ಎಐ ಇಂಪ್ಯಾಕ್ಟ್ ಸಮಿಟ್ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್ಗಳೊಂದಿಗೆ ಪ್ರಧಾನಿ ಮೋದಿ ಸಭೆ
PM Narendra Modi chairs meeting with Indian AI startups: ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ 12 ಎಐ ಸ್ಟಾರ್ಟಪ್ಗಳ ಮುಖ್ಯಸ್ಥರನ್ನು ಕರೆಸಿ ಸಭೆ ನಡೆಸಿದ್ದಾರೆ. ಫೆಬ್ರುವರಿಯಲ್ಲಿ ನಡೆಯುವ ಎಐ ಇಂಪ್ಯಾಕ್ಟ್ ಸಮಿಟ್ನ ಒಂದು ಭಾಗದಲ್ಲಿ ಈ 12 ಸ್ಟಾರ್ಟಪ್ಗಳು ಪಾಲ್ಗೊಳ್ಳುತ್ತಿವೆ. ಇವುಗಳೊಂದಿಗೆ ಪ್ರಧಾನಿ ಮೋದಿ ಈ ದುಂಡುಮೇಜಿನ ಸಭೆಯಲ್ಲಿ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

ನವದೆಹಲಿ, ಜನವರಿ 8: ಫೆಬ್ರುವರಿಯಲ್ಲಿ ನಡೆಯಲಿರುವ ಎಐ ಇಂಪ್ಯಾಕ್ಟ್ ಸಮಿಟ್ಗೆ (AI Impact Summit 2026) ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತೀಯ ಎಐ ಸ್ಟಾರ್ಟಪ್ಗಳ ಸಭೆ ನಡೆಸಿದರು. ಲೋಕಕಲ್ಯಾಣ ಮಾರ್ಗ್ನಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿಗಳು ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು. 12 ಸ್ಟಾರ್ಟಪ್ಗಳು ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಕೆಲಸ ಹಾಗೂ ಐಡಿಯಾಗಳನ್ನು ಪ್ರಧಾನಿಯವರ ಹಂಚಿಕೊಂಡಿವೆ.
ಮುಂದಿನ ತಿಂಗಳು ನಡೆಯುವ ಸಮಿಟ್ನಲ್ಲಿ ‘ಎಐ ಫಾರ್ ಆಲ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್’ ಅಧಿವೇಶನದಲ್ಲಿ ಪಾಲ್ಗೊಳ್ಳಲು ಈ 12 ಸ್ಟಾರ್ಟಪ್ಗಳು ಅರ್ಹತೆ ಪಡೆದಿವೆ. ಅವತಾರ್, ಭಾರತ್ಜೆನ್, ಫ್ರಾಕ್ಟಲ್, ಗ್ಯಾನ್, ಜೆನ್ಲೂಪ್, ಜ್ಞಾನಿ, ಇಂಟೆಲಿಹೆಲ್ತ್, ಸರ್ವಂ, ಶೋಧ್ ಎಐ, ಸಾಕೆಟ್ ಎಐ, ಟೆಕ್ ಮಹೀಂದ್ರ ಮತ್ತು ಝೆನ್ಟೀಕ್ ಆ 12 ಸ್ಟಾರ್ಟಪ್ಗಳಾಗಿವೆ. ಪ್ರಧಾನಿ ಜೊತೆಗಿನ ಸಭೆಯಲ್ಲಿ ಈ 12 ಸ್ಟಾರ್ಟಪ್ಗಳ ಸಿಇಒಗಳು, ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ರೌಂಡ್ಟೇಬಲ್ ಮೀಟಿಂಗ್ನಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಜಿತಿನ್ ಪ್ರಸಾದ ಅವರೂ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು
ಸಮಾಜದಲ್ಲಿ ಪರಿವರ್ತನೆ ತರಲು ಎಐ ಎಷ್ಟು ಮಹತ್ವದ್ದು ಎಂಬುದನ್ನು ಮೋದಿ ಈ ಸಂದರ್ಭದಲ್ಲಿ ಆಂಟ್ರಪ್ರನ್ಯೂರ್ಗಳಿಗೆ ವಿವರಿಸಿದರು. ಎಐ ಆಂಟ್ರಪ್ರನ್ಯೂರ್ಗಳು ಮತ್ತು ಸ್ಟಾರ್ಟಪ್ಗಳು ಭಾರತದ ಭವಿಷ್ಯದ ನಿರ್ಮಾತೃಗಳಾಗಿವೆ ಎಂದ ಅವರು, ಭಾರತದಿಂದ ಅನನ್ಯವಾದಂತಹ ಎಐ ಮಾಡಲ್ ಅನ್ನು ಜಗತ್ತಿಗೆ ಕೊಡಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಎಐ ಸ್ಟಾರ್ಟಪ್ಗಳ ಮುಖಂಡರು, ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಇಕೋಸಿಸ್ಟಂ ಬೆಳೆಸಲು ಸರ್ಕಾರ ಹೊಂದಿರುವ ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಎಐ ಇನ್ನೋವೇಶನ್ಗಳ ಕೇಂದ್ರಬಿಂದು ಭಾರತದತ್ತ ವಾಲುತ್ತಿದೆ. ಎಐ ಅಭಿವೃದ್ಧಿಗೆ ಬೇಕಾದ ಸಮೃದ್ಧ ವಾತಾವರಣ ಭಾರತದಲ್ಲಿ ಇದೆ. ಜಾಗತಿಕ ಎಐ ನಕ್ಷೆಯಲ್ಲಿ ಭಾರತದ ಸ್ಥಾನ ಗುರುತರವಾಗಿದೆ ಎಂದು ಈ ನವೋದ್ಯಮಿಗಳು ಹೇಳಿದ್ದಾರೆ.
ಇದನ್ನೂ ಓದಿ: 2024-25ರಲ್ಲಿ ಶೇ. 6.5, 2025-26ರಲ್ಲಿ ಶೇ. 7.4; ಈ ವರ್ಷಕ್ಕೆ ಸರ್ಕಾರದ ಆರ್ಥಿಕ ಬೆಳವಣಿಗೆ ಅಂದಾಜು
ಈ 12 ಸ್ಟಾರ್ಟಪ್ಗಳು ಬೇರೆ ಬೇರೆ ಎಐ ವಿಭಾಗಗಳಲ್ಲಿ ಕಾರ್ಯನಿರತವಾಗಿವೆ. ಭಾರತೀಯ ಭಾಷಾ ಫೌಂಡೇಶನ್ ಮಾಡಲ್ಗಳು, ಬಹುಭಾಷೆಗಳ ಎಲ್ಎಲ್ಎಂಗಳು, ಸ್ಪೀಚ್ ಟು ಟೆಕ್ಸ್ಟ್, ಟೆಕ್ಸ್ಟ್ ಟು ಆಡಿಯೋ, ಟೆಕ್ಸ್ಟ್ ಟು ವಿಡಿಯೋ, ಜನರೇಟಿವ್ ಎಐ ಬಳಸಿ ಮಾಡುವ 3ಡಿ ಕಂಟೆಂಟ್, ಎಂಜಿನಿಯರಿಂಗ್ ಸಿಮುಲೇಶನ್, ಮೆಟೀರಿಯಲ್ ರಿಸರ್ಚ್, ಹೆಲ್ತ್ಕೇರ್ ಡಯಾಗ್ನಾಸ್ಟಿಕ್ಸ್ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಈ ಎಐ ಸ್ಟಾರ್ಟಪ್ಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




