ಅಮ್ಮನ ಎದೆಹಾಲು ಕುಡಿಯುವಾಗ ಮಗು ಸಾವು!
ಚಿಕ್ಕ ಮಕ್ಕಳನ್ನು ಎಷ್ಟು ಕಾಳಜಿಯಿಂದ ನೋಡಿಕೊಂಡರೂ ಕಡಿಮೆಯೇ. ಅದರಲ್ಲೂ ಮಗುವಿಗೆ 1 ತಿಂಗಳಾಗುವವರೆಗೂ ಅದಕ್ಕೂ ಈ ಪ್ರಪಂಚಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಮಗು ಹುಟ್ಟಿದ ಸಂಭ್ರಮದಲ್ಲಿದ್ದ ಕೊಯಮತ್ತೂರಿನ ದಂಪತಿಗೆ ಶಾಕ್ ಕಾದಿತ್ತು. ಮಗು ಜೋರಾಗಿ ಅಳುತ್ತಿದ್ದುದರಿಂದ ಹಸಿವಾಗಿರಬಹುದು ಎಂದು ತಾಯಿ ಆ ಮಗುವಿಗೆ ಎದೆಹಾಲು ಕೊಟ್ಟಿದ್ದರು. ಆದರೆ, ಹಾಲು ಕುಡಿಯುವಾಗ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಇದರಿಂದಾಗಿ ಸಂಭ್ರಮದಲ್ಲಿದ್ದ ಮನೆಯಲ್ಲಿ ದುರಂತ ಸಂಭವಿಸಿದೆ.

ಕೊಯಮತ್ತೂರು, ಜನವರಿ 9: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ತಾಯಿಯ ಎದೆ ಹಾಲು ಕುಡಿದ ಹೆಣ್ಣು ಮಗುವೊಂದು (Baby Death) ಕೆಮ್ಮಿನಿಂದಾಗಿ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದು ಇಡೀ ಕುಟುಂಬಕ್ಕೆ ತೀವ್ರ ದುಃಖ ಉಂಟುಮಾಡಿದೆ. ಮುರಳಿ ಕೊಯಮತ್ತೂರು ಜಿಲ್ಲೆಯ ರಾಮನಾಥಪುರಂನವರು. ಅವರು ಕೂಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ವರದಲಕ್ಷ್ಮಿ. ಅವರು ಮದುವೆಯಾಗಿ ಒಂದೂವರೆ ವರ್ಷಗಳಾಗಿತ್ತು.
9 ತಿಂಗಳು ತುಂಬಿದ ಗರ್ಭಿಣಿಯಾಗಿದ್ದ ವರದಲಕ್ಷ್ಮಿಗೆ ಹೆರಿಗೆ ನೋವು ಅನುಭವಿಸಿದ್ದರು. ಇದರ ನಂತರ ವರದಲಕ್ಷ್ಮಿ ಅವರನ್ನು ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಡಿಸೆಂಬರ್ 20ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದಾದ ನಂತರ, ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಮರಳಿದರು.
ಇದನ್ನೂ ಓದಿ: ತಾಯಿ ಮೇಲಿನ ದ್ವೇಷಕ್ಕೆ ಮುಗ್ಧ ಮಗುವಿನ ಕತ್ತು ಹಿಸುಕಿ ಕೊಲೆ!
ಆ ವೇಳೆ ಹೆಣ್ಣು ಮಗುವಿಗೆ ಹೊಟ್ಟೆ ನೋವು ಮತ್ತು ಕೆಲವು ಆರೋಗ್ಯ ಸಮಸ್ಯೆಗಳಿದ್ದವು ಎಂದು ಹೇಳಲಾಗಿದೆ. ಇದರಿಂದಾಗಿ, ಮಗು ಇದ್ದಕ್ಕಿದ್ದಂತೆ ಅಸ್ವಸ್ಥವಾಯಿತು. ತಕ್ಷಣ, ಮುರಳಿ ಮತ್ತು ಅವರ ಪತ್ನಿ ವರದಲಕ್ಷ್ಮಿ ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗುವಿಗೆ ವೈದ್ಯರು ಚಿಕಿತ್ಸೆ ನೀಡಿದರು. ಆ ನಂತರ, ಮಗು ಬಹಳ ಹೊತ್ತು ಅಳುತ್ತಿದ್ದ ಕಾರಣದಿಂದಾಗಿ ತಾಯಿ ವರದಲಕ್ಷ್ಮಿ ಮಗುವಿಗೆ ಹಾಲು ಕುಡಿಸಿದ್ದಾರೆ. ಆ ಸಮಯದಲ್ಲಿ, ಹಾಲು ಕುಡಿಯುತ್ತಿದ್ದ ಮಗು ಇದ್ದಕ್ಕಿದ್ದಂತೆ ಚಲನರಹಿತವಾಯಿತು.
ಇದನ್ನು ನೋಡಿ ತಾಯಿ ವರದಲಕ್ಷ್ಮಿ ಆಘಾತಕ್ಕೊಳಗಾದರು ಮತ್ತು ವೈದ್ಯರಿಗೆ ತಿಳಿಸಿದರು. ಅವರು ಮಗುವನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಆ ಮೇಲೆ ವರದಲಕ್ಷ್ಮಿ ಮತ್ತು ಅವರ ಪತಿ ಮುರಳಿ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿದಾಗ ಮಗು ಮೃತಪಟ್ಟಿದೆ ಎಂದು ಹೇಳಿದರು. ತಾಯಿ ಮಗುವಿಗೆ ಹಾಲುಣಿಸುತ್ತಿದ್ದಾಗ ಕೆಮ್ಮಿನಿಂದಾಗಿ ಉಸಿರುಗಟ್ಟಿ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಆಗಷ್ಟೇ ಹುಟ್ಟಿದ ಮಗುವನ್ನು ಕಸದ ತೊಟ್ಟಿಗೆ ಎಸೆದ ತಾಯಿ!
ನಂತರ, ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ತಾಯಿಯ ಹಾಲು ಕುಡಿಯುವಾಗಲೇ ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಆ ಕುಟುಂಬ ಮತ್ತು ಸುತ್ತಲಿನ ಗ್ರಾಮದಲ್ಲಿ ದುಃಖವನ್ನು ಉಂಟುಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
