Republic Day 2022: ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್​ ಶಾ

ಪ್ರಜಾಪ್ರಭುತ್ವವನ್ನು ಆಚರಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ವಿಚಾರಗಳು, ಮೌಲ್ಯಗಳನ್ನು ಗೌರವಿಸಲು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹೇಳಿದ್ದಾರೆ.

Republic Day 2022: ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್​ ಶಾ
ಪ್ರಧಾನಿ ಮೋದಿ ಮತ್ತು ಅಮಿತ್ ಶಾ
Follow us
TV9 Web
| Updated By: Lakshmi Hegde

Updated on:Jan 26, 2022 | 10:13 AM

ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ದೇಶದ ಜನತೆಗೆ ಗಣರಾಜ್ಯೋತ್ಸವ (Republic Day 2022) ಶುಭಾಶಯ ಕೋರಿದ್ದಾರೆ. ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಜೈ ಹಿಂದ್​ ಎಂದು ಟ್ವೀಟ್​ ಮಾಡಿದ್ದಾರೆ.  ಅದಕ್ಕೂ ಮೊದಲು ಪದ್ಮ ಪ್ರಶಸ್ತಿ ಭಾಜನರಾದವರಿಗೆ ಶುಭ ಹಾರೈಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಅಭಿನಂದನೆಗಳು. ಇಡೀ ರಾಷ್ಟ್ರವೇ ಗೌರವ ಪಡುತ್ತಿದೆ. ಸಮಾಜಕ್ಕೆ ನೀವು ನೀಡಿದ ಕೊಡುಗೆಗಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರೂ ಸಹ ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಗಣತಂತ್ರ ಭಾರತದ ಗೌರವ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ತಮ್ಮ ಜೀವ-ಜೀವನವನ್ನೇ ಪಣವಾಗಿ ಇಟ್ಟ ಮತ್ತು ಇಡುತ್ತಿರುವ ಎಲ್ಲ ಯೋಧರಿಗೂ ನನ್ನ ಕೃತಜ್ಞತಾಪೂರ್ವಕ ಶುಭ ಹಾರೈಕೆಗಳು ಎಂದು ಹೇಳಿದ್ದಾರೆ.

ಹಾಗೇ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಟ್ವೀಟ್ ಮಾಡಿ, ಭಾರತದ ಎಲ್ಲ ಜನರಿಗೂ ಕೂಡ ಗಣರಾಜ್ಯೋತ್ಸವದ ಶುಭಾಶಯಗಳು. ಪ್ರಜಾಪ್ರಭುತ್ವವನ್ನು ಆಚರಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ವಿಚಾರಗಳು, ಮೌಲ್ಯಗಳನ್ನು ಗೌರವಿಸಲು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ದೇಶದ ಎಲ್ಲ ನಾಗರಿಕರಿಗೂ ಹೃತ್ಪೂರ್ವಕ ಶುಭಾಶಯಗಳು. ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದಲ್ಲಿ ನಂಬಿಕೆಯಿಡಬೇಕು ಎಂದು ಹೇಳಿದರು. ಈಗಾಗಲೇ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡಿದ್ದಾರೆ. ದೆಹಲಿಯಲ್ಲಿ ವಿಪರೀತ ಚಳಿ, ಮಂಜು ಕವಿದ ವಾತಾವರಣ ಇರುವುದರಿಂದ, ರಾಜಪಥ್​ದಲ್ಲಿ ಬೆಳಗ್ಗೆ 10.30ಕ್ಕೆ ಧ್ವಜಾರೋಹಣ, ಪರೇಡ್​ ನಡೆಯಲಿದೆ ಎಂದು ಹೇಳಲಾಗಿದೆ.

ಭಾರತ ಈ ಬಾರಿ 73ನೇ ಗಣರಾಜ್ಯೋತ್ಸವ ಆಚರಿಸಿಕೊಳ್ಳುತ್ತಿದೆ (Republic Day 2022).  ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947ರ ಆಗಸ್ಟ್​ 15ರಂದು. ಹೀಗಾಗಿ ಪ್ರತಿವರ್ಷ ಆಗಸ್ಟ್​ 15ನ್ನು ಸ್ವಾತಂತ್ರ್ಯೋತ್ಸವ ಎಂದು ಆಚರಣೆ ಮಾಡುತ್ತೇವೆ. ಅದೇ, ದೇಶದಲ್ಲಿ ಅಧಿಕೃತವಾಗಿ ಸಂವಿಧಾನ ಜಾರಿಗೆ ಬಂದಿದ್ದು 1950ರ ಜನವರಿ 26ರಂದು. ಅಂದಿನಿಂದಲೂ ಪ್ರತಿವರ್ಷ ಜನವರಿ 26ರನ್ನು ಗಣರಾಜ್ಯೋತ್ಸವ ಅಥವಾ ಗಣತಂತ್ರ ದಿನ (Republic Day) ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಬಿ.ಆರ್​.ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ನೇತೃತ್ವ ವಹಿಸಿದ್ದರು. ಸಂವಿಧಾನ ರಚನೆಯಾಗಿ ಜಾರಿಗೆ ಬಂದ ಬಳಿಕ ಭಾರತವೊಂದು ಸಾರ್ವಭೌಮ ರಾಷ್ಟ್ರವಾಯಿತು. ಹಾಗೇ, ಭಾರತದಲ್ಲಿ 1949ರ ನವೆಂಬರ್​ 26ರಂದು ಸಂವಿಧಾನ ಸಭೆಯಲ್ಲಿ, ಸಂವಿಧಾನವನ್ನು ಅಂಗೀಕರಿಸಿದ ನೆನಪಿಗೆ, ದೇಶದಲ್ಲಿ ಪ್ರತಿವರ್ಷ ನವೆಂಬರ್​ 26ರನ್ನು ಸಂವಿಧಾನ ದಿನ ಎಂದೂ ಆಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಸಾಧನೆಯನ್ನು ಇಡೀ ರಾಷ್ಟ್ರ ಗೌರವಿಸುತ್ತದೆ; ಪದ್ಮ ಪ್ರಶಸ್ತಿಗೆ ಭಾಜನರಾದವರಿಗೆ ಪ್ರಧಾನಿ ಮೋದಿ ಅಭಿನಂದನೆ

Published On - 9:26 am, Wed, 26 January 22