ದೆಹಲಿ: ಭಾರತದಲ್ಲಿ ಹರಡಿರುವ ಕೊರೊನಾ ವೈರಸ್ನ ರೂಪಾಂತರಿಯ ವಿರುದ್ಧ ನಮ್ಮ ಲಸಿಕೆ ಪರಿಣಾಮಕಾರಿಯಾಗಿದೆ. ಭಾರತೀಯರು ಹಾಗೂ ಭಾರತೀಯ ಮೂಲದ ಜನರ ಮೇಲೆ ನಾವು ತಯಾರಿಸಿರುವ ಕೋವಿಡ್-19 ವ್ಯಾಕ್ಸಿನ್ ಉಪಯುಕ್ತ ಎಂದು ಹೇಳಿರುವ ಅಮೆರಿಕದ ಬೃಹತ್ ಫಾರ್ಮಾಸ್ಯೂಟಿಕಲ್ ಕಂಪನಿ ಫೈಜರ್, ಭಾರತದಲ್ಲಿ ಅದರ ಫಾಸ್ಟ್-ಟ್ರ್ಯಾಕ್ ಅನುಮೋದನೆಯನ್ನು ಕೋರಿದೆ. ಈ ಲಸಿಕೆ 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಯದವರಿಗೂ ಸೂಕ್ತವಾಗಿದೆ ಮತ್ತು ಅದನ್ನು 2-8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಒಂದು ತಿಂಗಳವರೆಗೆ ಸ್ಟೋರ್ ಮಾಡಬಹುದು ಎಂದು ಬುಧವಾರ ಹೇಳಿದೆ.
‘ಇತ್ತೀಚಿನ ಡಾಟಾದ ಪ್ರಕಾರ ಬಿಎನ್ಟಿ612ಬಿ2 (ಇದು ಪೈಜರ್ ಸಂಸ್ಥೆ ಉತ್ಪಾದಿಸಿರುವ ಲಸಿಕೆಯ ತಾಂತ್ರಿಕ ಹೆಸರಾಗಿದೆ) ಲಸಿಕೆಯ 2 ಡೋಸ್ಗಳು SARS-CoV-2 ರೂಪಾಂತರಿಗಳು ಮತ್ತು ಭಾರತೀಯ ಮೂಲದ ಜನರಲ್ಲಿ ಭಾರೀ ಪರಿಣಾಮಕಾರಿಯಾಗಿರುವುದು ದೃಡಪಟ್ಟಿದೆ,’ ಎಂದು ಫೈಜರ್ ಹೇಳಿದೆ.
ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ (ಪಿಃಎಚ್ಇ) ನಡೆಸಿದ ಅಧ್ಯಯನವೊಂದರಲ್ಲಿ ಭಾಗವಹಿಸಿದವರ ಪೈಕಿ ಶೇಕಡಾ 26ರಷ್ಟು ಜನ ಭಾರತೀಯ ಮೂಲದವರಾಗಿದ್ದರು ಮತ್ತು ಅವರಲ್ಲಿ ನಮ್ಮ ಲಸಿಕೆಯು ಅತ್ಯುತ್ತಮ ಪರಿಣಾಮ ತೋರಿದೆ. ಮೇ 22 ರಂದು ನಡೆದ ಈ ಅಧ್ಯಯನದಲ್ಲಿ ಭಾರತದಲ್ಲಿ ಹೆಚ್ಚು ವರದಿಯಾಗಿರುವ B.1.617.2 ರೂಪಾಂತರಿ ವಿರುದ್ಧ 87.9 ಪರ್ಸೆಂಟ್ನಷ್ಟು ಪರಿಣಾಮಕಾರಿಯಾಗಿದೆ,’ ಎಂದು ಫೈಜರ್ ಹೇಳಿದೆ.
‘ಶೇಕಡಾ 26 ಭಾರತೀಯ ಅಥವಾ ಬ್ರಿಟಿಷ್ ಭಾರತೀಯರಲ್ಲಿ ಶೇ 1.4 ಬಾಂಗ್ಲಾದೇಶಿಗಳು, ಶೇ 5.9 ಪಾಕಿಸ್ತಾನಿಗಳು ಮತ್ತು ಏಷ್ಯಾದ ಬೇರ ಬೇರೆ ದೇಶಗಳ ಶೇ. 5.7 ರಷ್ಟು ಜನರಿದ್ದರು. ಇದರರ್ಥ ಲಸಿಕೆಯು ಈ ವರ್ಗಗಳ ಜನಾಂಗಗಳ ಮೇಲೆ ಸಹ ಸಾಕಷ್ಟು ಪರಿಣಾಮಕಾರಿಯಾಗಿದೆ,’ ಎಂದು ಫೈಜರ್ ಹೇಳಿದೆ.
ಹಾಗೆಯೇ, ಕತಾರ್ನ ರಾಷ್ಟ್ರವ್ಯಾಪಿ ಲಸಿಕಾ ಕಾರ್ಯಕ್ರಮದಲ್ಲಿ B.1.1.7 ರೂಪಾಂತರಿ ವೈರಸ್ ವಿರುದ್ಧ ಫೈಜರ್ನ ಲಸಿಕೆ ಶೇಕಡಾ 89 ರಷ್ಟು ಮತ್ತು ಶೇಕಡಾ 75ರಷ್ಟು B.1.351 (ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿ ಕಂಡುಬಂದಿದ್ದು) ಪರಿಣಾಮಕಾರಿಯಾಗಿದೆ ಎಂದು ಲಭ್ಯವಾಗಿರುವ ಡಾಟಾ ತಿಳಿಸಿದೆಯೆಂದು ಫೈಜರ್ ಹೇಳಿದೆ.
ಈ ಅಧ್ಯಯನಗಳಲ್ಲಿ ಭಾಗವಹಿಸಿದವರಲ್ಲಿ 6,000 ಜನ ಭಾರತೀಯ ಮೂಲದವರಿದ್ದರು, ಶೇ 6-12 ನೇಪಾಳಿ, 4-11 ಪರ್ಸೆಂಟ್ ಬಾಂಗ್ಲಾದೇಶಿಗಳು, ಶೇ 3-4 ಶ್ರೀಲಂಕನ್ನರು ಮತ್ತು ಶೇ 4-6 ಪಾಕಿಸ್ತಾನಿಗಳಾಗಿದ್ದರು.
ಭಾರತಕ್ಕೆ ಜುಲೈ ಮತ್ತು ಅಕ್ಟೋಬರ್ ನಡುವೆ 5 ಕೋಟಿ ಡೋಸ್ಗಳನ್ನು ರಫ್ತು ಮಾಡಲು ಫೈಜರ್ ತಯಾರಿದೆ ಅದರೆ, ಟ್ರಾನ್ಸ್ಪೋರ್ಟೇಶನ್ ಸಮಯದಲ್ಲಿ ಲಸಿಕೆಗಳಿಗೆ ಹಾನಿಯಾದರೆ ಭರಿಸಿಕೊಡುವುದು ಸೇರಿದಂತೆ ಕೆಲ ಷರತ್ತುಗಳನ್ನು ಅದು ಭಾರತ ಸರ್ಕಾರದ ಮುಂದಿಟ್ಟಿದೆ. ಕಳೆದ ವಾರ ನಡೆಸಿದ ಸಭೆಯೂ ಸೇರಿದಂತೆ ಭಾರತ ಸರ್ಕಾರದ ಅಧಿಕಾರಿಗಳೊಂದಿಗೆ ಫೈಜರ್ ಸಂಸ್ಥೆಯು ಹಲವಾರು ಸಭೆಗಳನ್ನು ನಡೆಸಿದೆ.
ಸದರಿ ಸಭೆಗಳಲ್ಲಿ ಅದು ಲಸಿಕೆಯ ಪರಿಣಾಮಕತ್ವ ಶಕ್ತಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಹೆಚ್ಒ) ಲಸಿಕೆಯನ್ನು ಬೇರೆ ಬೇರೆ ದೇಶಗಳಲ್ಲಿ ಬಳಸಲು ಅನುಮೋದನೆ ನೀಡಿರುವುದನ್ನು ಚರ್ಚಿಸಿದೆ. ಭಾರತ ಮತ್ತು ವಿಶ್ವದಲ್ಲಿ ಸದ್ಯದ ಪರಿಸ್ಥಿತಿಯು ಸಾಮಾನ್ಯವಾಗಿಲ್ಲ. ಮತ್ತು ಈ ಪರಿಸ್ಥಿತಿಗಳಿಗೆ ನಾವು ಸಾಮಾನ್ಯ ರೀತಿಯಲ್ಲಿ ಪ್ರತಿಕ್ರಿಯಿಸುವುದು ಸಹ ಸಾಧ್ಯವಿಲ್ಲ, ಅಂತ ಫೈಜರ್ ಸಂಸ್ಥೆ ಭಾರತ ಸರ್ಕಾರದ ಅಧಿಕಾರಿಗಳಿಗೆ ಹೇಳಿರುವುದನ್ನು ಮೂಲಗಳು ವರದಿ ಮಾಡಿವೆ.
ಭಾರತ ಸರ್ಕಾರ ಮತ್ತು ಫೈಜರ್ ಚೇರ್ಮನ್ ಮತ್ತು ಸಿಈಒ ಆಲ್ಬರ್ಟ್ ಬೌರ್ಲ ನಡುವೆ ನಡೆದ ಸಭೆಗಳಲ್ಲಿನ ಚರ್ಚೆಗಳ ಕುರಿತು ಮಾಹಿತಿ ಹೊಂದಿರುವ ಮೂಲಗಳ ಪ್ರಕಾರ ಅವರಿಬ್ಬರು ಫೈಜರ್ ಕಂಪನಿಯ ಲಸಿಕೆಗೆ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮೂರು ಪ್ರಮುಖ ಅಂಶಗಳ ಕಡೆ ಗಮನಹರಿಸುವ ನಿರ್ಧಾರಕ್ಕೆ ಬಂದರು. ಲಸಿಕೆಯನ್ನು ಭಾರತ ಸರ್ಕಾರ ಖರೀದಿಸುವುದು, ಹಾನಿ ಮತ್ತು ಹೊಣೆಗಾರಿಕೆ ಮತ್ತು ಅನುಮೋದನೆ ನಂತರದ ಅಧ್ಯಯನಗಳಿಗೆ ಅಗತ್ಯವಿರುವ ವ್ಯವಸ್ಥೆಯನ್ನು ಕಲ್ಪಿಸುವುದು-ಈ ಮೂರು ಅಂಶಗಳಿಗೆ ಗಮನ ನೀಡಬೇಕಾಗಿದೆ ಎನ್ನುವುದು ಚರ್ಚೆಯಾಗಿದೆ.
ಪ್ರಸಕ್ತವಾಗಿ ಭಾರತವು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಷೀಲ್ಡ್, ಭಾರತ ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತ ಚಿಕ್ಕ ಪ್ರಮಾಣದಲ್ಲಿ ರಷ್ಯಾದಲ್ಲಿ ತಯಾರಾಗಿರುವ ಸ್ಫುಟ್ನಿಕ್ ವಿ ಲಸಿಕೆಗಳನ್ನು ತನ್ನ ಲಸಿಕಾ ಕಾರ್ಯಕ್ರಮದಲ್ಲಿ ಉಪಯೋಗಿಸುತ್ತಿದೆ.
ಇದನ್ನೂ ಓದಿ: Vaccine Tourism: ಲಸಿಕೆ ಪ್ರವಾಸೋದ್ಯಮ; ಕೈಯಲ್ಲಿ ಹಣವಿದ್ದವರು ವಿದೇಶಕ್ಕೆ ತೆರಳಿ ಕೊವಿಡ್ ಲಸಿಕೆ ಹಾಕಿಸಿಕೊಂಡು ಬರಬಹುದೇ?