Economy: 2024-25ರಲ್ಲಿ ಶೇ. 6.5, 2025-26ರಲ್ಲಿ ಶೇ. 7.4; ಈ ವರ್ಷಕ್ಕೆ ಸರ್ಕಾರದ ಆರ್ಥಿಕ ಬೆಳವಣಿಗೆ ಅಂದಾಜು
Indian economy projected to grow by 7.4pc in 2025-26 as per govt estimates: ಸರ್ಕಾರ ಪ್ರಸಕ್ತ ವರ್ಷದ ಆರ್ಥಿಕ ಬೆಳವಣಿಗೆಗೆ ಮಾಡಿರುವ ಅಂದಾಜು ಪ್ರಕಾರ ಜಿಡಿಪಿ ದರ ಶೇ. 7.4ರಷ್ಟಿರಬಹುದು. 2025-26ರಲ್ಲಿ ರಿಯಲ್ ಜಿಡಿಪಿ 201.90 ಲಕ್ಷ ಕೋಟಿ ರೂ ಇರಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಡಿಪಿ ಶೇ. 7.4ರಷ್ಟು ಹೆಚ್ಚಬಹುದು. ಬಜೆಟ್ಗೆ ಮುನ್ನ ಸರ್ಕಾರದ ಮೊದಲ ಅಡ್ವಾನ್ಸ್ ಎಸ್ಟಿಮೇಟ್ ವರದಿ ಜನವರಿ 7ರಂದು ಬಿಡುಗಡೆ ಆಗಿದೆ.

ನವದೆಹಲಿ, ಜನವರಿ 7: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ (Indian economy) ಶೇ. 7.4ರಷ್ಟು ಬೆಳೆಯುವ ಸಾಧ್ಯತೆ ಇದೆ ಎಂದು ಸರ್ಕಾರ ಅಂದಾಜು ಮಾಡಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಇಂದು (ಬುಧವಾರ) ಬಿಡುಗಡೆ ಮಾಡಿದ ತನ್ನ ಮೊದಲ ಮುಂಗಡ ಅಂದಾಜು ವರದಿಯಲ್ಲಿ ಈ ಲೆಕ್ಕಾಚಾರ ಹಾಕಿದೆ. 2024-25ರಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚಿತ್ತು. 2025-26ರಲ್ಲಿ ಶೇ. 7.4 ರಷ್ಟು ಹೆಚ್ಚಬಹುದು ಎಂದು ಸರ್ಕಾರ ನಿರೀಕ್ಷಿಸುತ್ತಿದೆ.
2011-12ರ ವರ್ಷದ ಆಧಾರದಲ್ಲಿ (base year) ಜಿಡಿಪಿ 201.90 ಲಕ್ಷ ಕೋಟಿ ರೂ ಮುಟ್ಟಬಹುದು ಎಂದು ಅಂದಾಜು ಮಾಡಲಾಗಿದೆ. 2024-25ರಲ್ಲಿ ಜಿಡಿಪಿ ಗಾತ್ರ 187.97 ಲಕ್ಷ ಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ. 7.4ರಷ್ಟು ಹೆಚ್ಚುವ ಸಾಧ್ಯತೆ ಕಾಣುತ್ತಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಇಂಡಿಯಾ ರೇಟಿಂಗ್ಸ್ ಪ್ರಕಾರ ಮುಂದಿನ ವರ್ಷ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9
ನಾಮಿನಲ್ ಜಿಡಿಪಿ ಶೇ. 8 ಹೆಚ್ಚಳ ಸಾಧ್ಯತೆ
ಪ್ರಸಕ್ತ ದರಗಳ ಆಧಾರದ ಜಿಡಿಪಿ (GDP at current prices) ಅಥವಾ ನಾಮಿನಲ್ ಜಿಡಿಪಿ 2025-26ರಲ್ಲಿ 357.14 ಲಕ್ಷ ಕೋಟಿ ರೂ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷದಲ್ಲಿ (2024-25) ಜಿಡಿಪಿ ಗಾತ್ರ 330.68 ಲಕ್ಷ ಕೋಟಿ ರೂ ಇತ್ತು. ಅಂದರೆ ನಾಮಿನಲ್ ಜಿಡಿಪಿ ಪ್ರಸಕ್ತ ವರ್ಷದಲ್ಲಿ ಶೇ. 8ರಷ್ಟು ಹೆಚ್ಚಬಹುದು ಎಂದು ಸರ್ಕಾರದ ಮೊದಲ ಅಡ್ವಾನ್ಸ್ಡ್ ಎಸ್ಟಿಮೇಟ್ಗಳಲ್ಲಿ ತಿಳಿಸಲಾಗಿದೆ.
ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಏಜೆನ್ಸಿ ಕೂಡ ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 7.4ರಷ್ಟು ಬೆಳೆಯಬಹುದು ಎಂದು ಅಂದಾಜಿಸಿದೆ. ಸರ್ಕಾರದ ಅಂದಾಜು ಕೂಡ ಇಷ್ಟೇ ಇದೆ. 2023-24ರಲ್ಲಿ ಭಾರತದ ಜಿಡಿಪಿ ಶೇ. 8.2, 2024-25ರಲ್ಲಿ ಶೇ. 6.5ರಷ್ಟು ವೃದ್ಧಿಸಿತ್ತು. 2025-26ರ ಮೊದಲ ಕ್ವಾರ್ಟರ್ನಲ್ಲಿ ಶೇ. 7.8, ಎರಡನೇ ಕ್ವಾರ್ಟರ್ನಲ್ಲಿ ಶೇ. 8.2ರಷ್ಟು ಜಿಡಿಪಿ ಹೆಚ್ಚಿದೆ. ಅಂದರೆ ಮೊದಲಾರ್ಧದಲ್ಲಿ ಆರ್ಥಿಕ ಬೆಳವಣಿಗೆ ಶೇ. 8ರ ದರದಲ್ಲಿ ಆಗಿದೆ. ಇನ್ನೆರಡು ಕ್ವಾರ್ಟರ್ಗಳಲ್ಲೂ ಉತ್ತಮ ಬೆಳವಣಿಗೆ ದಾಖಲಾದರೆ ಜಿಡಿಪಿ ಶೇ 8ರ ಆಸುಪಾಸಿನಲ್ಲಿ ಇದ್ದರೆ ಅಚ್ಚರಿ ಏನಿಲ್ಲ.
ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?
ಬಜೆಟ್ಗೆ ಸಂಬಂಧ ಇರುತ್ತೆ ಈ ಎಸ್ಟಿಮೇಟ್
ಸರ್ಕಾರ ಈ ವರ್ಷದ ಆರ್ಥಿಕ ಬೆಳವಣಿಗೆ ಎಷ್ಟಿರಬಹುದು ಎಂದು ಮುಂಗಡವಾಗಿ ಮಾಡುವ ಅಂದಾಜು ವರದಿಯ ದತ್ತಾಂಶವನ್ನು ಬಜೆಟ್ ಸಿದ್ಧತೆಗೆ ಬಳಸಲಾಗುತ್ತದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಇದು ಮೋದಿ 3.0 ಸರ್ಕಾರದ ಮೂರನೇ ಪೂರ್ಣಪ್ರಮಾಣದ ಬಜೆಟ್ ಆಗಿರುತ್ತದೆ.
India’s Reform Express continues to gain momentum. This is powered by the NDA Government’s comprehensive investment push and demand-led policies.
Be it infrastructure, manufacturing incentives, digital public goods or ‘Ease of Doing Business’, we are working to realise our…
— Narendra Modi (@narendramodi) January 7, 2026
ಪ್ರಧಾನಿ ಪ್ರತಿಕ್ರಿಯೆ
ತಮ್ಮ ಸರ್ಕಾರ ನಡೆಸಿರುವ ಮುಂಗಡ ಅಂದಾಜು ವರದಿಯ ಅಂಶಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಎನ್ಡಿಎ ಸರ್ಕಾರವು ಹೂಡಿಕೆಗೆ ಒತ್ತು ಕೊಟ್ಟಿರುವುದು ಮತ್ತು ಬೇಡಿಕೆ ಆದ್ಯತೆಯ ನೀತಿಗಳಿಂದ ಆರ್ಥಿಕತೆಗೆ ಪುಷ್ಟಿ ಸಿಕ್ಕಿದೆ. ಸುಧಾರಣಾ ಕ್ರಮಗಳು ಫಲಕೊಡುತ್ತಿವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:14 pm, Wed, 7 January 26




