Year of Reforms: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…
2025, Year of Reforms: 2025ನ್ನು ಒಮ್ಮೆ ತಿರುಗಿ ನೋಡಿದರೆ ಸಾಕು, ಸುಧಾರಣೆಗಳ ಪರ್ವವೇ ಕಣ್ಣಮುಂದೆ ಬರುತ್ತದೆ. ದೇಶದ ಆರ್ಥಿಕತೆ, ಆಡಳಿತ ಹಾಗೂ ಸಾಮಾಜಿಕ ಭದ್ರತೆ ಬಲಪಡಿಸುವ ಉದ್ದೇಶದಿಂದ ದೊಡ್ಡ ಬದಲಾವಣೆಗಳನ್ನು ಕಂಡ ವರ್ಷ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನ, ಅಭಿವೃದ್ಧಿಗಾಗಿ ಇರುವ ತುಡಿತದಿಂದ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆದವು.

2025ರ ವರ್ಷ ಬಹಳ ಗುರುತರ ಎನಿಸುವ ಅವಧಿ. ಇದನ್ನು ಸುಧಾರಣೆಗಳ ವರ್ಷ ಎಂದೂ ಪರಿಗಣಿಸಬಹುದು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ದೂರದೃಷ್ಟಿಯಲ್ಲಿ ವಿವಿಧ ರೀತಿಯ ರಚನಾತ್ಮಕ ಬದಲಾವಣೆಗಳನ್ನು 2025ರಲ್ಲಿ ಮಾಡಲಾಗಿದೆ. ಭಾರತದ ಆರ್ಥಿಕತೆ, ಆಡಳಿತ ಮತ್ತು ಸಾಮಾಜಿಕ ಭದ್ರತೆಯ ಚೌಕಟನ್ನು ಬಲಪಡಿಸುವ ಕೆಲಸ ಮಾಡಲಾಗಿದೆ. ಕಳೆದ ವರ್ಷ ಸರ್ಕಾರ ಕೈಗೊಂಡ ಕೆಲ ಪ್ರಮುಖ ಸುಧಾರಣೆಗಳು ಯಾವುವು ಎಂದು ನೋಡುವುದಾದರೆ, ಇಲ್ಲಿದೆ ಮಾಹಿತಿ:
2025-26ರ ಬಜೆಟ್ನಲ್ಲಿ ಸರ್ಕಾರ ಆದಾಯ ತೆರಿಗೆ ರಿಲೀಫ್ ಕೊಟ್ಟಿತು. ಮಧ್ಯಮ ವರ್ಗದವರು ನಿರಾಳಗೊಳ್ಳುವಂತೆ ಮಾಡಿತು. 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಿತು. 75,000 ರೂಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಒಳಗೊಂಡರೆ 12.75 ಲಕ್ಷ ರೂವರೆಗಿನ ಆದಾಯ ಹೊಂದಿದವರು ಒಂದೂ ಪೈಸೆ ಟ್ಯಾಕ್ಸ್ ಕಟ್ಟಬೇಕಿಲ್ಲ. ಅಂಥ ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದೆ.
ಹಳೆಯ 1961ರ ಆದಾಯ ತೆರಿಗೆ ಕಾನೂನು ಹೋಗಿ, 2025ರಿಂದ ಹೊಸದು ಬಂದಿದೆ. ಇದರಿಂದ ತೆರಿಗೆ ಪಾವತಿ ಸುಲಭ, ಪಾರದರ್ಶಕತೆ ಹೆಚ್ಚು, ತಂತ್ರಜ್ಞಾನ ಬೆಂಬಲದ ಆಡಳಿತಕ್ಕೆ ದಾರಿ. ಜಿಎಸ್‌ಟಿ ಸುಧಾರಣೆಗಳು ನಿತ್ಯ ಬಳಕೆ ವಸ್ತುಗಳ ಬೆಲೆ ಇಳಿಕೆ, ಮನೆ, ಎಂಎಸ್‌ಎಮ್‌ಇ, ರೈತ, ಕಾರ್ಮಿಕರ ಮೇಲೆ ಇರುವ ಒತ್ತಡ ಕಡಿಮೆಯಾಗಿದೆ. ಹಣಕಾಸು ವರ್ಷ 2026ರಲ್ಲಿ ಜಿಎಸ್‌ಟಿ ಸಂಗ್ರಹ ನಿರೀಕ್ಷೆ ಮೀರಲಿದೆ ಎಂದು ಎಸ್‌ಬಿಐ ಸಂಶೋಧನೆ ಹೇಳ್ತಿದೆ.
ಎಂಎಸ್‌ಎಮ್‌ಇಗಳಿಗೆ ಹೊಸ ಅವಕಾಶಗಳು, ವಹಿವಾಟು ಮಿತಿಗಳು ಹೆಚ್ಚಾಗಿ, ಜಾಸ್ತಿ ಉದ್ಯಮಗಳು ಸರ್ಕಾರಿ ಸೌಲಭ್ಯ ದೊರೆಯಲಿವೆ. ಪ್ರತಿ ವರ್ಷ ಕೇಂದ್ರ ಸಚಿವಾಲಯ, ಪಿಎಸ್‌ಯುಗಳು ತಮ್ಮ ಖರೀದಿಯಲ್ಲಿ ಕನಿಷ್ಠ ಶೇ.25ರಷ್ಟನ್ನು ಎಂಎಸ್‌ಎಮ್‌ಇಗಳಿಗೆ ಕೊಡಬೇಕು ಅನ್ನೋ ನಿರ್ಬಂಧ ಎಂಎಸ್‌ಎಮ್‌ಇಗಳನ್ನು ಮತ್ತಷ್ಟು ಬಲಿಷ್ಠವಾಗಿಸಲಿದೆ. ಇದರಿಂದ ದೇಶದ ಆರ್ಥಿಕತೆ ಮತ್ತಷ್ಟು ಗಟ್ಟಿಯಾಗಲಿದೆ.
ಕಾರ್ಮಿಕರ ಹಿತಾಸಕ್ತಿಗಾಗಿ 29 ಹಳೆಯ ಕಾರ್ಮಿಕ ಕಾನೂನುಗಳನ್ನು ಒಂದುಗೂಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದರು. ಇವುಗಳಿಂದ ಗಿಗ್ ಮತ್ತು ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ಸಿಗುತ್ತಿದೆ. ವ್ಯಾಪಾರ ಮೊದಲಿಗಿಂತ ಸುಲಭವಾಗಿದೆ.
ಇದನ್ನೂ ಓದಿ: ಜಲಶಕ್ತಿ ಸುಜಲಾಂ ಭಾರತ್: ನೀರಿನ ಸಮಸ್ಯೆ, ಸಂರಕ್ಷಣೆ ಮತ್ತು ಸಮುದಾಯ ಸಹಭಾಗಿತ್ವ
ನರೇಗಾ ಬದಲು ಜಿ ರಾಮ್ ಜಿ ಕಾಯ್ದೆ (Viksit Bharat G RAM G Act) ಬಂದಿದೆ. ಖಾತರಿ ಉದ್ಯೋಗದ ದಿನಗಳ ಸಂಖ್ಯೆ 125ಕ್ಕೆ ಏರಿದೆ. ಬಯೋಮೆಟ್ರಿಕ್ ಹಾಜರಾತಿ, ಏಐ ಮೇಲ್ವಿಚಾರಣೆ ಪರಿಚಯಿಸಲಾಗಿದೆ.
ಹೊಸ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕೇಂದ್ರ-ರಾಜ್ಯ ನಡುವೆ ಅನುದಾನ ಬಾಧ್ಯತೆಯನ್ನು 60:40 ಯಂತೆ (ವಿಶೇಷ ರಾಜ್ಯಗಳಿಗೆ 90:10) ಹಂಚಲಾಗಿದೆ. ಇದರಿಂದ ಹಣಕಾಸು ಪಾರದರ್ಶಕತೆ ಹಾಗೂ ರಾಜ್ಯಗಳಿಗೆ ಹೊಣೆಗಾರಿಕೆ ಹೆಚ್ಚುತ್ತದೆ.
‘ಸಬ್ಕಾ ಬಿಮಾ ಸಬ್ಕಿ ರಕ್ಷಾ’ ಕಾಯ್ದೆ ಮೂಲಕ ವಿಮಾ ವಲಯದಲ್ಲಿ ವಿದೇಶೀ ಹೂಡಿಕೆ (ಎಫ್ಡಿಐ) ಮಿತಿಯನ್ನು 74%ದಿಂದ 100%ಗೆ ಏರಿಸಲಾಗಿದೆ. ಇದರಿಂದ ಇನ್ಷೂರೆನ್ಸ್ ಸೆಕ್ಟರ್ಗೆ ಬಂಡವಾಳ ಹೆಚ್ಚು ಹರಿದುಬರುತ್ತದೆ. ಸ್ಪರ್ಧಾತ್ಮಕತೆ ಮತ್ತು ಸೇವಾ ಗುಣಮಟ್ಟ ಉತ್ತಮಗೊಳ್ಳುತ್ತದೆ.
ಬ್ರಿಟಿಷರ ಕಾಲದಿಂದ ಇದ್ದ ಹಳೆಯ ಕಡಲು ಕಾಯ್ದೆಗಳಿಗೆ ವಿದಾಯ ಹೇಳಿ, ಹೊಸ ಕಾಯ್ದೆಗಳನ್ನು ತರಲಾಗಿದೆ. ಹಡಗು ಸಾಗಣೆ, ಬಂದರು ವ್ಯವಸ್ಥೆಯನ್ನು ಆಧುನೀಕರಿಸಲು, ಕರಾವಳಿ ವ್ಯಾಪಾರ, ನಾವಿಕರ ಹಿತಾಸಕ್ತಿ ಕಾಯ್ದುಕೊಳ್ಳಲು ಈ ಕಾಯ್ದೆ ನೆರವಾಗುತ್ತದೆ. ಸಾಗರ ಆರ್ಥಿಕತೆ ಇದರಿಂದ ಬಲಗೊಳ್ಳುತ್ತದೆ.
ಕರಾವಳಿ ಸಾಗಣೆ ಕಾಯ್ದೆ (ಕೋಸ್ಟಲ್ ಶಿಪ್ಪಿಂಗ್ ಆ್ಯಕ್ಟ್) ಕರಾವಳಿ ವ್ಯಾಪಾರದ 6% ಹಂಚಿಕೆ ಮಾದರಿಯನ್ನು ಮರಳಿ ತರುವ ಗುರಿ ಹೊಂದಿದೆ. ಇದರಿಂದ ಸಾಗಣೆ ಅಥವಾ ಲಾಜಿಸ್ಟಿಕ್ಸ್ ವೆಚ್ಚವನ್ನು ವರ್ಷಕ್ಕೆ 10,000 ಕೋಟಿ ರೂ ಉಳಿಸಲು ನೆರವಾಗಬಲ್ಲುದು.
ವ್ಯಾಪಾರ ಕ್ರಮ ಸುಧಾರಿಸಲು 22 ಕ್ವಾಲಿಟಿ ಕಂಟ್ರೋಲ್ ಆರ್ಡರ್ಗಳನ್ನು ರದ್ದುಗೊಳಿಸಲಾಗಿದೆ. 53 ಕ್ವಾಲಿಟಿ ಕಂಟ್ರೋಲ್ ಆರ್ಡರ್ಗಳನ್ನು ಅಮಾನತಿನಲ್ಲಿಡಲಾಗಿದೆ. ಇದರಿಂದ ಕಾನೂನು ಹೊಂದಾಣಿಕೆಯ ಬಾಧ್ಯತೆ ಕಡಿಮೆ ಆಗುತ್ತದೆ. ಉತ್ಪಾದಕರು ಮತ್ತು ಎಂಎಸ್ಎಂಇಗಳಿಗೆ ಬಂಡವಾಳ ವೆಚ್ಚ ಅಥವಾ ಇನ್ಪುಟ್ ಕಾಸ್ಟ್ ಕಡಿಮೆಗೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ನೈಸರ್ಗಿಕ ಕೃಷಿಗಾರಿಕೆ ಭಾರತದ ಕೃಷಿ ಕ್ಷೇತ್ರದ ಭವಿಷ್ಯದ ಹಾದಿ: ನರೇಂದ್ರ ಮೋದಿ
ಇನ್ನು, 2025ರ ಸೆಕ್ಯೂರಿಟಿ ಮಾರ್ಕೆಟ್ಸ್ ಕೋಡ್ ಅಥವಾ ಸೆಕ್ಯೂರಿಟಿ ಮಾರುಕಟ್ಟೆ ಸಂಹಿತೆಯು ಮೂರು ಹಣಕಾಸು ಕಾನೂನುಗಳನ್ನು ಒಟ್ಟುಗೂಡಿಸಿದೆ. ಇದರಿಂದ ಸೆಬಿ ಆಡಳಿತ ಬಲಗೊಳ್ಳುತ್ತದೆ, ಹೂಡಿಕೆದಾರರ ಹಿತ ರಕ್ಷಣೆ ಸಾಧ್ಯವಾಗುತ್ತದೆ, ಮತ್ತು ಸಣ್ಣ ವೈಧಾನಿಕ ದೋಷಗಳನ್ನು ಅಪರಾಧವೆಂದು ವರ್ಗೀರಿಸುವುದು ತಪ್ಪುತ್ತದೆ.
2025ರಲ್ಲಿ ಭಾರತವು ಮೂರು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಓಮನ್, ಬ್ರಿಟನ್ ಮತ್ತು ನ್ಯೂಜಿಲೆಂಡ್ ಜೊತೆ ಎಫ್ಟಿಎ ಆಗಿದೆ. ಐರೋಪ್ಯ ಮುಕ್ತ ವ್ಯಾಪಾರ ಕೂಟವಾದ ಇಎಫ್ಟಿಎ ಜೊತೆಗಿನ ವ್ಯಾಪಾರ ಒಪ್ಪಂದವನ್ನು ಅಕ್ಟೋಬರ್ 1ರಿಂದ ಜಾರಿಗೊಳಿಸಲಾಗಿದೆ. ಈ ಒಪ್ಪಂದಗಳಿಂದಾಗಿ ಭಾರತಕ್ಕೆ ಸುಂಕರಹಿತವಾಗಿ ರಫ್ತು ಮಾಡಲು ಅವಕಾಶ ಹೆಚ್ಚುತ್ತದೆ. ಬಂಡವಾಳದ ಒಳಹರಿವು ಹೆಚ್ಚಬಹುದು.
ಪರಮಾಣು ಶಕ್ತಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಹಳ ದಿನಗಳಿಂದ ನಿರೀಕ್ಷೆಯಲ್ಲಿದ್ದ ಸುಧಾರಣೆಗಳನ್ನು 2025ರಲ್ಲಿ ಕೈಗೊಳ್ಳಲಾಗಿದೆ. ಶಾಂತಿ ಕಾಯ್ದೆಯು ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಖಾಸಗಿ ಸೆಕ್ಟರ್ ಪಾಲ್ಗೊಳ್ಳಲು ಅವಕಾಶ ಕೊಡುತ್ತದೆ. ಇನ್ನು, ವಿಕಸಿತ್ ಭಾರತ ಶಿಕ್ಷಾ ಅಧಿಷ್ಠಾನ್ ಮಸೂದೆ ಮೂಲಕ ಒಂದೇ ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆ ಜಾರಿಯಲ್ಲಿರುತ್ತದೆ. ಇವೆಲ್ಲವೂ ಕೂಡ 2047ರ ವಿಕಸಿತ ಭಾರತ ಗುರಿಗೆ ಪೂರಕವಾಗುವ ಅಂಶಗಳಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




