‘ಸುಷ್ಮಾ ಸ್ವರಾಜ್’(Sushma Swaraj) -ಇದು ಭಾರತದ ಪಾಲಿಗೆ ಸದಾ ಸ್ಮರಣೀಯ ಹೆಸರು. ನಮ್ಮ ದೇಶ ಕಂಡ ಒಬ್ಬರು ಅದ್ಭುತ ರಾಜಕಾರಣಿ. ಅವರು ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರಾದ ಮೇಲೆ ಹಲವು ದೇಶಗಳೊಂದಿಗೆ ನಮ್ಮ ರಾಷ್ಟ್ರದ ಸಂಬಂಧವನ್ನು ಉತ್ತಮಗೊಳಿಸಿದ್ದಾರೆ. ಮಾನವೀಯ ಮೌಲ್ಯಗಳ ಜತೆಗೆ ತಮ್ಮ ಇಲಾಖೆ ಆಡಳಿತ ನಡೆಸಿದ ಅವರು ತುಂಬ ಸರಳ ವ್ಯಕ್ತಿತ್ವದವರು. ಅದೆಷ್ಟೋ ಜನರ ಪಾಲಿಗೆ ಅಮ್ಮನಾಗಿದ್ದವರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜತೆ ರಾಜಕೀಯದಲ್ಲಿ ಪಳಗಿದ್ದ ಸುಷ್ಮಾ ಸ್ವರಾಜ್, ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರಿಗೂ ಆಪ್ತರು.
ನಿನ್ನೆ ಫೆಬ್ರವರಿ 14 ಸುಷ್ಮಾ ಸ್ವರಾಜ್ ಅವರ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ಆಸಕ್ತಿಕರ ವಿಷಯವನ್ನು ದೇಶದ ಜನರೊಂದಿಗೆ ಹಂಚಿಕೊಂಡಿದ್ದಾರೆ. ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್ನ ಜಲಂಧರ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದಂತೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಸುಷ್ಮಾ ಸ್ವರಾಜ್ಗೆ ಸಂಬಂಧಪಟ್ಟ ಅವರ ಪೋಸ್ಟ್ ಹೀಗಿದೆ.
‘ನಾನೀಗಷ್ಟೇ ಪಂಜಾಬ್ ಜಲಂಧರ್ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ವಾಪಸ್ ಬಂದೆ. ಇಂದು ಸುಷ್ಮಾ ಜೀ ಅವರ ಹುಟ್ಟಿದ ದಿನ. ಈ ಹೊತ್ತಲ್ಲಿ ಇದ್ದಕ್ಕಿದ್ದಂತೆ ನನಗೊಂದು ತುಂಬ ಹಳೇ ವಿಷಯ ನೆನಪಾಯ್ತು. ಸುಷ್ಮಾ ಜೀ ಅವರಿಗೆ ಸಂಬಂಧಪಟ್ಟ ಈ ವಿಚಾರವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈಗೊಂದು 25ವರ್ಷಗಳ ಹಿಂದೆ ನಾನು ಆಗ ಗುಜರಾತ್ನಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆ. ಆ ಸಮಯದಲ್ಲಿ ಚುನಾವಣಾ ಪ್ರವಾಸ ನಿಮಿತ್ತ ಸುಷ್ಮಾ ಸ್ವರಾಜ್ ಜೀ ಅವರು ಗುಜರಾತ್ಗೆ ಆಗಮಿಸಿದ್ದರು. ಅವರು ನನ್ನ ಹಳ್ಳಿ ವಡ್ನಗರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿಗೆ ಹೋಗಿದ್ದ ಸುಷ್ಮಾ ಜೀ ನನ್ನ ತಾಯಿಯನ್ನೂ ಭೇಟಿ ಮಾಡಿ, ಮಾತುಕತೆ ನಡೆಸಿದರು. ಅದೇ ಸಮಯದಲ್ಲಿ ನಮ್ಮ ಕುಟುಂಬದಲ್ಲಿ, ನನ್ನ ಸೋದರಳಿಯನಿಗೆ ಹೆಣ್ಣು ಮಗು ಜನಿಸಿತ್ತು. ಅದಾಗಲೇ ಜ್ಯೋತಿಷಿಗಳು ಅವಳ ಜಾತಕವನ್ನೆಲ್ಲ ನೋಡಿದ್ದರು. ಯಾವ ಹೆಸರು ಇಡುವುದು ಎಂದೂ ನಿರ್ಧರಿತವಾಗಿತ್ತು. ಆದರೆ ಸುಷ್ಮಾ ಜೀ ನಮ್ಮ ಮನೆಗೆ ಭೇಟಿ ಕೊಟ್ಟು ಹೋದ ತಕ್ಷಣ ನನ್ನ ಅಮ್ಮ ಮಗುವಿಗೆ ಸುಷ್ಮಾ ಎಂದೇ ಹೆಸರಿಟ್ಟರು. ಅದಾಗಲೇ ಮನೆಯಲ್ಲಿ ನಿರ್ಧರಿತವಾದ ಹೆಸರು ಬೇಡವೆಂದು ತೀರ್ಮಾನವಾಯಿತು. ನನ್ನ ತಾಯಿ ಶಿಕ್ಷಣವಂತರಲ್ಲ. ಆದರೆ ಅವರ ಕಲ್ಪನೆಗಳು, ಯೋಚನೆಗಳಲ್ಲಿ ಹೊಸತನ ಇರುತ್ತದೆ. ಅಂದು ಸುಷ್ಮಾ ಎಂಬ ಹೆಸರನ್ನು ಯಾಕೆ ಇಟ್ಟ ಎಂಬುದಕ್ಕೆ ಕಾರಣ ಕೊಡುವಾಗ ತುಂಬ ಚೆನ್ನಾಗಿ ಮಾತನಾಡಿದ್ದರು. ಅದೆಲ್ಲವೂ ನನಗೆ ಇನ್ನೂ ನೆನಪಿದೆ ಎಂದು ಪೋಸ್ಟ್ ಹಾಕಿದ್ದಾರೆ. ಹಾಗೇ, ಸುಷ್ಮಾ ಜೀ ಅವರಿಗೆ ಗೌರವ ಸಮರ್ಪಿಸಿದ್ದಾರೆ.
ಸುಷ್ಮಾ ಸ್ವರಾಜ್ ಒಬ್ಬರು ಗಟ್ಟಿಗಿತ್ತಿ ಎಂಬುದರಲ್ಲಿ ಸಂಶಯವೇ ಇಲ್ಲ. ಭಾಷಣಕ್ಕೆ ನಿಂತರೆ ಎದುರಿನವರನ್ನು ಮೋಡಿ ಮಾಡುವಷ್ಟು ಶಕ್ತಿ. ಕೆಲಸ ಎಂದು ಬಂದರೆ ಅಚ್ಚುಕಟ್ಟು. ಎಂಥ ಸಂದರ್ಭವನ್ನೂ ಗಟ್ಟಿಯಾಗಿ ನಿಂತು ಎದುರಿಸುವ ಆತ್ಮವಿಶ್ವಾಸ ತುಂಬಿದ್ದ ಸುಷ್ಮಾ ಸ್ವರಾಜ್ ಭಾರತದ ವಿದೇಶಾಂಗ ವ್ಯವಹಾರ ಇಲಾಖೆಗೆ ಹೊಸ ಸ್ವರೂಪವನ್ನೇ ಕೊಟ್ಟಿದ್ದಾರೆ ಎಂದರೂ ತಪ್ಪಾಗಲಾರದು. ಅವರು ಆಗಸ್ಟ್ 6ರ 2019ರಲ್ಲಿ ಮೃತಪಟ್ಟಾಗ ಪಾಕಿಸ್ತಾನವೂ ಸೇರಿ, ಅದೆಷ್ಟೋ ವಿದೇಶಿ ನಾಯಕರೂ ಕಂಬನಿ ಮಿಡಿದಿದ್ದಾರೆ. ಅದು ಸುಷ್ಮಾ ಸ್ವರಾಜ್ ಸಂಪಾದಿಸಿದ್ದ ಪ್ರೀತಿ.
ಇದನ್ನೂ ಓದಿ: ಬೆಂಗಳೂರಿನ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ನೋಟಿಸ್ ಜಾರಿ ಮಾಡಿದ ಧಾರ್ಮಿಕ ದತ್ತಿ ಇಲಾಖೆ
Published On - 11:47 am, Tue, 15 February 22