ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೊ ಪ್ರಶ್ನಿಸಿದ ಮನವಿ ವಜಾಗೊಳಿಸಿ ₹1 ಲಕ್ಷ ದಂಡ ವಿಧಿಸಿದ ಕೇರಳ ಹೈಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Dec 21, 2021 | 1:23 PM

ಪ್ರಧಾನಿಯನ್ನು ಕಾಂಗ್ರೆಸ್ ಪ್ರಧಾನಿ ಅಥವಾ ಬಿಜೆಪಿ ಪ್ರಧಾನಿ ಅಥವಾ ಯಾವುದೇ ರಾಜಕೀಯ ಪಕ್ಷದ ಪ್ರಧಾನಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ, ಆದರೆ ಸಂವಿಧಾನದ ಪ್ರಕಾರ ಒಮ್ಮೆ ಪ್ರಧಾನಿ ಆಯ್ಕೆಯಾದರೆ, ಅವರು ನಮ್ಮ ದೇಶದ ಪ್ರಧಾನಿ.

ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೊ ಪ್ರಶ್ನಿಸಿದ ಮನವಿ ವಜಾಗೊಳಿಸಿ ₹1 ಲಕ್ಷ ದಂಡ ವಿಧಿಸಿದ ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್
Follow us on

ತಿರುವನಂತಪುರಂ: ಕೊವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರದಿಂದ (vaccination certificate) ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಫೋಟೊವನ್ನು ತೆಗೆದುಹಾಕುವ ಅರ್ಜಿಯನ್ನು ಕೇರಳ ಹೈಕೋರ್ಟ್ (Kerala High Court) ಮಂಗಳವಾರ ವಜಾಗೊಳಿಸಿದ್ದು ₹ 1 ಲಕ್ಷ ದಂಡವನ್ನು ವಿಧಿಸಿದೆ. ಇದು “ಕ್ಷುಲ್ಲಕ”, “ರಾಜಕೀಯ ಪ್ರೇರಿತ” ಮತ್ತು “ಪ್ರಚಾರಕ್ಕಾಗಿ ಮಾಡಿದ ದಾವೆ” ಎಂದು ಹೈಕೋರ್ಟ್ ಹೇಳಿದೆ. ಪ್ರಧಾನಿಯನ್ನು ಕಾಂಗ್ರೆಸ್ ಪ್ರಧಾನಿ ಅಥವಾ ಬಿಜೆಪಿ ಪ್ರಧಾನಿ ಅಥವಾ ಯಾವುದೇ ರಾಜಕೀಯ ಪಕ್ಷದ ಪ್ರಧಾನಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ, ಆದರೆ ಸಂವಿಧಾನದ ಪ್ರಕಾರ ಒಮ್ಮೆ ಪ್ರಧಾನಿ ಆಯ್ಕೆಯಾದರೆ, ಅವರು ನಮ್ಮ ದೇಶದ ಪ್ರಧಾನಿ. ಆ ಹುದ್ದೆ ಪ್ರತಿಯೊಬ್ಬ ನಾಗರಿಕನ ಹೆಮ್ಮೆಯಾಗಬೇಕು ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ (Justice PV Kunhikrishnan)ಹೇಳಿದರು. ಸರ್ಕಾರದ ನೀತಿಗಳಲ್ಲಿ ಮತ್ತು ಪ್ರಧಾನ ಮಂತ್ರಿಯ ರಾಜಕೀಯ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನೈತಿಕತೆಯನ್ನು ಹೆಚ್ಚಿಸುವ ಸಂದೇಶದೊಂದಿಗೆ ಪ್ರಧಾನಿಯವರ ಭಾವಚಿತ್ರದೊಂದಿಗೆ ಲಸಿಕೆ ಪ್ರಮಾಣಪತ್ರವನ್ನು ಕೊಂಡೊಯ್ಯಲು ನಾಗರಿಕರು ನಾಚಿಕೆಪಡಬೇಕಾಗಿಲ್ಲ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಅರ್ಜಿದಾರರು ₹ 1 ಲಕ್ಷ ದಂಡವನ್ನು ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (KeLSA) ಪಾವತಿ ಮಾಡಬೇಕಾಗುತ್ತದೆ. ಅವರು ದಂಡವನ್ನು ಸಕಾಲದಲ್ಲಿ ಪಾವತಿಸಲು ವಿಫಲವಾದರೆ ಅವರ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಮೊತ್ತವನ್ನು ಮರುಪಡೆಯುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ತೋರುತ್ತದೆ. ಇದು ಮಹತ್ವದ ಅರ್ಜಿಯಲ್ಲ.ಅರ್ಜಿಯ ಹಿಂದಿನ ಉದ್ದೇಶ ಸಾರ್ವಜನಿಕ ಒಳಿತಿಗಾಗಿ ಅಲ್ಲ, ಆದರೆ ಪ್ರಚಾರಕ್ಕಾಗಿ ಮಾಡಿದ್ದು ಎಂದು ನ್ಯಾಯಾಲಯ ಹೇಳಿದೆ. “ಗಂಭೀರ ಪ್ರಕರಣಗಳು ನ್ಯಾಯಾಲಯದಲ್ಲಿ ರಾಶಿ ಬಿದ್ದಿರುವಾಗ ಇಂಥಾ ಅನಗತ್ಯ ಅರ್ಜಿಗಳನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಾಗಿ ಜನರು ಹಣ ಪಾವತಿಸಬೇಕಾದಾಗ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯವರ ಚಿತ್ರ ಇರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ಪೀಟರ್ ಮಲ್ಲಿಪರಂಬಿಲ್ ಅವರು ಅರ್ಜಿ ಸಲ್ಲಿಸಿದ್ದರು.

ವೈಯಕ್ತಿಕ ವಿವರಗಳೊಂದಿಗೆ ಪ್ರಮಾಣಪತ್ರವು “ಖಾಸಗಿ ಜಾಗ” ಎಂದು ಅವರು ವಾದಿಸಿದರು ಮತ್ತು ಆದ್ದರಿಂದ, ವ್ಯಕ್ತಿಯ ಗೌಪ್ಯತೆಗೆ ಒಳನುಗ್ಗುವುದು ಸೂಕ್ತವಲ್ಲ. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೊವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಪ್ರಧಾನಿಯವರ ಭಾವಚಿತ್ರವನ್ನು ಹೊಂದಿರುವುದ ಬಗ್ಗೆ ನ್ಯಾಯಾಲಯವು ಯಾವುದೇ ದೋಷವನ್ನು ಕಂಡುಕೊಂಡಿಲ್ಲ. “ನಿಮಗೆ ಪ್ರಧಾನಿಯ ಬಗ್ಗೆ ನಾಚಿಕೆ ಏಕೆ? ಅವರು ಜನಾದೇಶದ ಮೂಲಕ ಅಧಿಕಾರಕ್ಕೆ ಬಂದರು.. ನಮಗೆ ವಿಭಿನ್ನ ರಾಜಕೀಯ ದೃಷ್ಟಿಕೋನಗಳು ಇರಬಹುದು, ಆದರೆ ಅವರು ಇನ್ನೂ ನಮ್ಮ ಪ್ರಧಾನಿ” ಎಂದು ನ್ಯಾಯಾಲಯ ಹೇಳಿತ್ತು.

ಲಸಿಕೆ ಪ್ರಮಾಣಪತ್ರಗಳಲ್ಲಿ ಬೇರೆ ಯಾವುದೇ ದೇಶಗಳು ತಮ್ಮ ರಾಜಕೀಯ ನಾಯಕರ ಚಿತ್ರಗಳನ್ನು ಹೊಂದಿಲ್ಲ ಎಂದು ಅರ್ಜಿದಾರರು ವಾದಿಸಿದಾಗ “ಅವರು ತಮ್ಮ ಪ್ರಧಾನ ಮಂತ್ರಿಗಳ ಬಗ್ಗೆ ಹೆಮ್ಮೆಪಡದಿರಬಹುದು, ನಾವು ನಮ್ಮ ಪ್ರಧಾನಿಯ ಬಗ್ಗೆ ಹೆಮ್ಮೆಪಡುತ್ತೇವೆ” ಎಂದು ಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಫೋಟೊ ಇದ್ದರೇನು? ಅವರು ನಮ್ಮ ಪ್ರಧಾನಿ: ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಕೇರಳ ಹೈಕೋರ್ಟ್