ಕೋಲ್ಕತ್ತಾ, ನವೆಂಬರ್ 21: ಯಾವುದೇ ಸವಾಲನ್ನು ಎದುರಿಸದೆ ಬಿಡಲು ನನಗೆ ಸಾಧ್ಯವಿಲ್ಲ. ಸವಾಲುಗಳನ್ನು ಎದುರಿಸುವುದೇ ನನ್ನ ಸ್ವಭಾವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಐಐಟಿ ಖರಗ್ಪುರದ 75ನೇ ವರ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. “ಸವಾಲಿಗೆ ಸವಾಲು ಹಾಕದೆ ನಾನು ಸುಮ್ಮನಿರಲು ಸಾಧ್ಯವಿಲ್ಲ ಅದು ನನ್ನ ಸ್ವಭಾವ” ಎಂದು ತಮ್ಮ ಜೀವನದ ನಿಲುವನ್ನು ಹಂಚಿಕೊಂಡರು.
ಯುವಕರು ತಮ್ಮ ಕನಸುಗಳಿಗೆ ಮಿತಿ ಹಾಕಿಕೊಳ್ಳಬಾರದು. ಹೊಸ ಆಲೋಚನೆಗಳು ಮತ್ತು ಆವಿಷ್ಕಾರಗಳ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಮುಂದಿನ ಎರಡು ದಶಕಗಳು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ನಿರ್ಣಾಯಕವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಐಐಟಿ ಖರಗ್ಪುರದ 75ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನಡೆದ ಪ್ಲಾಟಿನಂ ಜುಬಿಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ದೊಡ್ಡ ಗುರಿಗಳನ್ನು ಹೊಂದುವಂತೆ ಕರೆ ನೀಡಿದರು. ದೇಶದ ಮೊದಲ ಐಐಟಿಯಾದ ಖರಗ್ಪುರ ಸಂಸ್ಥೆಯ 75 ವರ್ಷಗಳ ಸಾಧನೆಯನ್ನು ಶ್ಲಾಘಿಸಿದ ಮೋದಿ, ಭಾರತವು ತನ್ನ ಚಿಂತನೆಯ ಮಿತಿಗಳನ್ನು ಮುರಿದಾಗ ಮಾತ್ರ ನಿಜವಾದ ಸಾಮರ್ಥ್ಯವನ್ನು ಗುರುತಿಸಲು ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ:
ಕಳೆದ 12ರಿಂದ 13 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಹೇಳಿದರು. ಈ ಸಾಧನೆಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಜನರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳು ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೆ ಬಡತನ ನಿರ್ಮೂಲನೆ ಕುರಿತು ಘೋಷಣೆಗಳನ್ನು ಮಾಡಲಾಗುತ್ತಿತ್ತೇ ಹೊರತು, ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಕ್ರಮಗಳು ಸಾಕಷ್ಟು ಪರಿಣಾಮಕಾರಿಯಾಗಿರಲಿಲ್ಲ ಎಂದು ಹಿಂದಿನ ಸರ್ಕಾರಗಳ ಆಡಳಿತವನ್ನು ಟೀಕಿಸಿದರು. ಕೆಂಪುಕೋಟೆಯಿಂದ ಬಡವರಿಗೆ ಶೌಚಾಲಯ ನಿರ್ಮಿಸುವುದಾಗಿ ಘೋಷಿಸಿದಾಗ ಸಂಸತ್ತಿನಲ್ಲಿ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ ಬಡ ಮಹಿಳೆಯರು ಮತ್ತು ಕುಟುಂಬಗಳಿಗೆ ಶೌಚಾಲಯದ ಅಗತ್ಯ ಎಷ್ಟು ಮುಖ್ಯ ಎಂಬುದನ್ನು ಅವರು ಅರ್ಥಮಾಡಿಕೊಂಡಿರಲಿಲ್ಲ ಎಂದು ಹೇಳಿದರು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ತಡವಾಗಿ ಹೆಜ್ಜೆ ಇಟ್ಟಿದೆ ಎಂಬ ಟೀಕೆಗಳಿದ್ದರೂ, ಸರ್ಕಾರ ಸೆಮಿಕಂಡಕ್ಟರ್ ಮಿಷನ್ ಆರಂಭಿಸಿತು. ಈಗ ದೇಶದಲ್ಲಿ ಹಲವು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳು ಸ್ಥಾಪನೆಯಾಗುತ್ತಿವೆ ಮತ್ತು ಭಾರತ ಚಿಪ್ಗಳನ್ನು ರಫ್ತು ಮಾಡುವ ಹಂತಕ್ಕೆ ಬಂದಿದೆ ಎಂದು ಪ್ರಧಾನಿ ಹೇಳಿದರು.
ಬಾಹ್ಯಾಕಾಶ ಕ್ಷೇತ್ರವನ್ನೂ ಖಾಸಗಿ ಕಂಪನಿಗಳಿಗೆ ಮುಕ್ತಗೊಳಿಸಿರುವುದರಿಂದ ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂದರು. ಐಐಟಿ ಖರಗ್ಪುರದ ಹಳೆಯ ವಿದ್ಯಾರ್ಥಿ ಪವನ್ ಕುಮಾರ್ ಚಂದನಾ ಅವರ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಸಾಧನೆಯನ್ನು ಉದಾಹರಣೆಯಾಗಿ ನೀಡಿದರು. ಭಾರತದ ಮೊದಲ ಖಾಸಗಿ ರಾಕೆಟ್ ಅಭಿವೃದ್ಧಿಪಡಿಸುವಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದರು.
ಮುಂದಿನ 20 ವರ್ಷಗಳು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಅವಧಿಯಾಗಲಿವೆ. 2047ರ ವೇಳೆಗೆ ನಿಮ್ಮಲ್ಲಿ ಹಲವರು ಪ್ರಮುಖ ನಾಯಕತ್ವದ ಸ್ಥಾನಗಳಲ್ಲಿರುತ್ತೀರಿ. ಅಷ್ಟರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
‘ನೇಷನ್ ಫಸ್ಟ್’ ಅಂದರೆ ರಾಷ್ಟ್ರ ಮೊದಲು ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಐಐಟಿ ಖರಗ್ಪುರದ 75 ವರ್ಷಗಳ ಸಂಭ್ರಮದ ಅಂಗವಾಗಿ ಸ್ಮರಣಾರ್ಥ ಬೆಳ್ಳಿ ನಾಣ್ಯವನ್ನೂ ಬಿಡುಗಡೆ ಮಾಡಿದರು. 1951ರಲ್ಲಿ ಸ್ಥಾಪನೆಯಾದ ಐಐಟಿ ಖರಗ್ಪುರ, ದೇಶದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆಯಾಗಿದೆ. ಸ್ವಾತಂತ್ರ್ಯಾನಂತರ ಭಾರತದ ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳ ಬೆಳವಣಿಗೆಯಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ