಾರಣೆಗೆ ಕರೆದಿರುವ ಪೊಲೀಸರು ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯ ಸುಳಿವು ನೀಡಿದ್ದಾರೆ. ಮುಂಡಕ್ಕಯಂನಲ್ಲಿರುವ ಬೇಕರಿಯೊಂದರಲ್ಲಿ ಯುವಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ಇಬ್ಬರು ನವೆಂಬರ್ 15 ರ ನಂತರ ನೆಮ್ಮಾರವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಆರ್​ಎಸ್​ಎಸ್​​ ಕಾರ್ಯಕರ್ತ ಸಂಜಿತ್ ಅವರನ್ನು ಹಾಡುಹಗಲಿನಲ್ಲಿ ಅವರ ಹೆಂಡತಿಯ ಎದುರೇ ಹತ್ಯೆ ಮಾಡಲಾಗಿತ್ತು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಹತ್ಯೆಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. ‘‘ಕಳೆದ ಐದು ವರ್ಷಗಳಲ್ಲಿ ‘ಜಿಹಾದಿ’ ಗುಂಪುಗಳಿಂದ ಕೇರಳದಲ್ಲಿ 10 ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ರಾಜ್ಯದಲ್ಲಿ ಇದುವರೆಗೆ ಸುಮಾರು 50 ಸಂಘಪರಿವಾರದ ಕಾರ್ಯಕರ್ತರು ಹತ್ಯೆಯಾಗಿದ್ದಾರೆ’’ ಎಂದು ಕೆ.ಸುರೇಂದ್ರನ್ ಗೃಹ ಸಚಿವ ಅಮಿತ್ ಶಾಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ:

ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!

ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಸೈಟ್‌ನ ಭೂ ಬಳಕೆಯಲ್ಲಿ ಬದಲಾವಣೆ ಪ್ರಶ್ನಿಸಿದ ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್

Click on your DTH Provider to Add TV9 Kannada