2025ರಲ್ಲಿ ಮೋದಿ, ಟ್ರಂಪ್ 8 ಬಾರಿ ಮಾತನಾಡಿದ್ದರು; ಲುಟ್ನಿಕ್ ಹೇಳಿಕೆಗೆ ಭಾರತ ಸ್ಪಷ್ಟನೆ

ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದ ಏಕೆ ಕುಸಿದಿದೆ ಎಂಬ ಕುರಿತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ನೀಡಿದ್ದ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವಾಲಯ ನಿರಾಕರಿಸಿದೆ. ಪ್ರಧಾನಿ ಮೋದಿ ಟ್ರಂಪ್ ಜೊತೆ ಮಾತನಾಡದ ಕಾರಣದಿಂದ ಟ್ರಂಪ್ ಅಹಂಗೆ ಹೊಡೆತ ಬಿದ್ದಿತ್ತು. ಇದರಿಂದಲೇ ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದ ಮುಂದುವರೆಯಲಿಲ್ಲ ಎಂದು ಲುಟ್ನಿಕ್ ಹೇಳಿದ್ದರು.

2025ರಲ್ಲಿ ಮೋದಿ, ಟ್ರಂಪ್ 8 ಬಾರಿ ಮಾತನಾಡಿದ್ದರು; ಲುಟ್ನಿಕ್ ಹೇಳಿಕೆಗೆ ಭಾರತ ಸ್ಪಷ್ಟನೆ
Modi And Trump

Updated on: Jan 09, 2026 | 7:46 PM

ನವದೆಹಲಿ, ಜನವರಿ 9: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡದ ಕಾರಣದಿಂದಲೇ ಕಳೆದ ವರ್ಷ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಂದುವರೆಸಲು ಸಾಧ್ಯವವಾಗಲಿಲ್ಲ ಎಂಬ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ಅವರ ಈ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಪರಸ್ಪರ ಪ್ರಯೋಜನಕಾರಿ ಒಪ್ಪಂದವನ್ನು ಮಾಡಿಕೊಳ್ಳಲು ಭಾರತ ಸದಾ ಆಸಕ್ತಿ ಹೊಂದಿತ್ತು ಎಂದು ಭಾರತ ಹೇಳಿದೆ.

ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸಲು ಭಾರತಕ್ಕೆ 3 ವಾರ ಸಮಯ ನೀಡಲಾಗಿತ್ತು. ಆ ಒಪ್ಪಂದವನ್ನು ಮುಕ್ತಾಯಗೊಳಿಸಲು ಮೋದಿ ಟ್ರಂಪ್‌ಗೆ ಕರೆ ಮಾಡಬೇಕಾಗಿತ್ತು. ಆದರೆ, ಭಾರತದ ಕಡೆಯಿಂದ ಯಾವುದೇ ಫೋನ್ ಬರಲಿಲ್ಲ. ಇದು ಟ್ರಂಪ್ ಅಹಂಗೆ ಹೊಡೆತ ನೀಡಿತು ಎಂದು ಲುಟ್ನಿಕ್ ಪಾಡ್‌ಕ್ಯಾಸ್ಟ್‌ಗೆ ತಿಳಿಸಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: ಮೋದಿ ಟ್ರಂಪ್​ಗೆ ಕರೆ ಮಾಡ್ಲಿಲ್ಲ, ಭಾರತ-ಅಮೆರಿಕದ ವ್ಯಾಪಾರ ಒಪ್ಪಂದ ಮುಂದುವರೀಲಿಲ್ಲ: ವಾಣಿಜ್ಯ ಕಾರ್ಯದರ್ಶಿ

ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ನೀಡಿದ ಈ ಹೇಳಿಕೆಗಳು ನಿಖರವಾಗಿಲ್ಲ. ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿತ್ತು. 2025ರಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ 8 ಬಾರಿ ಫೋನ್​ನಲ್ಲಿ ಮಾತನಾಡಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದಾರೆ.


ಕಳೆದ ವರ್ಷ ಫೆಬ್ರವರಿಯಲ್ಲಿ ಮೋದಿ ಮತ್ತು ಟ್ರಂಪ್ ನಡುವಿನ ಸಭೆಯ ನಂತರ ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ಪ್ರಾರಂಭವಾದವು. ಎರಡು ಪೂರಕ ಆರ್ಥಿಕತೆಗಳ ನಡುವಿನ ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದದಲ್ಲಿ ನಾವು ಆಸಕ್ತಿ ಹೊಂದಿದ್ದೇವೆ. ಅದನ್ನು ಮುಕ್ತಾಯಗೊಳಿಸಲು ಎದುರು ನೋಡುತ್ತಿದ್ದೇವೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ